ಪೆಟ್ರೋಲ್ ಡಿಸೇಲ್ ಬೆಲೆ, ಸದ್ಯದಲ್ಲೇ ಶುಭ ಸುದ್ದಿǃ
ನವದೆಹಲಿ, ನ.12: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರಂತರ ಇಳಿಕೆಯಾಗುತ್ತಿರುವ ಬೆನ್ನಲ್ಲಿ ಭಾರತದಲ್ಲೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆಯಾಗುವ ಸಂಭವವಿದೆ. ನವೆಂಬರ್ 15 ಕ್ಕೆ ಲೀಟರ್ ಗೆ ಒಂದು ರೂಪಾಯಿ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಕಚ್ಚಾತೈಲದ ಬೆಲೆ ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಳಿತಗೊಳ್ಳುತ್ತವೆ. ಕಚ್ಚಾ ತೈಲದ ಬ್ಯಾರೆಲ್ 81 ಡಾಲರ್ ಗೆ ಬಂದು ನಿಂತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ, ಷೇರು ಮಾರುಕಟ್ಟೆ, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಬೆಲೆ ನಿರ್ಧಾರ ಮಾಡುತ್ತವೆ.[ಬೆಂಗಳೂರಿಗರು ಪೆಟ್ರೋಲ್ ಗೆ 70 ರೂ. ಕೊಟ್ರೆ ಸಾಕು]

ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಓಸಿ), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ (ಎಚ್‌ಪಿಸಿಎಲ್) ಸೇರಿದಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ವಾರಾಂತ್ಯಕ್ಕೆ ಪೆಟ್ರೋಲ್ ದರವನ್ನು ಕಡಿತ ಮಾಡಲಿವೆ.
ಜೂನ್ ತಿಂಗಳಿನಿಂದ ಸತತವಾಗಿ ತೈಲ ಬೆಲೆ ಇಳಿಯುತ್ತ ಸಾಗಿರುವುದು ನಾಗರಿಕರಲ್ಲಿ ಸಂತಸ ತಂದಿದೆ. ಅಕ್ಟೋಬರ್ 18ರಂದು ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದ್ದು ಪರಿಣಾಮ ಬೀರಿತು. ಈ ಹಿಂದೆ ನವೆಂಬರ್ 1ರಂದು ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಸಲಾಗಿತ್ತು.[ದರ ಏರಿಕೆಯಲ್ಲಿನ ಇಚ್ಛಾಶಕ್ತಿ, ಕಮ್ಮಿ ಮಾಡೋದ್ರಲ್ಲೂ ಇರ್ಲಿ]
ಬೆಂಗಳೂರಿನಲ್ಲಿ ಎಷ್ಟು?
ಸದ್ಯ ಬೆಂಗಳೂರಿಗರು ಲೀಟರ್ ಪೆಟ್ರೋಲ್ 70.45 ರೂ. ಮತ್ತು ಡಿಸೇಲ್ ಗೆ 57.94 ನೀಡುತ್ತಿದ್ದಾರೆ. ನಿರೀಕ್ಷೆಯಂತೆ ಲೀಟರ್ ಮೇಲೆ 1 ರೂಪಾಯಿ ಕಡಿತವಾದರೆ ಪೆಟ್ರೋಲ್ 69.45 ರೂ. ಡಿಸೇಲ್ ಗೆ 56.94 ರೂ. ನೀಡಿದರೆ ಸಾಕು.












Click it and Unblock the Notifications