ದಾಲಿಶ್ ಅಲಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಆಕ್ರೋಶ, ಎಚ್ಚರಿಕೆ ಕೊಟ್ಟ ಸ್ಪೀಕರ್
ಗುರುವಾರ ಸಂಸತ್ತಿನಲ್ಲಿ ಸಂಸದ ದಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಮೇಶ್ ಬಿಧುರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಮೇಶ್ ಬಿಧುರಿ ಅವರಿಗೆ ಎಚ್ಚರಿಕೆ ನೀಡಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ದಾಖಲೆಗಳಿಂದ ಕೂಡ ರಮೇಶ್ ಬಿಧುರಿ ಅವರ ಹೇಳಿಕೆಗಳನ್ನು ಅಳಿಸಲಾಗಿದೆ.
"ಚಂದ್ರಯಾನದ ಯಶಸ್ಸಿನ" ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ರಮೇಶ್ ಬಿಧುರಿ ಅವರು ಬಳಸಿದ ಆಕ್ಷೇಪಾರ್ಹ ಪದಗಳ ಬಗ್ಗೆ ಬಿರ್ಲಾ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾನಿಶ್ ಅಲಿ ಅವರ ಬಗ್ಗೆ ಭಯೋತ್ಪಾದಕ, ಆತಂಕವಾದಿ ಎಂದು ಕರೆದಿದ್ದರು.

ಇಂತಹ ವರ್ತನೆಯನ್ನು ಪುನರಾವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಬಿಧುರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೀಡಿಯೋವೊಂದರಲ್ಲಿ, ರಮೇಶ್ ಬಿಧುರಿ ಅವರು ದಾನಿಶ್ ಅಲಿ ವಿರುದ್ಧ ಪದೇ ಪದೇ ನಿಂದನೆ ಮಾಡುವುದನ್ನು ಕಾಣಬಹುದು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಷಾದ
ವಿರೋಧ ಪಕ್ಷದ ನಾಯಕರು ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ವಾಗ್ದಾಳಿ ನಡೆಸಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಂತೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ವಿಷಾದ ವ್ಯಕ್ತಪಡಿಸಿದರು. "ಸದಸ್ಯರು ಮಾಡಿದ ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಅನೇಕ ವಿರೋಧ ಪಕ್ಷಗಳು ರಕ್ಷಣಾ ಸಚಿವರ ಕ್ಷಮೆ ಸಾಕಾಗುವುದಿಲ್ಲ, ರಮೇಶ್ ಬಿಧುರಿ ಅವರನ್ನು ಅಮಾನತುಗೊಳಿಸಬೇಕು ಎಂದು ಹೇಳಿದರು.
"ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ರಾಜನಾಥ್ ಸಿಂಗ್ ಅವರ ಕ್ಷಮೆಯಾಚನೆ ಸ್ವೀಕಾರಾರ್ಹವಲ್ಲ ಮತ್ತು ಪೂರ್ಣ ಮನಸಿನಿಂದ ಕ್ಷಮೇ ಕೇಳಿಲ್ಲ. ಇದು ಸಂಸತ್ತಿಗೆ ಮಾಡಿದ ಅವಮಾನ, ಬಿಧುರಿ ಹೇಳಿಕೆ ಪ್ರತಿಯೊಬ್ಬ ಭಾರತೀಯನಿಗೂ ಅವಮಾನವಾಗಿದೆ ಅವರ ವಿರುದ್ಧ ಕಠಿಣ ಕ್ರಮ ತೆಗೆದೆಕೊಳ್ಳಬೇಕು" ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಕ್ಷವು (ಎಎಪಿ) ವೀಡಿಯೊವನ್ನು ಹಂಚಿಕೊಂಡಿದ್ದು "ಬಿಜೆಪಿ ದೆಹಲಿ ಸಂಸದ ಇನ್ನೊಬ್ಬ ಮುಸ್ಲಿಂ ಸಂಸದರನ್ನು ಸಂಸತ್ತಿನಲ್ಲಿ ಸ್ಪೀಕರ್ ಮುಂದೆ ಈ ಮಾತುಗಳಿಂದ ಕರೆಯುತ್ತಿದ್ದಾರೆ ಇದು ಬಿಜೆಪಿಯ ಸಂಸ್ಕೃತಿಯೇ?" ಸಂಸತ್ತಿನ ಇತಿಹಾಸದಲ್ಲಿ ಇದು ಕರಾಳ ದಿನ ಎಂದು ಹೇಳಿದೆ.
ಆರ್‌ಜೆಡಿ ಸಂಸದ ಮನೋಜ್ ಝಾ ಅವರು ಸಂಸತ್ತಿನಲ್ಲಿ ಬಿಜೆಪಿ ಸಂಸದರು ಬಳಸಿದ ಕೋಮುವಾದದ ನಿಂದನೆ ಬೇಸರ ತಂದಿದೆ ಎಂದು ಹೇಳಿದರು. "ನನಗೆ ಬೇಸರವಾಯಿತು, ಆದರೆ ಆಶ್ಚರ್ಯವಾಗಲಿಲ್ಲ. ಇದು ಪ್ರಧಾನಿಯವರ 'ವಸುಧೈವ ಕುಟುಂಬಕಂ' ವಾಕ್ಯದ ಸತ್ಯ. ಸಂಸತ್ತಿನಲ್ಲಿ ಸಂಸದರಿಗೆ ಇಂತಹ ಪದಗಳನ್ನು ಬಳಸಿದರೆ, ಮುಸ್ಲಿಮರು, ದಲಿತರ ವಿರುದ್ಧ ಯಾವ ರೀತಿಯ ಭಾಷೆಗೆ ನ್ಯಾಯಸಮ್ಮತತೆಯನ್ನು ನೀಡಲಾಗಿದೆ ಎಂದು ನಾವು ಯೋಚಿಸಬೇಕಾಗಿದೆ. ಇಲ್ಲಿಯವರೆಗೆ, ರಮೇಶ್ ಬಿಧುರಿ ಬಗ್ಗೆ ಪ್ರಧಾನಿ ಒಂದು ಮಾತನ್ನೂ ಹೇಳಿಲ್ಲ" ಎಂದರು.












Click it and Unblock the Notifications