Parliament Session: ಲೋಕಸಭೆಯಲ್ಲಿ ಗದ್ದಲವೇಕೆ ಇಲ್ಲಿದೆ ಸಂಪೂರ್ಣ ಮಾಹಿತಿ, ರಾಹುಲ್ ಗಾಂಧಿ Vs ನರೇಂದ್ರ ಮೋದಿ
ನವದೆಹಲಿ: ಲೋಕಸಭೆಯಲ್ಲಿ ಚೀನಾ - ಭಾರತದ ಸೇನಾ ತಿಕ್ಕಾಟದ ವಿಷಯ ಪ್ರಸ್ತಾವನೆಗೆ ಸಂಬಂಧಿಸಿದ ವಿವಾದವು ಬುಧವಾರವೂ ಮುಂದುವರಿದಿದ್ದು, ಭಾರೀ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಭಾರತ ಮತ್ತು ಚೀನಾದ ನಡುವೆ 2020ರಲ್ಲಿ ಲಡಾಖ್‌ನಲ್ಲಿ ಸೇನಾ ತಿಕ್ಕಾಟ ನಡೆದಿತ್ತು. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಸರ್ಕಾರ ಆ ಸಂದರ್ಭದಲ್ಲಿ ತೆಗೆದುಕೊಂಡಿದ್ದ ನಿರ್ಧಾರ ಚರ್ಚೆಗೆ ಕಾರಣವಾಗಿದೆ. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ ನರವಣೆ ಅವರ ಅಪ್ರಕಟಿತ ಪುಸ್ತಕ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಆತ್ಮಕಥನದಲ್ಲಿನ ವಿಷಯಗಳನ್ನು ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಿರುವುದು ಇದೀಗ ಭಾರೀ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ. ಬುಧವಾರವೂ ಲೋಕಸಭೆಯಲ್ಲಿ ಈ ವಿಚಾರ ಭಾರೀ ಗದ್ದಲ ಸೃಷ್ಟಿ ಮಾಡಿದೆ. ಕಾಂಗ್ರೆಸ್ ಈ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದೆ. ಕಾಂಗ್ರೆಸ್‌ನ 8 ಜನ ಸಂಸದರ ಅಮಾನತು ಪ್ರಕ್ರಿಯೆಯನ್ನು ಕಾಂಗ್ರೆಸ್ ವಿರೋಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಹಾಗೂ ಭಯಭೀತರಾಗಿದ್ದಾರೆ. ಆದರೆ ನಾವು ಮೌನವಾಗಿರುವುದಿಲ್ಲ. ನಾವು ಜನರ ಧ್ವನಿಯಾಗಿದ್ದೇವೆ. ಸತ್ಯ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

ಸಂಸತ್ತು ಪ್ರಜಾಪ್ರಭುತ್ವದ ದೇವಾಲಯ - ಅಲ್ಲಿ ದೇಶಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತದೆ. ಆದರೆ ಮೋದಿ ಸರ್ಕಾರ ಈ ಸಂಪ್ರದಾಯವನ್ನು ನಾಶಮಾಡಲು ಹಠ ಹಿಡಿದಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡುತ್ತಿಲ್ಲ ಮತ್ತು ಪ್ರತಿಭಟನೆ ಮಾಡಿದ್ದಕ್ಕಾಗಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ. ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಮತ್ತು ಸತ್ಯವನ್ನು ಮರೆಮಾಡುತ್ತಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಅವರು ಸಂಸತ್ತಿನ ಘನತೆಯನ್ನು ತುಳಿಯುತ್ತಿದ್ದಾರೆ - ಈ ನಡೆಯನ್ನು ದೇಶವು ಸಹಿಸುವುದಿಲ್ಲ.
ಕಾಂಗ್ರೆಸ್‌ನ 8 ಸಂಸದರು ಅಮಾನತು
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳನ್ನು ಉಲ್ಲೇಖಿಸುವುದಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ವಿರೋಧಿಸಿ ಲೋಕಸಭೆಯಲ್ಲಿ ಮಂಗಳವಾರ ತೀವ್ರ ಕೋಲಾಹಲ ಸೃಷ್ಟಿಯಾಗಿತ್ತು. ಅಲ್ಲದೇ ಲೋಕಸಭೆಯ ಸ್ಪೀಕರ್ ಪೀಠದತ್ತ ಕಾಗದ ಪತ್ರಗಳನ್ನು ತೂರಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ 8 ಸಂಸದರನ್ನು ಲೋಕಸಭೆ ಸ್ಪೀಕರ್ ಅಮಾನತು ಮಾಡಿದ್ದರು.
ಅಮಾನತು ಆಗಿರುವ 8 ಜನ ಕಾಂಗ್ರೆಸ್ ಸಂಸದರು
ಕಾಂಗ್ರೆಸ್ ಪಕ್ಷದ ಸಂಸದರಾದ ಹಿಬಿ ಈಡನ್,ಸಿ. ಕಿರಣ್ ಕುಮಾರ್ ರೆಡ್ಡಿ, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಮ್ ಟ್ಯಾಗೋರ್, ಪ್ರಶಾಂತ್ ಪಡೋಲ್ ಹಾಗೂ ಡೀನ್ ಕುರಿಯಾಕೋಸ್ ಅವರನ್ನು ಸ್ಪೀಕರ್ ಪೀಠದ ಕಡೆಗೆ ಕಾಗದ ಎಸೆದಿರುವುದು ಹಾಗೂ ಲೋಕಸಭೆ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಪ್ರತಿಭಟನೆ & ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಪೋಸ್ಟ್
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳನ್ನು ಪ್ರಸ್ತಾಪಿಸುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ, ಕಾಂಗ್ರೆಸ್‌ನ ಸಂಸದರು ಸದನದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದ್ದರು, ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಎಂಟು ಜನ ಕಾಂಗ್ರೆಸ್ ಸಂಸದರನ್ನು ಲೋಕಸಭೆಯ ಸ್ಪೀಕರ್ ಅಮಾನತು ಮಾಡಿದ್ದಾರೆ. ಈ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ಬುಧವಾರ ಲೋಕಸಭೆಯ ಮುಂದೆ ಪ್ರತಿಭಟನೆ ಮಾಡಿದೆ. ವಿರೋಧ ಪಕ್ಷದ ಸಂಸದರು ಇದು ಕೇಂದ್ರ ಸರ್ಕಾರದ ಅನಿಯಂತ್ರಿತ ಕ್ರಮದ ಎಂದು ಆರೋಪಿಸಿದ್ದು, ಪ್ರತಿಭಟಿಸಿದ್ದಾರೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಾವು ಧ್ವನಿ ಎತ್ತುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
"जो उचित समझो, वो करो" pic.twitter.com/jDyA8Skygg
— Congress (@INCIndia) February 4, 2026
ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಅವರು ಅಂದಿನ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ ನರವಣೆ ಅವರು ಬರೆದಿರುವ ಹಾಗೂ ಅಪ್ರಕಟಿತ ಪುಸ್ತಕವನ್ನು ಹಿಡಿದಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ನರೇಂದ್ರ ಮೋದಿಯ ಭಯ ಎಂದು ಟ್ವೀಟ್ ಮಾಡಲಾಗಿದೆ. ನರೇಂದ್ರ ಮೋದಿ ಅವರಿಗೆ ಈ ಪುಸ್ತಕದ ಬಗ್ಗೆ ಭಯವಿದೆ ಎಂದು ಬರೆದುಕೊಳ್ಳಲಾಗಿದೆ.












Click it and Unblock the Notifications