ಸಾಲ ಮಾಡಿಯಾದ್ರೂ ತುಪ್ಪ ತಿನ್ನು.. ಇದು ಕುತಂತ್ರಿ ಪಾಕಿಸ್ತಾನದ ರಿಯಲ್ ಸ್ಟೋರಿ!
ನವದೆಹಲಿ: ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಅದೇನು ದ್ವೇಷವೋ ಗೊತ್ತಿಲ್ಲ, ಪದೇ ಪದೆ ತನ್ನ ನರಿಬುದ್ಧಿ ತೋರಿಸುತ್ತಲೇ ಇರುತ್ತೆ. ಅದರಲ್ಲೂ ಚೀನಾ ಜೊತೆ ಸೇರಿ ಭಾರತದ ಬಗ್ಗೆ ಫಿಟ್ಟಿಂಗ್ ಇಡೋದೆ ಬಂತು. ಹೀಗೆ ಪಾಕಿಸ್ತಾನ ತಾನು ಉದ್ಧಾರ ಆಗಲ್ಲ, ಉದ್ಧಾರ ಆಗೋ ದೇಶವನ್ನೂ ಬಿಡಲ್ಲ. ಈಗ ಯಾಕಪ್ಪ ಈ ಮಾತು ಅಂದ್ರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಕೊಟ್ಟ ಭಯಾನಕ ಅಸ್ತ್ರಗಳನ್ನು ನಿಯೋಜಿಸಿದೆ ಪಾಪಿ ಪಾಕಿಸ್ತಾನ!
ಹೌದು, ಭಾರತದ ಕಿರೀಟ ಕಾಶ್ಮೀರದ ಒಂದು ಭಾಗವನ್ನ ಪಾಕಿ ಸೇನೆ ಆಕ್ರಮಿಸಿಕೊಂಡಿದೆ. ಹಾಗೇ ಇಲ್ಲಿ ಭಯೋತ್ಪಾದಕರ ಬಿಡಾರ ತೆರೆದು, ಭಾರತದ ವಿರುದ್ಧ ಪದೇ ಪದೆ ಕುತಂತ್ರ ಮಾಡುತ್ತಲೇ ಇರುತ್ತದೆ ಪಾಕ್. ಈಗಲೂ ಅಷ್ಟೇ, ಗಡಿನಿಯಂತ್ರಣ ರೇಖೆ ಉದ್ದಕ್ಕೂ ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಪಾಕಿಸ್ತಾನಕ್ಕೆ ಚೀನಾವು ಸಹಾಯ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಈಗಾಗಲೇ ಪಾಕಿಸ್ತಾನಕ್ಕೆ ಚೀನಾ ತನ್ನ ಹಲವು ಮಾನವ ರಹಿತ ಡ್ರೋನ್‌ಗಳನ್ನ ಕೂಡ ನೀಡಿದೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಭಯಾನಕ ಅಸ್ತ್ರಗಳನ್ನೂ ಪಾಕ್‌ಗೆ ಕೊಡುತ್ತಿದೆ.

ಹೇಗಿದೆ ಗೊತ್ತಾ ಪಾಕಿಗಳ ಸ್ಕೇಚ್?
ಅಂದಹಾಗೆ ಈಗಾಗಲೇ ಪಾಕಿಸ್ತಾನ ಸೇನೆಗೆ ಚೀನಾ ಹಲವು ರೀತಿ ಸಹಾಯ ಮಾಡಿದೆ. ಗಡಿ ಭಾಗದಲ್ಲಿ ರಹಸ್ಯ ಬಂಕರ್‌ಗಳನ್ನೂ ನಿರ್ಮಿಸಿದೆ, ಇದರ ಜೊತೆ ವಾಚ್ ಟವರ್ ನಿರ್ಮಾಣ ಮಾಡಿದೆ. ಈಗ ಅತ್ಯಾಧುನಿಕ ಮತ್ತು ವಿನಾಶಕಾರಿ ಎಸ್‌ಎಚ್-15 ಹೊವಿಟ್ಜರ್ ಗನ್ ಕೂಡ ಕೊಟ್ಟುಬಿಟ್ಟಿದೆ. ಈ ಡೆಡ್ಲಿ ಗನ್‌ಗಳನ್ನ ಭಾರತದ ಗಡಿಯಲ್ಲಿ ನಿಯೋಜಿಸಲು ಈಗ ಪಾಕ್ ಕುತಂತ್ರ ಮಾಡಿದೆ. ಅದರಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಚೀನಾ ಕಣ್ಣಿಟ್ಟಿರುವ ಆರೋಪವಿದ್ದು, ಪಾಕಿಸ್ತಾನ ಕೂಡ ಎಸ್‌ಎಚ್-15 ಹೊವಿಟ್ಜರ್ ಗನ್‌ಗಳನ್ನ ಅದೇ ಸ್ಥಳಕ್ಕೆ ರವಾನಿಸುತ್ತಿದೆ ಎನ್ನಲಾಗಿದೆ. ಈ ವೆಪನ್ಸ್ ಅದೆಷ್ಟು ಡೆಡ್ಲಿ ಗೊತ್ತಾ? ಹಾಗೇ ಭಾರತಕ್ಕೆ ಈಗ ಎದುರಾಗುವ ಅಪಾಯವೇನು? ಸಂಪೂರ್ಣ ಮಾಹಿತಿ ತಿಳಿಯಿರಿ.
ಭಿಕ್ಷೆ ಎತ್ತಿ ವೆಪನ್ಸ್ ತಗೊಂಡ್ರು!
ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಬೇಕು, ಅಷ್ಟಕ್ಕೂ ಈ ಮಾತು ಪಾಕ್‌ಗೆ ಮತ್ತು ಅಲ್ಲಿನ ಭ್ರಷ್ಟ ರಾಜಕಾರಣಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತೆ. ಯಾಕಂದ್ರೆ ಈ ದೇಶ ಇದೆಯಲ್ಲ ಪಾಕಿಸ್ತಾನ, ಇಲ್ಲಿ ತಿನ್ನಲು ಅನ್ನ ಇಲ್ಲ. ಗೋಧಿ ಹಿಟ್ಟಿಗೂ ಕೊಲೆಗಳು ನಡೆಯುವ ದೇಶ ಅದು. ಪರಿಸ್ಥಿತಿ ಹೀಗಿದ್ರೂ ಪಾಕಿಗಳ ಸೇನೆಗೆ ಮಾತ್ರ ಅತ್ಯಾಧುನಿಕವಾದ ಅಸ್ತ್ರಗಳೇ ಬೇಕು. ಅದರಲ್ಲೂ ಸಾವಿರಾರು ಕೋಟಿ ರೂಪಾಯಿ ಬೆಲೆಯ ವೆಪನ್ಸ್ ಬೇಕು. ಅದೇ ರೀತಿ ಎಸ್‌ಎಚ್-15 ಅಸ್ತ್ರಗಳ ಖರೀದಿಗೆ ಈಗಾಗಲೇ ಪಾಕಿಸ್ತಾನ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಒಪ್ಪಂದ ಮಾಡಿಕೊಂಡಿದೆ. ಇದು ತನ್ನ ದುಡ್ಡಿಂದ ಅಲ್ಲ, ಚೀನಾದ ನಾಯಕರು ಹಾಕಿರುವ ಸಾಲದ ಭಿಕ್ಷೆಯಿಂದ.

ಏನ್ ಗುರೂ ಇದು ಪಾಕಿಗಳ ಕಥೆ?
ಬರೀ ವೆಪನ್ಸ್ ಮಾತ್ರವಲ್ಲ, ಚೀನಾ ನಾಯಕರು ಪಾಕಿಸ್ತಾನಕ್ಕೆ ಏನು ಬೇಕಾದ್ರೂ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣ ಚೀನಾದ ಭಾರತ ವಿರೋಧಿ ನಡೆ ಎಂಬ ಆರೋಪ ಇದೆ. ಮತ್ತೊಂದ್ಕಡೆ ಈ ಆರೋಪ ಸಾಬೀತು ಮಾಡುವಂತೆ ಚೀನಾ ನಡೆದುಕೊಳ್ಳುತ್ತಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಗಟ್ಟಿಮುಟ್ಟಾದ ಬಂಕರ್‌ಗಳು ಸೇರಿದಂತೆ ಅಂಡರ್ ಗ್ರೌಂಡ್ ಕೇಬಲ್ ವ್ಯವಸ್ಥೆಯನ್ನು ಚೀನಾ ನಿರ್ಮಿಸಿದೆ ಎನ್ನಲಾಗಿದೆ. ಎಲ್ಲಾ ರೀತಿ ಹವಾಮಾನಕ್ಕೂ ಹೊಂದಾಣಿಕೆ ಆಗುವ ರಸ್ತೆಗಳನ್ನೂ ಚೀನಾ ಇಂಜಿನಿಯರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಇಷ್ಟು ಸಾಲುವುದಿಲ್ಲ ಎಂಬಂತೆ ಎಸ್‌ಎಚ್-15 ಹೊವಿಟ್ಜರ್ ಗನ್‌ಗಳನ್ನು ಕೊಟ್ಟಿದೆ ಚೀನಾ. ಈ ಗನ್‌ಗಳನ್ನ ಸುಲಭವಾಗಿ ಟ್ರಕ್‌ಗಳ ಮೇಲಿಂದ, ಸಣ್ಣಪುಟ್ಟ ವಾಹನ ಸಹಾಯದಿಂದ ಬಳಸಬಹುದು. ಹೀಗಾಗಿ ಭಾರತಕ್ಕೆ ಗಡಿಯಲ್ಲಿ ಸಮಸ್ಯೆ ಎದುರಾಗಿದೆ.
ಪಾಕಿಸ್ತಾನಕ್ಕೆ ಕೊಟ್ಟಿರುವ ಏಟು ಸಾಕಾಗಿಲ್ವಾ?
ಒಟ್ನಲ್ಲಿ ಚೀನಾ ನಾಯಕರು ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಂದ್ರೆ ಸಿಪಿಇಸಿ ಮೂಲಕ ಗಡಿ ಭಾಗದಲ್ಲಿ, ಭಾರತ ವಿರೋಧಿ ಕೆಲಸ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಮಧ್ಯೆ ಜಲವಿದ್ಯುತ್ ಯೋಜನೆಗಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಚೀನಾ ಪ್ರಭಾವ ಹೆಚ್ಚುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಟ್ರಕ್ ಮೇಲೆ ಅಳವಡಿಸಬಹುದಾದ ಈ ಎಸ್‌ಎಚ್-15 ಹೊವಿಟ್ಜರ್ ಗನ್‌ಗಳು ಎಲ್‌ಒಸಿ ಬಳಿ ಸ್ಥಾಪನೆ ಆಗುತ್ತಿವೆ. ಈಗಾಗಲೇ ಪಾಕಿಸ್ತಾನ ಸೇನೆಯು ಈ ಅಸ್ತ್ರಗಳನ್ನ 2022ರಲ್ಲಿ ಜಗತ್ತಿಗೇ ತೋರಿಸಿತ್ತು. ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಗಡಿಯಲ್ಲಿ ಅದನ್ನ ಸ್ಥಾಪನೆ ಮಾಡುತ್ತಿರುವುದು ಭಾರತ ಹಾಗೂ ಪಾಕ್ ಸಂಬಂಧಕ್ಕೆ ಹುಳಿ ಹಿಂಡಿದಂತಾಗಿದೆ. ಹಾಗೇ ಭರತದಿಂದ ಮತ್ತೊಮ್ಮೆ ಸರಿಯಾದ ಪೆಟ್ಟು ತಿನ್ನಲು ಪಾಕ್ ಕಾಯುತ್ತಿರುವ ರೀತಿ ತೋರುತ್ತಿದೆ.

ಚೀನಾ ಸಾಲದ ಸುಳಿಯಲ್ಲಿ ಪಾಕಿಸ್ತಾನ?
ಕೈಗೆ ಸಿಗದ ಹಣದುಬ್ಬರ, ಅದರ ಜೊತೆಯಲ್ಲೇ ಹಣಕಾಸಿನ ಅಸಮತೋಲನ. ಇಷ್ಟು ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನು ಕೂಡ ಪಾಕಿಸ್ತಾನ ಮಾರಾಟ ಮಾಡಿದೆ. ಇತ್ತೀಚೆಗಷ್ಟೆ ಕರಾಚಿ ಪೋರ್ಟ್ ಟರ್ಮಿನಲ್ಸ್ ಅನ್ನ ಯುಎಇಗೆ ಹಸ್ತಾಂತರಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಇನ್ನೂ ತುರ್ತು ನಿಧಿ ಸಂಗ್ರಹಿಸಲು ಕಳೆದ ವರ್ಷ ಹೊಸ ಕಾನೂನು ಜಾರಿಗೆ ತಂದಿರುವ ಪಾಕ್ ನೆಲದ ರಾಜಕಾರಣಿಗಳು ತಮ್ಮ ದೇಶವನ್ನೇ ಮಾರುತ್ತಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್ ಜೊತೆಗಿನ ಒಪ್ಪಂದದ ಅವಧಿಯು ಮುಕ್ತಾಯವಾಗಿರುವ ಕಾರಣ, ಪಾಕ್‌ಗೆ ತುರ್ತಾಗಿ ಹೆಚ್ಚುವರಿ ಹಣ ಬೇಕಿದ್ದು, ಈಗಾಗಲೇ ಚೀನಾ ಸಾಕಷ್ಟು ಸಹಾಯ ಮಾಡಿದೆ.
ಸಾವಿರಾರು ಕೋಟಿ ರೂಪಾಯಿ ನೆರವು
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಚೀನಾ ಇತ್ತೀಚೆಗೆ ನೆರವಿನ ಹಸ್ತ ಚಾಚಿತ್ತು. ನಗದು ಕೊರತೆ ನಿವಾರಿಸಲು ಚೀನಾ 1 ಬಿಲಿಯನ್ ಡಾಲರ್ ಹಣ ಸಾಲ ಕೊಟ್ಟಿತ್ತು. ಈ ವಿಚಾರ ಸ್ವತಃ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮೂಲಕ ಕನ್ಫರ್ಮ್ ಆಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಚೀನಾ ಸಹಾಯವು ಭರವಸೆ ನೀಡಿದೆ. ಇತ್ತೀಚೆಗಷ್ಟೆ ಚೀನಾಗೆ ಮರುಪಾವತಿಸಿದ್ದ 1.30 ಬಿಲಿಯನ್ ಡಾಲರ್ ಹಣವನ್ನೇ ಚೀನಾದಿಂದ ಮರಳಿ ಪಡೆಯಲಾಗಿತ್ತು. ಆದರೂ ಪರಿಸ್ಥಿತಿ ಸರಿ ಹೋಗುತ್ತಿಲ್ಲ, ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಾಕಿಸ್ತಾನ ಮಾತ್ರ ತನ್ನ ಯುದ್ಧದಾಹ ಬಿಡುತ್ತಿಲ್ಲ. ಸಾಲ ಮಾಡಿ ಶಸ್ತ್ರಾಸ್ತ್ರ ಖರೀದಿಸುತ್ತಾ ಭಾರತದ ವಿರುದ್ಧ ವಿಷ ಕಾರುತ್ತಿದೆ.












Click it and Unblock the Notifications