ಮೋದಿ ನೀಡಿದ ಪರೋಕ್ಷ ಎಚ್ಚರಿಕೆಗೆ ಬಿಎಸ್ವೈ, ಈಶ್ವರಪ್ಪ ಎಚ್ಚೆತ್ತುಕೊಳ್ಳುವರೇ?
ಒಳಜಗಳ ಬಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿಯತ್ತಿನ ಕೆಲಸ ಮಾಡಿ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರಿಗೆ, ದಕ್ಷಿಣಭಾರತದ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಎಚ್ಚರಿಕೆ.
ನವದೆಹಲಿ, ಏ 1: ದಕ್ಷಿಣ ಭಾರತದ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಸಭಾ/ರಾಜ್ಯಸಭಾ ಸದಸ್ಯರಿಗೆ ರಾಜಕೀಯ ಪಾಠದ ಜೊತೆಗೆ ಶಿಸ್ತಿನ ಪಾಠದ ಖಡಕ್ ಭೋದನೆಯನ್ನೂ ಮಾಡಿದ್ದಾರೆ.
ಶುಕ್ರವಾರ (ಮಾ 31) ಬೆಳಗ್ಗೆ ಕರೆಯಲಾಗಿದ್ದ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಒರಿಸ್ಸಾದ ಸಂಸದರಿಗೆ ದಕ್ಷಿಣದಲ್ಲಿ ಪಕ್ಷದ ಬಲವರ್ಧನೆಗೆ ಹೇಗೆ ಒತ್ತು ನೀಡಬೇಕು ಎನ್ನುವುದರ ಬಗ್ಗೆ ಪ್ರಧಾನಿ ಭಾಷಣ ಮಾಡಿದ್ದಾರೆ.
ಜೊತೆಗೆ, ಒಳಜಗಳ ಬಿಟ್ಟು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿಯತ್ತಿನ ಕೆಲಸ ಮಾಡಿ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರಿಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.
ಇನ್ನು 12-18 ತಿಂಗಳ ಅವಧಿಯಲ್ಲಿ ನಡೆಯಲಿರುವ ದೇಶದ ವಿವಿಧ ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ಮುನ್ನ ಮೋದಿ ಆಯಾಯ ರಾಜ್ಯಗಳ ಸಂಸದರನ್ನು ಕರೆಸಿ ಮಾತನಾಡುತ್ತಿದ್ದಾರೆ. ಈಗಾಗಲೇ ಗುಜರಾತ್ ಮತ್ತು ರಾಜಸ್ಥಾನದ ಸಂಸದರನ್ನು ಕರೆಸಿ ಮೋದಿ ಭಾಷಣ ಮಾಡಿದ್ದಾಗಿದೆ.
ಕೇಂದ್ರ ನೀಡುತ್ತಿರುವ ಅನುದಾನವನ್ನು ಬಳಸಿಕೊಂಡು ತಮಗೆ ಬೇಕಾದ ಹಾಗೆ ಹೆಸರು ಇಟ್ಟುಕೊಂಡು ಯೋಜನೆಯ ಲಾಭವನ್ನು ಪಡೆದುಕೊಳ್ಳುವ ವಿರೋಧ ಪಕ್ಷದವರ ಬಗ್ಗೆ ಎಚ್ಚರ.. ಎಂದು ಮೋದಿ ' ಎಚ್ಚರಿಸಿದ್ದಾರೆ' ಎನ್ನುವ ಮಾಹಿತಿಯಿದೆ.

ಬಿಎಸ್ವೈ, ಶೋಭಾ, ರಾಮುಲು ಗೈರು
ಡಾ. ಸುಬ್ರಮಣಿಯನ್ ಸ್ವಾಮಿ, ಬಂಡಾರು ದತ್ತಾತ್ರೇಯ, ಸದಾನಂದ ಗೌಡ, ಅನಂತ್ ಕುಮಾರ್, ಪ್ರಲ್ಹಾದ್ ಜೋಷಿಯಾದಿಯಾಗಿ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಯಡಿಯೂರಪ್ಪ, ಶ್ರೀರಾಮುಲು ಮತ್ತು ಶೋಭಾ ಕರಂದ್ಲಾಜೆ ಸಭೆಯಲ್ಲಿ ಗೈರಾಗಿದ್ದರು.

ಕೇಂದ್ರದ ಅನುದಾನ ಸಮರ್ಥವಾಗಿ ಬಳಸಿಕೊಳ್ಳಿ
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯವು ಕೇಂದ್ರ ನೀಡುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಜೊತೆಗೆ ಅಭಿವೃದ್ದಿಗೆ ಕೇಂದ್ರದ ಪಾಲು ಏನು ಎನ್ನುವುದನ್ನು ಜನತೆಗೆ ಮನದಟ್ಟು ಮಾಡಬೇಕು. ಇದಕ್ಕೆ ಆಯಾಯ ರಾಜ್ಯಗಳ ಸಂಸದರ ಪಾತ್ರ ಬಹು ಮುಖ್ಯವಾದದ್ದು - ಮೋದಿ.

ಬಿಎಸ್ವೈ, ಈಶ್ವರಪ್ಪಗೆ ಪರೋಕ್ಷ ಎಚ್ಚರಿಕೆ
ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟು ಪ್ರದರ್ಶಿಸಬೇಕು. ನೀವು ನೀವೇ ಜಗಳವಾಡಿಕೊಂಡರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ಒಳಜಗಳ ಬಿಟ್ಟು ಪಕ್ಷಕ್ಕಾಗಿ ದುಡಿಯಿರಿ ಎಂದು ಮೋದಿ ಪರೋಕ್ಷವಾಗಿ ಬಿಎಸ್ವೈ ಮತ್ತು ಈಶ್ವರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
ನಿಮ್ಮ ನಿಮ್ಮ ಕ್ಷೇತ್ರಗಳಿಗೆ ತೆರಳಿ ಪಕ್ಷದ ಪರವಾಗಿ ಪ್ರಚಾರ ಆರಂಭಿಸಿ. ಬೂತ್ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಕೇಂದ್ರದ ಮುದ್ರಾ ಯೋಜನೆ, ಫಸಲ್ ಭೀಮಾ, ಉಜ್ವಲ ಯೋಜನೆ ಮುಂತಾದುವುದರ ಬಗ್ಗೆ ಜನಜಾಗೃತಿ ಮೂಡಿಸಿ - ಮೋದಿ.

ರೈತರ ಸಾಲ - ಉದಾಸಿ ಸಲಹೆ
ರೈತರಿಗೆ ನೀಡಲಾಗಿರುವ ಸಾಲವನ್ನು ವಿಜಯಾ ಬ್ಯಾಂಕ್ ರೀತಿಯಲ್ಲಿ ಒನ್ ಟೈಮ್ ಸೆಟ್ಲ್ ಮೆಂಟ್ ಮೂಲಕ ಕ್ಲೋಸ್ ಮಾಡುವ ಸೌಲಭ್ಯವನ್ನು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ನೀಡಬೇಕು ಎನ್ನುವ ಸಂಸದ ಉದಾಸಿಯವರ ಸಲಹೆಗೆ ಪ್ರಧಾನಿ ಸಹಮತ ವ್ಯಕ್ತ ಪಡಿಸಿದರು.












Click it and Unblock the Notifications