Petrol Price: ಪೆಟ್ರೋಲ್-ಡೀಸೆಲ್ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆ: ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಆಗಲಿದೆಯೇ
Petrol Price: ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ನಾಲ್ಕನೇ ವಾರವೂ ಮುಂದುವರಿದಿದೆ. ಅಮೆರಿಕ ಹಾಗೂ ಇರಾನ್‌ನ ನಡುವೆ ಒಪ್ಪಂದ ಏರ್ಪಡದೆ ಇರುವುದು ಹಾಗೂ ಎರಡೂ ಕಡೆಗಳಿಂದಲೂ ಷರತ್ತುಗಳನ್ನು ವಿಧಿಸುತ್ತಿರುವ ಕಾರಣಕ್ಕೆ ಯುದ್ಧವು ಇನ್ನೂ ಮುಂದುವರಿದಿದೆ. ಇದೀಗ ಯುದ್ಧವು ತೀವ್ರಗೊಂಡಿರುವುದು ಹಾಗೂ ಸುದೀರ್ಘ ಅವಧಿಗೆ ಮುಂದುವರಿಯುತ್ತಿರುವ ಕಾರಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಬಹುದು ಎನ್ನುವ ಆತಂಕ ಜನರಲ್ಲಿತ್ತು.
ಇದೀಗ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ನ ಮೇಲೆ 3 ರೂಪಾಯಿಗೆ ಇಳಿಸಿದೆ. ಅಲ್ಲದೆ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಆದರೆ ಇದರ ಲಾಭವು ಜನರಿಗೆ ಸಿಗಲಿದೆಯೇ ಇಲ್ಲವೇ ಎನ್ನುವ ವಿವರ ಇಲ್ಲಿದೆ.

ಪ್ರಮುಖ ಸರ್ಕಾರಿ ತೈಲ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗಳು ಇಂಧನ ಬೆಲೆಗಳನ್ನು ಸ್ಥಿರವಾಗಿರಿಸಿರುವುದರಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಇದೀಗ ಕೇಂದ್ರ ಸರ್ಕಾರದ ನಿರ್ಧಾರದಿಂದ ನಷ್ಟವನ್ನು ಭರಿಸಲು ನೆರವಾಗಿ, ಪಂಪ್ ಬೆಲೆಯಲ್ಲಿ ತೀವ್ರ ಏರಿಕೆಯನ್ನು ತಪ್ಪಿಸುವ ಪ್ರಮುಖ ಉದ್ದೇಶವನ್ನು ಒಳಗೊಂಡಿದೆ.
ಮಧ್ಯಪ್ರಾಚ್ಯದಲ್ಲಿ ಇರಾನ್ vs ಇಸ್ರೇಲ್‌ನ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಇಸ್ರೇಲ್ ಬೆಂಬಲಕ್ಕೆ ಅಮೆರಿಕ ನೇರವಾಗಿ ಬಂದ ಮೇಲೆ ಅಥವಾ ಯುದ್ಧಭೂಮಿಕೆಗೆ ಪ್ರವೇಶ ಮಾಡಿದ ಮೇಲೆ ಈ ಯುದ್ಧವು ಇನ್ನಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.
Petrol Price: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು
ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿರುವ ಬಗ್ಗೆ ಮಾತನಾಡಿದ್ದಾರೆ. ಈ ಕ್ರಮದಿಂದಾಗಿ ಬೆಲೆ ಏರಿಕೆ ಆಗದಂತೆ ಸಾರ್ವಜನಿಕರಿಗೆ ರಕ್ಷಣೆ ಸಿಗಲಿದೆ. ಅಲ್ಲದೆ ಡೀಸೆಲ್ ರಫ್ತಿನ ಮೇಲೆ ಲೀಟರ್‌ಗೆ 21.5 ರೂಪಾಯಿ ಹಾಗೂ ವಿಮಾನ ಇಂಧನ ರಫ್ತಿಗೆ 29.5 ರೂಪಾಯಿ ಸುಂಕ ವಿಧಿಸುತ್ತಿರುವುದರಿಂದ ದೇಶೀಯ ಬಳಕೆಗೆ ಸಾಕಷ್ಟು ಲಭ್ಯತೆ ಖಚಿತವಾಗುತ್ತದೆ ಎಂದಿದ್ದಾರೆ.
ಇನ್ನು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 13ರೂಪಾಯಿಯಿಂದ 3 ರೂಪಾಯಿಗೆ ಇಳಿಸಲಾಗಿದೆ.
ಡೀಸೆಲ್ ಮೇಲಿನ ಸುಂಕವನ್ನು 10ರೂಪಾಯಿಗಳಿಂದ ಶೂನ್ಯಕ್ಕೆ ಇಳಿಸಲಾಗಿದ್ದು, ಈ ದರ ಕಡಿತವು ತಕ್ಷಣದಿಂದಲೇ ಜಾರಿಗೆ ಬಂದಿದೆ. ಆದರೆ, ಈ ಬದಲಾವಣೆಯಿಂದಾಗಿ ಸಾರ್ವಜನಿಕರಿಗೆ ನೇರವಾಗಿ ಬೆಲೆ ಇಳಿಕೆಯ ಲಾಭವಾಗಲ್ಲ. ಈ ಕ್ರಮದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಇಳಿಕೆ ಆಗುವುದಿಲ್ಲ.












Click it and Unblock the Notifications