Narendra Modi: ಅವಿಶ್ವಾಸ ನಿರ್ಣಯ ನಮಗೆ ಯಾವಾಗಲು ಅದೃಷ್ಟ: ವಿಪಕ್ಷಗಳಿಗೆ ಮೋದಿ ತಿರುಗೇಟು
ಮಣಿಪುರ ಹಿಂಸಾಚಾರ ಕುರಿತಂತೆ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಗಳಿಗೆ ಧನ್ಯವಾದ ಎಂದು ಕೂಡ ಹೇಳಿದರು.
ಕೇಂದ್ರ ಸರ್ಕಾರದ ಮೇಲೆ ದೇಶದ ಜನತೆಗೆ ವಿಶ್ವಾಸವಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ, ಬಿಜೆಪಿ ಎಲ್ಲಾ ದಾಖಲೆ ಮುರಿದು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ವ್ಯಂಗ್ಯವಾಡಿದ್ದು, 2028ರಲ್ಲೂ ಅವರು ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ಹೇಳಿದರು.

ವಿರೋಧ ಪಕ್ಷಗಳ ನಾಯಕರೇ ಫೀಲ್ಡಿಂಗ್ ವ್ಯವಸ್ಥೆ ಮಾಡಿದ್ದು, ಆದರೆ ನಮ್ಮ ಕಡೆಯಿಂದ ಸಿಕ್ಸ್, ಫೋರ್ಗಳು ಹೋದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿಪಕ್ಷ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಅವರು ಬರೀ ನೋಬಾಲ್ ಎಸೆಯುತ್ತಿದ್ದಾರೆ. ನಮ್ಮ ಸದಸ್ಯರು ಶತಕ ಬಾರಿಸುತ್ತಿದ್ದಾರೆ. ಎಲ್ಲರೂ ಶ್ರಮ ಪಡಿ, 2018ರಲ್ಲೂ ಇದನ್ನು ಹೇಳಿದ್ದೇ, ನಿಮಗೆ ತಯಾರಿ ಮಾಡಿಕೊಳ್ಳಲು 5 ವರ್ಷ ನೀಡಿದ್ದೇನೆ, ಏನು ದರಿದ್ರ ನೋಡಿ ಇನ್ನೂ ನೀವು ತಯಾರಿ ಮಾಡಿಕೊಂಡಿಲ್ಲ ಎಂದು ವಿಪಕ್ಷಗಳ ಬಗ್ಗೆ ವ್ಯಂಗ್ಯವಾಡಿದರು.
2024ರಲ್ಲೂ ಅಧಿಕಾರಕ್ಕೆ ಬರುತ್ತೇವೆ
ವಿಪಕ್ಷಗಳ ವಿರುದ್ಧ ಟೀಕೆಗಳನ್ನು ಮುಂದುವರೆಸಿದ ಅವರು 2024ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. ವಿರೋಧ ಪಕ್ಷಗಳು ಮಾತನಾಡುತ್ತಿರುವುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ವಿಪಕ್ಷಗಳು ಯಾವಾಗಲೂ ನೆಗೆಟಿವ್ ಆಗಿಯೇ ಮಾತನಾಡುತ್ತಾರೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದರು.
1999ರಲ್ಲೂ ವಿಪಕ್ಷಗಳು ಅವಿಶ್ವಾಸ ನಿರ್ಣಯವನ್ನ ಮಂಡಿಸಿದ್ದರು. ಶರದ್ ಪವಾರ್ ಅವರು ನೇತೃತ್ವದಲ್ಲಿ ಅವಿಶ್ವಾಸ ಮಂಡನೆ ಮಾಡಲಾಗಿತ್ತು. 2003ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗಲೂ ಮಂಡಿಸಲಾಗಿತ್ತು. ಆಗ ಸೋನಿಯಾ ಗಾಂಧಿ ವಿಪಕ್ಷ ನಾಯಕರಾಗಿದ್ದರು. 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ವಿಪಕ್ಷ ನಾಯಕಾರಿದ್ದರು. ಅಧೀರ್ ರಂಜನ್ ಅವರಿಗೆ ಮಾತನಾಡಲು ವಿಪಕ್ಷ ನಾಯಕರು ಬಿಡುತ್ತಿಲ್ಲ, ಕಾಂಗ್ರೆಸ್ ಅವರನ್ನು ಮೂಲೆಗುಂಪು ಮಾಡಿದೆ, ಬಹುಶಃ ಕೋಲ್ಕತ್ತದಿಂದ ಕರೆ ಬಂದಿರಬೇಕು ಎಂದರು.
ವಿಪಕ್ಷಗಳ ಬಗ್ಗೆ ಬಡವರ ಹಸಿವಿನ ಬಗ್ಗೆ ಚಿಂತೆಯಿಲ್ಲ, ನಿಮಗೆ ಅಧಿಕಾರದ ಬಗ್ಗೆ ಮಾತ್ರ ಚಿಂತೆ. ನೀವು ಯುವಕರ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ, ಆದರೆ ನಿಮ್ಮ ಭವಿಷ್ಯದ ಬಗ್ಗೆ ಮಾತ್ರ ಎಂದು ಮೋದಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications