Vande Bharat Express: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿಗೆ ಪ್ರಧಾನಿ ಚಾಲನೆ, 2ಗಂಟೆ ಸಮಯ ಉಳಿತಾಯ
New Vande Bharat Express Train: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಶನಿವಾರ ವಾರಾಣಸಿ ಕ್ಷೇತ್ರದಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಈ ಹೊಸ ರೈಲುಗಳ ಪೈಕಿ ಬೆಂಗಳೂರು-ಎರ್ನಾಕುಲಂ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ಕೂಡ ಸೇರಿದ್ದು, ಇದು ಪ್ರಯಾಣದ ಸಮಯ ಎರಡು ಗಂಟೆ ಇಳಿಕೆ ಮಾಡುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ರೈಲು ಸೇವೆಗಳ ಪ್ರಾರಂಭದಿಂದ ಪ್ರಮುಖ ನಿಲ್ದಾಣಗಳ ನಡುವಿನ ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಈ ರೈಲು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಒಟ್ಟು ಮೂರು ರಾಜ್ಯಗಳನ್ನು ಸಂಪರ್ಕಿಸುತ್ತದೆ. ವಿಶೇಷವಾಗಿ ಬೆಂಗಳೂರು ಮತ್ತು ಎರ್ನಾಕುಲಂ ನಡುವಿನ ಪ್ರಯಾಣದ ಅವಧಿ ಸುಮಾರು 2 ಗಂಟೆಗಳಷ್ಟು ಕಡಿಮೆ ಆಗಲಿದೆ.

ಮೊದಲ ಅಂತಾರರಾಜ್ಯ ಅರೆ-ಹೈ-ಸ್ಪೀಡ್ ಪ್ರೀಮಿಯಂ ರೈಲು
ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಮೊದಲ ಅಂತಾರರಾಜ್ಯ ಅರೆ-ಹೈ-ಸ್ಪೀಡ್ ಪ್ರೀಮಿಯಂ ರೈಲು ಸೇವೆಯಾಗಿದೆ. ಈ ಹೊಸ ರೈಲು ಪ್ರಯಾಣಿಕರಿಗೆ ವೇಗ, ಆರಾಮ ಮತ್ತು ಸುರಕ್ಷತೆಯ ಸಂಯೋಜನೆಯನ್ನು ಒದಗಿಸುತ್ತದೆ. ಈ ರೈಲಿನ ಅಂತಿಮ ವೇಳಾಪಟ್ಟಿಯಲ್ಲಿ ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಸಮಯ, ರೈಲು ಸಂಖ್ಯೆ, ತಲುಪುವ ಸಮಯ, ನಿಲ್ದಾಣಗಳು ಹಾಗೂ ಒಟ್ಟಾರೆ ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ಪ್ರಮುಖ ನಿಲ್ದಾಣಗಳು ಮತ್ತು ವೇಳಾಪಟ್ಟಿ
ಈ ರೈಲು ಮಾರ್ಗದಲ್ಲಿ ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ, ಕೃಷ್ಣರಾಜಪುರಂ ಮತ್ತು ಬೆಂಗಳೂರು ಪ್ರಮುಖ ನಿಲುಗಡೆಯ ರೈಲು ನಿಲ್ದಾಣಗಳಾಗಿವೆ. 26651 ಮತ್ತು 26652 ಸಂಖ್ಯೆಯ ವಂದೇ ಭಾರತ್ ರೈಲು ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡಲು ಸಜ್ಜಾಗಿದೆ. ನವೆಂಬರ್ 11ರಿಂದ ಸೇವೆ ಆರಂಭಿಸಲಿದೆ.
ರೈಲು ವೇಳಾಪಟ್ಟಿ ಮಾಹಿತಿ
ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು 26651) ಪ್ರತಿದಿನ (ಬುಧವಾರ ಹೊರತುಪಡಿಸಿ) ಬೆಳಗ್ಗೆ 5.25 ಗಂಟೆಗೆ ಬೆಂಗಳೂರಿನಿಂದ ಹೊರಡುತ್ತದೆ. ಮಧ್ಯಾಹ್ನ 1.50 ಗಂಟೆಗೆ ಎರ್ನಾಕುಲಂ ತಲುಪುತ್ತದೆ. ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (26652) ಮಧ್ಯಾಹ್ನ 2.20ಗಂಟೆಗೆ ಹೊರಟು ರಾತ್ರಿ 11.00 ಗಂಟೆಗೆ ಬೆಂಗಳೂರು ಬಂದು ಸೇರುತ್ತದೆ.
माननीय प्रधानमंत्री श्री @narendramodi जी ने 4 नई #VandeBharatExpress ट्रेनों को हरी झंडी दिखाकर रवाना किया।#विकसित_बनारस pic.twitter.com/eNGsaytaqH
— Ministry of Railways (@RailMinIndia) November 8, 2025
ಒಟ್ಟು 8 ಬೋಗಿಗಳ ವಂದೇ ಭಾರತ್
ಈ ಅಂತಾರಾಜ್ಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಟ್ಟು 8 ಬೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ನವೆಂಬರ್ 11ರಿಂದ ನಿಯಮಿತ ಸೇವೆ ಪ್ರಯಾಣಿಕರಿಗೆ ಸಿಗುತ್ತದೆ. ಈ ರೈಲು ವಾರದಲ್ಲಿ 6 ದಿನಗಳು (ಬುಧವಾರ ಹೊರತುಪಡಿಸಿ) ಸಂಚರಿಸುತ್ತದೆ. ಈ ಹೊಸ ರೈಲು ಸೇವೆ ಮೂರು ರಾಜ್ಯಗಳ ಪ್ರಯಾಣಿಕರಿಗೆ ವೇಗದ ಮತ್ತು ಸುಧಾರಿತ ಸಾರಿಗೆ ಆಯ್ಕೆಯನ್ನು ಒದಗಿಸುವ ನಿರೀಕ್ಷೆ ಇದೆ. ಮೂರು ರಾಜ್ಯಗಳಲ್ಲಿ ಹಾದುವ ಹೋಗುವ ಆಯಾ ಭಾಗಗಳಲ್ಲಿ ಹೆಚ್ಚುವರಿ ಸಾರಿಗೆ ಸೇವೆ, ವೇಗದ ಹಾಗೂ ಸುರಕ್ಷಿತ ಸೇವೆ ಸಿಕ್ಕಂತಾಗಿದೆ. ಇದರಿಂದ ಕರ್ನಾಟಕ, ಕೇರಳ, ತಮಿಳುನಾಡು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಿದೆ.












Click it and Unblock the Notifications