ಬೇಳೆ ಬೇಯಿಸಿಕೊಳ್ಳಲು ಮೋದಿ ಫೋಟೋ: ಕ್ಷಮೆಯಾಚಿಸಿದ ಜಿಯೋ, ಪೇಟಿಎಂ
ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸಿದ್ದ ರಿಲಯನ್ಸ್ ಜಿಯೋ ಹಾಗೂ ಪೇಟಿಎಂ ಕಂಪನಿಗಳು ಇದೀಗ ಕ್ಷಮೆಯಾಚಿಸಿವೆ.
ನವದೆಹಲಿ, ಮಾರ್ಚ್. 10 : ವಾಣಿಜ್ಯ ಕ್ಷೇತ್ರದಲ್ಲಿ ತಮ್ಮ ವ್ಯವಹಾರದ ಬೇಳೆ ಬೇಯಿಸಿಕೊಳ್ಳಲು ಅನುಮತಿ ಇಲ್ಲದೆ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸಿದ್ದ ರಿಲಯನ್ಸ್ ಜಿಯೋ ಹಾಗೂ ಪೇಟಿಎಂ ಕಂಪನಿಗಳು ಇದೀಗ ಕ್ಷಮೆಯಾಚಿಸಿವೆ.
ಈ ಬಗ್ಗೆ ಶುಕ್ರವಾರ ರಾಜ್ಯಸಭೆಗೆ ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ಸಿ.ಆರ್ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದು, ರಿಲಯನ್ಸ್ ಜಿಯೋ ಹಾಗೂ ಪೇಟಿಎಂ ತಮ್ಮ ಜಾಹೀರಾತು ತಪ್ಪಿನ ಬಗ್ಗೆ ಕ್ಷಮೆ ಕೇಳಿವೆ ಎಂದು ಹೇಳಿದ್ದಾರೆ.
ವಾಣಿಜ್ಯ ಕ್ಷೇತ್ರದಲ್ಲಿ ತಮ್ಮ ಕಂಪನಿಯ ಪ್ರಚಾರ ಗಿಟ್ಟಿಸಿಕೊಳ್ಳಲು ಜಿಯೋ ಕಂಪನಿಯು 'ಜಿಯೋ ಡಿಜಿಟಲ್ ಲೈಫ್' ಎಂಬ ಶೀರ್ಷಿಕೆ ಅಡಿಯಲ್ಲಿ ಮೋದಿ ಇರುವ ಫೋಟೋವನ್ನು ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತು.

ಹಾಗೂ ಪೇಟಿಎಂ ಕಂಪನಿಯು ಸಹ ಪ್ರಧಾನಿ ಕಚೇರಿಯ ಅನುಮತಿ ಪಡೆಯದೆ ತನ್ನ ಜಾಹಿರಾತುವೊಂದರಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಬಳಸಿಕೊಂಡಿತ್ತು.
#RelianceJio, @Paytm have tendered apologies for using Prime Minister's picture in their ads without permission: Govt.
— Press Trust of India (@PTI_News) March 10, 2017
ಈ ಸಂಬಂಧ ಗ್ರಾಹಕ ವ್ಯವಹಾರಗಳ ಇಲಾಖೆ ವಿವರಣೆ ಕೇಳಿ 1950ರ ಲಾಂಛನ ಮತ್ತು ಹೆಸರು ಬಳಕೆ ಕಾಯ್ದೆಯಡಿ ಎರಡೂ ಕಂಪನಿಗಳಿಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ ನೋಟಿಸ್ ಜಾರಿ ಮಾಡಿತ್ತು.












Click it and Unblock the Notifications