ಕಾಂತಾರ ಹಾಡಿಗೆ ನೃತ್ಯದ ವೇಳೆ ಅವಘಡ: ಎಂಟು ಜನರಿಗೆ ಗಾಯ
ಕಾಂತಾರ ಚಿತ್ರದ ಹಾಡುಗಳು ದೇಶ ವಿದೇಶದಲ್ಲಿ ಕೂಡ ಜನಪ್ರಿಯವಾಗಿವೆ. ಎಲ್ಲೆಡೆ ಕಾಂತಾರ ಚಿತ್ರದ ಹಾಡಿಗೆ ನೃತ್ಯ ಪ್ರದರ್ಶನ ಕೂಡ ನಡೆಯುತ್ತದೆ. ಈಗ ಅಂತಹದ್ದೇ ಒಂದು ಪ್ರದರ್ಶನದ ಸಂದರ್ಭದಲ್ಲಿ ಅವಘಡ ನಡೆದಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೈಎಸ್‌ಆರ್ ಕಡಪ ಜಿಲ್ಲೆಯ ಯರ್‍ರಗುಂಟ್ಲಾದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಾಂತಾರ ಚಿತ್ರದ ಹಾಡಿಗೆ ನೃತ್ಯ ಮಾಡುವ ಸಂದರ್ಭದಲ್ಲಿ ಬೆಂಕಿಯಲ್ಲಿ ಸಿಲುಕಿ ಮಕ್ಕಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ.

ಕೆಲವು ಯುವಕರು ಮತ್ತು ಮಕ್ಕಳಿಂದ ಜನಪ್ರಿಯ ಕಾಂತಾರ ಗೀತೆಯನ್ನು ಮರುಸೃಷ್ಟಿಸುವ ಉತ್ಸಾಹ ಅವಘಡದಲ್ಲಿ ಕೊನೆಯಾಗಿದೆ. ಕಾಂತಾರ ಚಿತ್ರದ ಪಾತ್ರಧಾರಿಯಂತೆ ವೇಷ ಧರಿಸಿದ ಕಲಾವಿದರು ಸಿನಿಮಾ ರೀತಿಯ ಎಫೆಕ್ಟ್ ಅನ್ನು ಸೃಷ್ಟಿಸಲು ನಿರ್ಧರಿಸಿದರು. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕುಣಿಯಲು ನಿರ್ಧರಿಸಿದ್ದರು.
ಆದರೆ, ಜ್ವಾಲೆಯು ಎತ್ತರಕ್ಕೆ ಏರಿತು ಮತ್ತು ಜ್ವಾಲೆಯಿಂದ ಹೊರಸೂಸುವ ಶಾಖದಿಂದಾಗಿ ಕಲಾವಿದರು ತೊಂದರೆ ಎದುರಿಸಿದರು ಮತ್ತು ನೃತ್ಯ ಮಾಡಲು ಸಾಧ್ಯವಾಗಲಿಲ್ಲ. ಬದಲಾಗಿ, ಅವರಿಗೆ ಸುಟ್ಟ ಗಾಯಗಳಾದವು. ಇಬ್ಬರು ಕಲಾವಿದರು ಸೇರಿ ಆರು ಮಕ್ಕಳು ಬೆಂಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪೋಲಿಸರ ವೈಫಲ್ಯ ಕಾರಣ
ಗಣೇಶ ವಿಸರ್ಜನೆ ವೇಳೆ ಹಲವು ನಿಯಮಗಳನ್ನು ಹಾಕಿಕೊಂಡು ಅನುಮತಿ ನೀಡುವ ಪೊಲೀಸರು ಮೆರವಣಿಗೆ ವೇಳೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಕಣ್ಣೆದುರೇ ರಾತ್ರಿ ಮೆರವಣಿಗೆ ನಡೆಯುತ್ತಿದ್ದರೂ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಅದರಿಂದ ಈ ದುರಂತ ಸಂಭವಿಸಿದೆ ಎನ್ನುತ್ತಾರೆ ಸ್ಥಳೀಯರು.
ಪೊಲೀಸರ ಕಣ್ಣೆದುರೇ ಪೆಟ್ರೋಲ್ ಕ್ಯಾನ್ ತೆಗೆದುಕೊಂಡು ಬೆಂಕಿ ಹಚ್ಚಲು ಯತ್ನಿಸುತ್ತಿದ್ದರೂ ಪೊಲೀಸರು ತಡೆಯುವ ಪ್ರಯತ್ನ ಮಾಡಲಿಲ್ಲ ಎನ್ನಲಾಗಿದೆ. ಪೊಲೀಸರು ಮೊದಲೇ ಸ್ಪಂದಿಸಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications