ಮಾಜಿ ಸಿಜೆಐ ಆರ್‌ಸಿ ಲಾಹೋಟಿ ಅಗಲಿಕೆಯನ್ನು ಸ್ಮರಿಸಿದ ಪ್ರಧಾನಿ ಮೋದಿ
ನವದೆಹಲಿ, ಮಾರ್ಚ್ 24: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಮೇಶ್ ಚಂದ್ರ ಲಾಹೋಟಿ ಸಾವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ನ್ಯಾಯಾಂಗ ವ್ಯವಸ್ಥೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡಿದ್ದಾರೆ.
"ಮಾಜಿ ಸಿಜೆಐ ಆರ್‌ಸಿ ಲಹೋಟಿ ಜಿ ಅವರ ನಿಧನದಿಂದ ದುಃಖವಾಗಿದೆ. ನ್ಯಾಯಾಂಗಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ಸ್ಮರಿಸಲಾಗುವುದು ಮತ್ತು ಹಿಂದುಳಿದವರಿಗೆ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಒತ್ತು ನೀಡಲಾಗುತ್ತದೆ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಸಂತಾಪಗಳು. ಓಂ ಶಾಂತಿ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ 81 ವರ್ಷದ ರಮೇಶ್ ಚಂದ್ರ ಲಾಹೋಟಿ ವಿಧಿವಶರಾಗಿರುವ ಬಗ್ಗೆ ಸಂಬಂಧಿಕರು ಸ್ಪಷ್ಟಪಡಿಸಿದ್ದಾರೆ. ಮಾಜಿ ನ್ಯಾಯಮೂರ್ತಿ ಲಹೋಟಿ ಅವರನ್ನು ಜೂನ್ 1, 2004ರಂದು ಭಾರತದ 35ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಅವರು ನವೆಂಬರ್ 1, 2005 ರಂದು ನಿವೃತ್ತರಾಗಿದ್ದರು.

ಆರ್ ಸಿ ಲಾಹೋಟಿ ಅಗಲಿಕೆಗೆ ಸಂತಾಪ:
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಸಿ ಲಾಹೋಟಿ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ದತ್ತಾತ್ರೇಯ ಹೊಸಬಾಳೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ವಿನಮ್ರ ಹಿನ್ನೆಲೆಯಿಂದ ಬೆಳೆದ ಅವರು ತಮ್ಮ ಶ್ರದ್ಧೆ, ವೃತ್ತಿಪರ ಪ್ರಾಮಾಣಿಕತೆ ಮತ್ತು ಕಾನೂನು ಹಾಗೂ ಸಮಾಜದ ಆಳವಾದ ಅಧ್ಯಯನದಿಂದಾಗಿ ದೇಶದ ನ್ಯಾಯಾಂಗದ ಉನ್ನತ ಸ್ಥಾನವನ್ನು ತಲುಪಿದರು. ಅವರ ಸೌಮ್ಯವಾದ ಆದರೆ ದೃಢವಾದ ವಿಧಾನ ಮತ್ತು ಸಹಾನುಭೂತಿಗಾಗಿ ಅವರು ನೆನಪಿನಲ್ಲಿ ಉಳಿಯುತ್ತಾರೆ. ನ್ಯಾಯಮೂರ್ತಿ ಲಾಹೋಟಿ ಅವರ ಕುಟುಂಬ ಸದಸ್ಯರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಅಗಲಿದ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲೆಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ," ಎಂದಿದ್ದಾರೆ.
ಹುಟ್ಟು ಮತ್ತು ಜೀವನ ಪರಿಚಯ:
ಮಾಜಿ ಮುಖ್ಯ ನ್ಯಾಯಮೂರ್ತಿ ರಮೇಶ್ ಚಂದ್ರ ಲಾಹೋಟಿಯವರು 1940ರ ನವೆಂಬರ್ 1ರಂದು ಜನಿಸಿದರು. 1960ರಲ್ಲಿ ಗುಣ ಜಿಲ್ಲೆಯ ಬಾರ್ ಕೌನ್ಸಿಲ್ ಸೇರಿದರು. 1962ರಲ್ಲಿ ವಕೀಲರಾಗಿ ಸೇರಿಕೊಂಡರು. ಏಪ್ರಿಲ್ 1977ರಲ್ಲಿ ಅವರನ್ನು ನೇರವಾಗಿ ಪೀಠಕ್ಕೆ ನೇಮಕ ಮಾಡಲಾಯಿತು, ಬಾರ್‌ನಿಂದ ರಾಜ್ಯ ಉನ್ನತ ನ್ಯಾಯಾಂಗ ಸೇವೆಗೆ ಮತ್ತು ಜಿಲ್ಲೆಯಲ್ಲಿ ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡರು.
ಒಂದು ವರ್ಷ ಸೇವೆ ಸಲ್ಲಿಸಿದ ಅವರು, 1978ರ ಮೇ ತಿಂಗಳಿನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಹೈಕೋರ್ಟಿನಲ್ಲಿ ತರಬೇತಿ ಪಡೆದುಕೊಳ್ಳಲು ಬಾರ್ ಕೌನ್ಸಿಲ್ ಗೆ ಮರಳಿದರು. 1988ರ ಮೇ 3ರಂದು ಮಧ್ಯಪ್ರದೇಶ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಆಗಿ ನೇಮಿಸಲಾಯಿತು. ಅದಾಗಿ ಒಂದು ವರ್ಷಕ್ಕೆ ಅಂದರೆ ಆಗಸ್ಟ್ 4, 1989ರಂದು ನ್ಯಾಯಮೂರ್ತಿ ಹುದ್ದೆಯನ್ನು ಖಾಯಂಗೊಳಿಸಲಾಯಿತು. ತದನಂತರ ಫೆಬ್ರವರಿ 7, 1994 ರಂದು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಅಲ್ಲಿಂದ ನಂತರ ಡಿಸೆಂಬರ್ 9, 1998ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.












Click it and Unblock the Notifications