ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ 450 ಚಿನ್ನದ ನಾಣ್ಯಗಳು ಪತ್ತೆ- ಏಲ್ಲಿ ತಿಳಿಯಿರಿ?
ತಿರುಪತಿ, ಆಗಸ್ಟ್ 24: ನೆಲ್ಲೂರು ಜಿಲ್ಲೆಯ ಚಿಟ್ಟೆಪಲ್ಲಿ ಗ್ರಾಮದ ಅಂಕಾಳಮ್ಮ ದೇವಸ್ಥಾನದ ಬಳಿ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಅಂಕಾಳಮ್ಮ ದೇವಸ್ಥಾನದ ಗುಡ್ಡದ ಮೇಲಿನ ಬಂಡೆಕಲ್ಲಿನ ಕೆಳಗೆ ಬುಧವಾರ 450ಕ್ಕೂ ಹೆಚ್ಚು ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಈ ವಿಚಾರವನ್ನು ಹಂಚಿಕೊಂಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಪಿಗ್ರಾಫಿ) ನಿರ್ದೇಶಕ ಕೆ ಮುನಿರತ್ನಂ ರೆಡ್ಡಿ, '15 ಮತ್ತು 17 ನೇ ಶತಮಾನಗಳ ಹಿಂದಿನ ಚಿನ್ನದ ನಾಣ್ಯಗಳು ಅಂಕಾಳಮ್ಮ ದೇವಸ್ಥಾನದ ಗುಡ್ಡದ ಮೇಲಿನ ಬಂಡೆಕಲ್ಲಿನ ಕೆಳಗೆ ದೊರೆತಿವೆ. ಈ ನಾಣ್ಯಗಳು ವಿಜಯನಗರದ ರಾಜ ಹರಿಹರ I ಮತ್ತು II ಮತ್ತು ದೆಹಲಿ ಸುಲ್ತಾನರಿಗೆ ಸೇರಿವೆ' ಎಂದು ಹೇಳಿದ್ದಾರೆ.

ಕೆಲವು ಚಿನ್ನದ ನಾಣ್ಯಗಳ ಅಂಚಿನಲ್ಲಿ ದೆಹಲಿ ಟಂಕಸಾಲೆಯ ಚಿತ್ರಣವಿದೆ ಎಂದು ಅವರು ಹೇಳಿದರು. ಚಿನ್ನದ ನಾಣ್ಯಗಳು ಈ ಪ್ರದೇಶದ ಅತ್ಯಂತ ಹಳೆಯ ದೇವಾಲಯದ ಬಳಿ ಕಂಡುಬಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
'ಮಧ್ಯಕಾಲೀನ ಕಾಲದಲ್ಲಿ, ಸರಿಯಾದ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಜನರು ತಮ್ಮ ಹಣವನ್ನು ದೇವಾಲಯಗಳಲ್ಲಿ ಠೇವಣಿ ಮಾಡುತ್ತಿದ್ದರು' ಎಂದು ಅವರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ರಾಜ್ಯ ಪುರಾತತ್ವ ಇಲಾಖೆ ಇನ್ನೂ ಚಿನ್ನದ ನಾಣ್ಯಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ನಾಣ್ಯಗಳನ್ನು ಸಂರಕ್ಷಿಸುವಂತೆ ತಿರುಪತಿ ಸಂಸದರನ್ನು ಮುನಿರತ್ನಂ ಒತ್ತಾಯಿಸಿದ್ದಾರೆ. ಈ ನಾಣ್ಯಗಳನ್ನು ಉದ್ದೇಶಿತ ಹೊಸ ಎಎಸ್‌ಐ ಮ್ಯೂಸಿಯಂನಲ್ಲಿ ಪ್ರದರ್ಶಿಸಬಹುದು ಎಂದು ಅವರು ಹೇಳಿದ್ದಾರೆ.
ವಿಜಯನಗರ ಸಾಮ್ರಾಜ್ಯವು ಭಾರತದ ಅತ್ಯಂತ ಶ್ರೀಮಂತ ಸಾಮ್ರಾಜ್ಯಗಳಲ್ಲಿ ಒಂದಾಗಿದೆ. ಅಲ್ಲಿ ವಜ್ರ, ಮುತ್ತು, ರತ್ನಗಳನ್ನು ಸಂತೆಯಲ್ಲಿ ಮಾರುತ್ತಿದ್ದರು ಎಂದು ಹೇಳಲಾಗುತ್ತದೆ.
ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಬಹುಭಾಗವನ್ನು ಆವರಿಸಿತ್ತು. ಆಧುನಿಕ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ಮತ್ತು ಕೆಲವು ಪ್ರದೇಶಗಳನ್ನು ಒಳಗೊಂಡಿತ್ತು. ತೆಲಂಗಾಣ ಮತ್ತು ಮಹಾರಾಷ್ಟ್ರದ ಭಾಗಗಳನ್ನೂ ಇದು ಆವರಿಸಿಕೊಂಡಿತ್ತು. ಇದನ್ನು 1336 ರಲ್ಲಿ ಸಂಗಮ ರಾಜವಂಶದ ಸಹೋದರರಾದ ಹರಿಹರ I ಮತ್ತು ಬುಕ್ಕ ರಾಯ I ಸ್ಥಾಪಿಸಿದರು. ಇವರು ಯಾದವ ವಂಶಾವಳಿಯನ್ನು ಪ್ರತಿಪಾದಿಸುವ ಪಶುಪಾಲಕ ಗೋಪಾಲಕ ಸಮುದಾಯದ ನಾಯಕರು.

ಈ ಸಾಮ್ರಾಜ್ಯಕ್ಕೆ ಅದರ ರಾಜಧಾನಿ ವಿಜಯನಗರದ ಹೆಸರನ್ನು ಇಡಲಾಗಿದೆ. ಇದರ ಅವಶೇಷಗಳು ಇಂದಿನ ಹಂಪಿಯನ್ನು ಸುತ್ತುವರೆದಿವೆ. ಇದು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ.












Click it and Unblock the Notifications