ಜೂನ್ 23 ರಂದು ಪಾಟ್ನಾದಲ್ಲಿ ವಿಪಕ್ಷಗಳ ಸಭೆ: ರಾಹುಲ್, ಖರ್ಗೆ, ಮಮತಾ, ಸ್ಟಾಲಿನ್, ಎಡಪಕ್ಷಗಳು ಭಾಗಿ
ನವದೆಹಲಿ, ಜೂನ್. 08: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಪ್ರತಿಪಕ್ಷಗಳು ಜೂನ್ 12 ರಂದು ಪಾಟ್ನಾದಲ್ಲಿ ಸಭೆಯನ್ನು ಕರೆದಿದ್ದವು, ಇದು ಮುಂದೂಡಿದ ನಂತರ, ಉದ್ದೇಶಿತ ಸಭೆಯನ್ನು ಜೂನ್ 23 ರಂದು ನಡೆಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ.
ತರಾತುರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ, ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ರಾಜೀವ್ ರಾಜನ್ ಸಿಂಗ್ ಅಲಿಯಾಸ್ ಲಲ್ಲನ್ ಸಿಂಗ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು 2024 ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಸಂಯೋಜಿತ ಬಿಜೆಪಿ ವಿರೋಧಿ ರಂಗವನ್ನು ರಚಿಸಲು ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.

"ನಾವು ಜೂನ್ 23 ರಂದು ಪಾಟ್ನಾದಲ್ಲಿ ಕಾಂಗ್ರೆಸ್ ಉನ್ನತ ನಾಯಕರು ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಮತ್ತು ಸಮಾನ ಮನಸ್ಕ ಪಕ್ಷಗಳ ಮೆಗಾ ಸಭೆಯನ್ನು ನಡೆಸಲಿದ್ದೇವೆ. ಈಗ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ" ಎಂದು ರಾಜೀವ್ ರಾಜನ್ ಸಿಂಗ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಮತ್ತು ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ ರಾಜಾ ಮತ್ತು ಸಿಪಿಐ-ಎಂಎಲ್ (ಲಿಬರೇಶನ್) ನ ದೀಪಂಕರ್ ಭಟ್ಟಾಚಾರ್ಯ ಸೇರಿದಂತೆ ಎಡಪಕ್ಷಗಳ ಉನ್ನತ ನಾಯಕರು ಸೇರಿದಂತೆ ಇತರ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಿಜೆಪಿಯ ಆಡಳಿತದ ವಿರುದ್ಧ ಹೋರಾಡಲು ಮತ್ತು ರಾಷ್ಟ್ರದ ಸಂವಿಧಾನ ಮತ್ತು ಪ್ರಜಾಪ್ರಭುತ್ವದವನ್ನು ಅಲುಗಾಡಿಸಲು ಪ್ರಯತ್ನಿಸುತ್ತಿರುವ ಪಕ್ಷದ ವಿರುದ್ಧ ಹೋರಾಡಲು ಪ್ರತಿಪಕ್ಷಗಳ ಒಗ್ಗಟ್ಟಿನ ಸಂದೇಶವನ್ನು ದೇಶಕ್ಕೆ ರವಾನಿಸಲು ಈ ಸಭೆಯು ಪ್ರಮುಖವಾಗಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಮತ್ತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಜೆಡಿಯು ಅಧ್ಯಕ್ಷ ತೇಜಸ್ವಿ ಯಾದವ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರ ಪೂರ್ವ ನಿಗದಿತ ಇತರ ಕಾರ್ಯಕ್ರಮಗಳಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಜೂನ್ 12 ರ ಸಭೆಯನ್ನು ಭಾನುವಾರ ಮುಂದೂಡಲಾಗಿದೆ. ರಾಹುಲ್ ಗಾಂಧಿ ಅವರು ಹತ್ತು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಜೂನ್ 12ರ ನಂತರ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.












Click it and Unblock the Notifications