One Nation One Election Bill: "ಕೇಂದ್ರದಲ್ಲಿ ಸರ್ಕಾರ ಬಿದ್ದರೆ ರಾಜ್ಯಗಳ ಪರಿಸ್ಥಿತಿ ಏನು" ?
ದೇಶದಲ್ಲಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಒಂದು ದೇಶ ಒಂದು ಚುನಾವಣೆ (ಒನ್ ನೇಷನ್ ಒನ್ ಎಲೆಕ್ಷನ್ - One Nation One Election ) ಇದೀಗ ಮಹತ್ವದ ಹಂತವನ್ನು ತಲುಪಿದೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರವು ಒಂದು ದೇಶ ಒಂದು ಚುನಾವಣೆ (ಏಕಕಾಲಕ್ಕೆ ದೇಶದ ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ನಡೆಸುವ) ಮಸೂದೆ ವಿಚಾರದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ದೇಶದಲ್ಲಿ ಎಲ್ಲಾ ಕಡೆಗಳಲ್ಲೂ ಒಂದೇ ಸಮಯದಲ್ಲಿ ಚುನಾವಣೆ ನಡೆಸಬೇಕು ಎನ್ನುವುದು ಮೊದಲ ಹಂತದಲ್ಲೇ ಎಡವಿದೆ. ಇದರಲ್ಲಿ ಮುಖ್ಯವಾಗಿ ಒನ್ ನೇಷನ್ ಒನ್ ಎಲೆಕ್ಷನ್ ಜಾರಿಯಾಗಿ ಒಂದೊಮ್ಮೆ ಮುಂದೆ ಕೇಂದ್ರದಲ್ಲಿ ಸರ್ಕಾರ ಬಿದ್ದರೆ ರಾಜ್ಯಗಳ ಗತಿ ಏನು ಎನ್ನುವ ಪ್ರಶ್ನೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಕೇಂದ್ರ ಬಿಜೆಪಿ ಸರ್ಕಾರವು ಕಳೆದ ಹಲವು ತಿಂಗಳುಗಳಿಂದಲೂ ಒನ್ ನೇಷನ್ ಒನ್ ಎಲೆಕ್ಷನ್‌ನ ಬಗ್ಗೆ ಮಾತನಾಡುತ್ತಿತ್ತು. ಇದೀಗ ಮಂಗಳವಾರ (ಡಿಸೆಂಬರ್ 17)ರಂದು ಒನ್ ನೇಷನ್ ಒನ್ ಎಲೆಕ್ಷನ್ ಮಂಡನೆ ಮಾಡಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಮೂರನೇ ಎರಡಷ್ಟು ಬಹುಮತ ಇಲ್ಲದೆ ಇರುವುದುರಿಂದ ಇದಕ್ಕೆ ಸೋಲಾಗಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವ್ಯಂಗ್ಯವಾಡಿವೆ.

ಬಿಜೆಪಿ ದೇಶದಲ್ಲಿ ಒಂದು ದೇಶ ಒಂದು ಚುನಾವಣೆಯನ್ನು ಜಾರಿ ಮಾಡುವುದಕ್ಕೆ ಮುಂದಾಗಿದೆ. ಆದರೆ, ಇದನ್ನು ಜಾರಿ ಮಾಡಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಒಂದೊಮ್ಮೆ ಕೇಂದ್ರದಲ್ಲಿ ಸರ್ಕಾರ ಬಿದ್ದರೆ ಮುಂದೆ ದೇಶದಾದ್ಯಂತ ರಾಜ್ಯಗಳ ಗತಿ ಏನು ಎನ್ನುವ ಪ್ರಶ್ನೆ ಎದುರಾಗಿದೆ. ಇದೇ ಪ್ರಶ್ನೆಯನ್ನು ಕಾಂಗ್ರೆಸ್ ಸಹ ಮಾಡಿದೆ.
ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸಹ ಕೇಂದ್ರ ಬಿಜೆಪಿ ನಿರ್ಧಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮಸೂದೆಯ ಬಗ್ಗೆ ಮಾತನಾಡಿರುವ ಅವರು, ಒನ್ ನೇಷನ್ ಹಾಗೂ ಒನ್ ಎಲೆಕ್ಷನ್ ಮಸೂದೆಗಳನ್ನು ಕಾಂಗ್ರೆಸ್ ಮಾತ್ರ ವಿರೋಧ ಮಾಡಿಲ್ಲ. ಹಲವು ವಿರೋಧ ಪಕ್ಷಗಳು ಈ ಮಸೂದೆಗೆ ತಮ್ಮ ವಿರೋಧವನ್ನು ದಾಖಲಿಸಿವೆ. ಈ ಮಸೂದೆಯು ಸಂವಿಧಾನ ಒಕ್ಕೂಟ ವ್ಯವಸ್ಥೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪದ್ಧತಿ ಜಾರಿಯಾಗಿ ಕೇಂದ್ರದಲ್ಲಿ ಸರ್ಕಾರ ಬಿದ್ದರೆ ಆಗ ದೇಶದಾದ್ಯಂತ ರಾಜ್ಯಗಳ ಪರಿಸ್ಥಿತಿ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ರೀತಿ ದೇಶದಲ್ಲಿ ಚುನಾವಣೆ ಪದ್ಧತಿಯನ್ನು ಬದಲಾಯಿಸಲು ಪ್ರಯತ್ನ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಕೆಲಸ ಸಂಪೂರ್ಣ ಮೂರ್ಖತನದಿಂದ ಕೂಡಿದೆ. ಅಲ್ಲದೆ ಸಂವಿಧಾನಿಕ ತಿದ್ದುಪಡಿ ಅಂಗೀಕರಿಸುವುದಕ್ಕೆ ಅವಶ್ಯವಿರುವಷ್ಟು ಮೂರನೇ ಎರಡರಷ್ಟು ಮತ ಸಹ ಕೇಂದ್ರ ಬಿಜೆಪಿಗೆ ಇಲ್ಲ ಎನ್ನುವುದು ಇದರಿಂದಲೇ ಸಾಬೀತಾಗುತ್ತದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಬಿಜೆಪಿಯ ನಿರ್ಧಾರಕ್ಕೆ ಯಶಸ್ಸು ಸಿಕ್ಕಿಲ್ಲ. ಈ ಮಸೂದೆಗಳ ಪರವಾಗಿ 269 ಜನ ಸಂಸದರು ಮತ ಹಾಕಿದ್ದರೆ, ವಿರುದ್ಧವಾಗಿ 198 ಸಂಸದರು ಮತ ಚಲಾಯಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಕೆಲವು ಸಂಸದರು ಸಹ ಈ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications