
Video: ಕೇದಾರನಾಥ ದೇಗುಲದಲ್ಲಿ ಪಹಾಡಿ ಉಡುಪು ತೊಟ್ಟು ಪ್ರಧಾನಿ ಮೋದಿ ಪೂಜೆ
ಕೇದಾರನಾಥ, ಅಕ್ಟೋಬರ್ 21: ಕೇದಾರನಾಥ ದೇವಸ್ಥಾನದಲ್ಲಿ ವಿಶೇಷ ಉಡುಗೆ ತೊಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿ ಪೂಜೆ ಸಲ್ಲಿಸಿದರು. ಉತ್ತರಾಖಂಡದ ಪವಿತ್ರ ದೇಗುಲದಲ್ಲಿ ಹಿಮಾಚಲ ಪ್ರದೇಶದ ಮಹಿಳೆಯರು ಕೈಯಿಂದ ಮಾಡಿದ ಸಾಂಪ್ರದಾಯಿಕ ಪಹಾಡಿ ಉಡುಪನ್ನು ಧರಿಸಿದ ಪ್ರಧಾನಿ ಪೂಜೆ ನೆರವೇರಿಸಿದರು. ಮೋದಿ ಧರಿಸಿದ ಉಡುಪು ಜನಪ್ರಿಯವಾಗಿದ್ದು 'ಚೋಳ ಡೋರಾ' ಎಂದು ಕರೆಯಲಾಗುತ್ತದೆ.
ಉತ್ತರಾಖಂಡಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ 3400 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ವಾಗತಿಸಿದರು. ಇದೇ ವೇಳೆ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಜೊತೆಗಿದ್ದರು.
ಗುಜರಾತ್ ಚುನಾವಣೆಗೂ ಮುನ್ನವೇ ಪ್ರಧಾನಿ ಮೋದಿ ಕೇದಾರನಾಥ-ಬದರಿನಾಥ ದೇವಸ್ಥಾನಕ್ಕೆ ಭೇಟಿ
ಕೇದಾರನಾಥ ರೋಪ್‌ವೇ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಆದಿ ಗುರುಗಳಾದ ಶಂಕರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ತದನಂತರದಲ್ಲಿ ಮಂದಾಕಿನಿ ಅಷ್ಟಪಥ್ ಮತ್ತು ಸರಸ್ವತಿ ಅಷ್ಟಪಥ್ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಿದ್ದಾರೆ. ಮುಂದೆ ಬದರಿನಾಥಕ್ಕೆ ತೆರಳಲಿರುವ ಪ್ರಧಾನಿ, ಬದರಿನಾಥ ದೇವಸ್ಥಾನದಲ್ಲಿ ಶ್ರೀಗಳ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ.
|
ರಸ್ತೆ ಮತ್ತು ರೋಪ್‌ವೇ ಯೋಜನೆಗೆ ಶಂಕುಸ್ಥಾಪನೆ
ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್‌ವೇ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ, ನದಿ ತೀರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಪ್ಲಾಜಾ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

ಗೌರಿಕುಂಡ್ ಪ್ರದೇಶದಿಂದ ಕೇದಾರನಾಥಕ್ಕೆ ಸಂಪರ್ಕ
ಕೇದಾರನಾಥದಲ್ಲಿ ರೋಪ್‌ವೇ ಸುಮಾರು 9.7 ಕಿಮೀ ಉದ್ದವಿರುತ್ತದೆ. ಇದು ಗೌರಿಕುಂಡ್ ಅನ್ನು ಕೇದಾರನಾಥಕ್ಕೆ ಸಂಪರ್ಕಿಸುತ್ತದೆ. ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6-7 ಗಂಟೆಗಳಿಂದ ಕೇವಲ 30 ನಿಮಿಷಗಳಿಗೆ ತಗ್ಗಲಿದೆ. ಹೇಮಕುಂಡ್ ರೋಪ್‌ವೇ ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರುತ್ತದೆ. ಇದು ಪ್ರಯಾಣದ ಸಮಯವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‌ಗೆ ಗೇಟ್‌ವೇ ಆಗಿರುವ ಘಂಗಾರಿಯಾವನ್ನು ಈ ರೋಪ್‌ವೇ ಸಂಪರ್ಕಿಸುತ್ತದೆ..

ರೋಪ್‌ವೇಗಳ ಅಭಿವೃದ್ಧಿಗೆ 2430 ಕೋಟಿ ರೂ. ಖರ್ಚು
ಉತ್ತರಾಖಂಡದಲ್ಲಿ ರೋಪ್‌ವೇಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸುಮಾರು 2,430 ಕೋಟಿ ರೂಪಾಯಿ ಅನ್ನು ಖರ್ಚು ಮಾಡಲಾಗುತ್ತಿದೆ. ಈ ರೋಪ್‌ವೇಗಳು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದ್ದು, ಇದು ಸುರಕ್ಷಿತ ಮತ್ತು ಸ್ಥಿರವಾದ ಸಾರಿಗೆ ವಿಧಾನವನ್ನು ಒದಗಿಸುತ್ತದೆ. ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಇದು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಶಕ್ತಿ ತುಂಬುವುದರ ಜೊತೆಗೆ ಬಹು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ರಸ್ತೆ ಅಗಲೀಕರಣ ಯೋಜನೆಗಳಿಗೆ ಶಂಕುಸ್ಥಾಪನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಯ ಸಂದರ್ಭದಲ್ಲಿ ಸುಮಾರು 1000 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಗಲೀಕರಣ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಮಾಣದಿಂದ ಮಾಣ ಪಾಸ್ (NH07) ಮತ್ತು ಜೋಶಿಮಠದಿಂದ ಮಲಾರಿ (NH107B) ಎರಡು ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ನಮ್ಮ ಗಡಿ ಪ್ರದೇಶಗಳಿಗೆ ಕೊನೆಯ ಮೈಲಿ ಸರ್ವಋತು ರಸ್ತೆ ಸಂಪರ್ಕ ಒದಗಿಸುವ ಮತ್ತೊಂದು ಹೆಜ್ಜೆಯಾಗಿದೆ.
ಕೇದಾರನಾಥ ಮತ್ತು ಬದರಿನಾಥ ಹಿಂದೂಗಳ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಈ ಪ್ರದೇಶವು ಪೂಜ್ಯ ಸಿಖ್ ಯಾತ್ರಿಕರ ತಾಣಗಳಲ್ಲಿ ಒಂದಾದ ಹೇಮಕುಂಡ್ ಸಾಹಿಬ್‌ಗೆ ಹೆಸರುವಾಸಿಯಾಗಿದೆ. ಸಂಪರ್ಕ ಯೋಜನೆಗಳು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಪ್ರವೇಶವನ್ನು ಸುಲಭಗೊಳಿಸಲು ಮತ್ತು ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.