Piyush Pandey: ಪದ್ಮಶ್ರೀ ಪುರಸ್ಕೃತ & ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ ಇನ್ನಿಲ್ಲ
ಜಾಹೀರಾತು ಲೋಕ ಲಕ್ಷ ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತೆ, ಜಗತ್ತಿನಲ್ಲೇ ಅತಿದೊಡ್ಡ ಕ್ಷೇತ್ರಗಳಲ್ಲಿ ಜಾಹೀರಾತು ಲೋಕ ಕೂಡ ಒಂದಾಗಿದೆ. ಭಾರತದಲ್ಲೂ ಆಡ್ ಬ್ಯುಸಿನೆಸ್ ದೊಡ್ಡ ಕ್ಷೇತ್ರವಾಗಿ ಬೆಳೆದಿದ್ದು, ಆರಂಭದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರ ಪೈಕಿ ಪಿಯೂಷ್ ಪಾಂಡೆ ಅವರು ಮೊದಲಿಗರು. ಆದರೆ ಇದೀಗ ಅವರನ್ನು ಕಳೆದುಕೊಂಡು ಜಾಹೀರಾತು ಲೋಕ ಕಣ್ಣೀರು ಹಾಕುವಂತಾಗಿದೆ. ಹಾಗಿದ್ರೆ ಪಿಯೂಷ್ ಪಾಂಡೆ ಅವರ ಮರೆಯಲಾಗದ ಜಾಹೀರಾತುಗಳು ಯಾವುವು? ಬನ್ನಿ ತಿಳಿಯೋಣ.
ಸ್ಮರಣೀಯ ಜಾಹೀರಾತು ಅಭಿಯಾನಗಳ ಹಿಂದೆ ನಿಂತ ಸೃಜನಾತ್ಮಕ ಪ್ರತಿಭೆ, ಜಾಹೀರಾತು ಕ್ಷೇತ್ರದ ದಂತಕಥೆ ಎಂದು ಹೆಸರು ಮಾಡಿದ್ದ ಪಿಯೂಷ್ ಪಾಂಡೆ ಅವರು ಇಂದು ಭಾರತದ ಜಾಹೀರಾತು ಪ್ರೇಮಿಗಳನ್ನು ಅಗಲಿದ್ದಾರೆ. ತಮ್ಮ 70ರ ಹರೆಯದಲ್ಲಿ ಪಿಯೂಷ್ ಪಾಂಡೆ ಅವರು ಇಹಲೋಕ ತ್ಯಜಿಸಿದ್ದಾರೆ. ಒಗಿಲ್ವಿಯ ಎಕ್ಸಿಕ್ಯೂಟಿವ್ ಚೇರ್ಮನ್ & ಚೀಫ್ ಕ್ರಿಯೇಟಿವ್ ಆಫೀಸರ್ (ವಿಶ್ವಮಟ್ಟ) ಆಗಿದ್ದ ಪಾಂಡೆ ಅವರು ಸುಮಾರು 4 ದಶಕಗಳ ಕಾಲ ಜಾಹೀರಾತು ಲೋಕದಲ್ಲಿ ಸಂಚಲನ ಸೃಷ್ಟಿಸಿ ಗಮನ ಸೆಳೆದಿದ್ದರು.

ಜಾಹೀರಾತು ಲೋಕದ ದಿಗ್ಗಜ ಇನ್ನಿಲ್ಲ
ಅವರು ದೊಡ್ಡ ಹೆಸರು ಮಾಡಲು ಅವರ ವಿಭಿನ್ನ ರೀತಿ ಆಡ್ ಎಂದರೆ ಜಾಹೀರಾತುಗಳೇ ಪ್ರಮುಖ ಕಾರಣ ಆಗಿದ್ದವು. ಅಷ್ಟೊಂದು ಚಂದದ ಜಾಹೀರಾತುಗಳನ್ನ ಸೃಷ್ಟಿಸಿದ್ದರು. ಅವರ ವೃತ್ತಿಜೀವನ ಭಾವನೆಗಳಿಗೆ ತಾಕುವ ರೀತಿಯ ಜಾಹೀರಾತುಗಳನ್ನು ಸೃಷ್ಟಿಸಿ ಶತಕೋಟಿ ಜನರ ಎದುರು ಇಟ್ಟಿತ್ತು. ಫೆವಿಕಾಲ್, ಕ್ಯಾಡ್ಬರಿ, ಏಷಿಯನ್ ಪೇಂಟ್ಸ್ ಸೇರಿದಂತೆ ಹಲವಾರು ಬ್ರಾಂಡ್‌ಗಳಿಗಾಗಿಯೇ ಭಾರತದ ಜಾಹೀರಾತು ಕ್ಷೇತ್ರವನ್ನು ರೂಪಾಂತರಗೊಳಿಸಿ ಗಮನ ಸೆಳೆದಿದ್ದರು ಅವರು. ಆದರೆ, ಈಗ ಅವರ ಅಗಲಿಕೆ ಜಾಹೀರಾತು ಕ್ಷೇತ್ರವನ್ನ ಕಾಡುತ್ತಿದೆ.
ಅಂದಹಾಗೆ 1988ರಲ್ಲಿ ಒಗಿಲ್ವಿ ಅಂಡ್ ಮೇಥರ್‌ನಲ್ಲಿ ಅಕೌಂಟ್ ಮ್ಯಾನೇಜರ್ ಆಗಿದ್ದ ಪಿಯೂಷ್ ಪಾಂಡೆ ಅವರು, ಮೊದಲಿಗೆ ರಾಷ್ಟ್ರ ಏಕತಾ ಅಭಿಯಾನವಾದ ಮಿಲೇ ಸೂರು ಮೇರಾ ತುಮ್ಹಾರಾ ಗೀತೆಯ ಸಾಹಿತ್ಯವನ್ನ ರಚಿಸಿದರು. ಲೋಕ ಸೇವಾ ಸಂಚಾರ್ ಪರಿಷತ್ ಆಯೋಜಿಸಿ ದೂರದರ್ಶನ ತೆರೆಯಲ್ಲಿ ಪ್ರಸಾರವಾದ ಈ ಗೀತೆ ಶಾಸ್ತ್ರೀಯ ಮತ್ತು ಪ್ರಾದೇಶಿಕ ಸಂಗೀತವನ್ನು ಭೀಮಸೇನ್ ಜೋಶಿ & ಲತಾ ಮಂಗೇಶ್ಕರ್ ಸೇರಿ ಅನೇರಿಕ ಹಿರಿಯ ಕಲಾವಿದರ ಶಕ್ತಿಯೊಂದಿಗೆ ಸಂಯೋಜಿತವಾಗಿತ್ತು. ಇದು ಭಾರತದ ಏಕತೆಯಲ್ಲಿ ವೈವಿಧ್ಯತೆಯ ಶಾಶ್ವತ ಪ್ರತೀಕವಾಗಿ ಕೂಡ ಉಳಿಯಿತು.
ಪೋಲಿಯೊ ಲಸಿಕಾ ಜಾಗೃತಿ ಅಭಿಯಾನ
ವಾಣಿಜ್ಯ ಜಾಹೀರಾತು ಹೊರತಾಗಿ ಪಾಂಡೆ ಅವರು ಸಾಮಾಜಿಕ ಅಭಿಯಾನಗಳಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂಬುದೇ ಗಮನಾರ್ಹ ಸಂಗತಿಯಾಗಿದೆ. 1990ರ ದಶಕದ ಆರಂಭದಲ್ಲಿ, ಅವರು ದೋ ಬೂಂದ್ ಜಿಂದಗೀ ಕೀ ಎಂಬ ಪೋಲಿಯೊ ಲಸಿಕಾ ಜಾಗೃತಿ ಅಭಿಯಾನದ ಮೂಲಕ ಭಾರತೀಯರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಬಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್, ಜಾಕಿ ಶ್ರಾಫ್ & ಐಶ್ವರ್ಯಾ ರೈ ಸೇರಿದಂತೆ ಅನೇಕ ದೊಡ್ಡ ದೊಡ್ಡ ಸ್ಟಾರ್ಸ್ ಈ ಜಾಹೀರಾತಿನಲ್ಲಿ ಮಿಂಚಿದ್ದರು. ಈ ಜಾಹೀರಾತು ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ದೇಶದ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಲು ಪ್ರಮುಖ ಪರಿಣಾಮ ಬೀರಿತ್ತು.











Click it and Unblock the Notifications