ಡಿ.15ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವಿಲ್ಲ
ನವದೆಹಲಿ, ಡಿಸೆಂಬರ್ 01; ಕೋವಿಡ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಡಿಸೆಂಬರ್ 15ರಿಂದ ವಿಮಾನಗಳ ಸಂಚಾರವನ್ನು ಪುನಃ ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಓಮಿಕ್ರಾನ್ ಭೀತಿ ಇದಕ್ಕೆ ತಡೆ ಹಾಕಿದೆ.
ಆದರೆ ಈಗ ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುತ್ತಿಲ್ಲ. ಡಿಸೆಂಬರ್ ಅಂತ್ಯದ ತನಕ ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ಮುಂದುವರೆಯುವ ಸಾಧ್ಯತೆ ಇದೆ. ವಿದೇಶಿ ವಿಮಾನಗಳ ನಿಷೇಧ ಮುಂದುವರೆಯಲಿದೆ.
ಬುಧವಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದೆ. "ಜಾಗತಿಕ ಸನ್ನಿವೇಶದ ದೃಷ್ಟಿಯಿಂದ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ಸೇವೆಗಳ ಪುನರಾರಂಭದ ದಿನಾಂಕವನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು" ಎಂದು ಹೇಳಿದೆ.

ವಿಮಾನ ಸಂಚಾರ ಆರಂಭ; ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನಃ ಆರಂಭಿಸಲಾಗುತ್ತದೆ. 14 ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳ ವಿಮಾನಗಳ ಆಗಮನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಕೆಲವು ದಿನಗಳ ಹಿಂದೆ ಘೋಷಣೆ ಮಾಡಿತ್ತು.
ಇದರಿಂದಾಗಿ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಆಚರಣೆಗಾಗಿ ಬೇರೆ ದೇಶಗಳಿಗೆ ಹೋಗುವ ಜನರು ಸಂತಸಪಟ್ಟಿದ್ದರು. ಆದರೆ ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಲ್ಲಿ ಕಂಡುಬಂದಿರುವ ಕೋವಿಡ್ ಸೋಂಕಿನ ಹೊಸ ರೂಪಾಂತರಿ ಓಮಿಕ್ರಾನ್ ಈಗ ವಿವಿಧ ದೇಶಗಳಲ್ಲಿ ತಲ್ಲಣ ಸೃಷ್ಟಿ ಮಾಡಿದೆ.
ಈ ಮೊದಲು ಘೋಷಣೆ ಮಾಡಿದಂತೆ ಡಿಸೆಂಬರ್ 15ರಿಂದ ಯುಕೆ, ಫ್ರಾನ್ಸ್, ಜರ್ಮನಿ, ನೆದರ್‌ಲ್ಯಾಂಡ್, ಫಿನ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಚೀನಾ, ಮಾರಿಷಸ್, ಸಿಂಗಾಪುರ, ಬಾಂಗ್ಲಾದೇಶ, ಜಿಂಬಾಬ್ವೆ ಸೇರಿದಂತೆ 14 ದೇಶಗಳನ್ನು ಬಿಟ್ಟು ಉಳಿದ ದೇಶಗಳ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು.
ಹೊಸ ಕೋವಿಡ್ ರೂಪಾಂತರವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಏರ್ ಬಬಲ್ ಒಪ್ಪಂದದ ಪ್ರಕಾರ ಈ ದೇಶಗಳಿಗೆ ವಿಮಾನ ಸೇವೆ ಮುಂದುವರೆಸಲಾಗುತ್ತದೆ ಎಂದು ಭಾರತ ಸ್ಪಷ್ಟಪಡಿಸುತ್ತು. ಆದರೆ ಈಗ ಎಲ್ಲಾ ದೇಶಗಳ ವಿಮಾನಗಳ ಮೇಲಿನ ಸಂಚಾರ ನಿರ್ಬಂಧ ಮುಂದುವರೆಯಲಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಓಮಿಕ್ರಾನ್ ರೂಪಾಂತರಿ ಪತ್ತೆಯಾದ ದೇಶಗಳಿಗೆ ವಿಮಾನ ಸೇವೆ ರದ್ದುಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ವಿದೇಶಗಳಿಂದ ಆಗಮಿಸುವ ಜನರ ಮೇಲೆ ನಿಗಾವಹಿಸಬೇಕು ಎಂದು ತಜ್ಞರು ಸಹ ಸರ್ಕಾರಕ್ಕೆ ಸಲಹೆ ನೀಡಿದ್ದರು.
ಒಂದು ವರ್ಷದಿಂದ ನಿರ್ಬಂಧ; ಭಾರತವು 2020ರ ಮಾರ್ಚ್‌ನಲ್ಲಿ ಕೋವಿಡ್ ಸೋಂಕು ತೀವ್ರ ಸ್ವರೂಪ ಪಡೆದುಕೊಂಡಾಗ ಲಾಕ್‌ಡೌನ್ ಘೋಷಣೆ ಮಾಡಿತು. ಆಗ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಳಿಸಿತು. ಬಳಿಕ ಸೋಂಕು ಹತೋಟಿಗೆ ಬಂದಾಗ ಷರತ್ತುಗಳ ಅನ್ವಯ ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಾಯಿತು.
ನಂತರ ವಂದೇ ಭಾರತ್ ಮತ್ತು ಏರ್ ಬಬಲ್ ಒಪ್ಪಂದದ ಮೂಲಕ ಕೆಲವು ದೇಶಗಳಿಗೆ ವಿಮಾನ ಸೇವೆಯನ್ನು ಆರಂಭಿಸಲಾಯಿತು. ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಪುನಃ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಓಮಿಕ್ರಾನ್‌ನಿಂದ ಅದನ್ನು ಸಹ ಮುಂದೂಡಲಾಗುತ್ತಿದೆ.
7 ದಿನದ ಕ್ವಾರಂಟೈನ್; ವಿವಿಧ ರಾಜ್ಯಗಳು ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ 7 ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಓಮಿಕ್ರಾನ್ ವೈರಸ್ ಅಪಾಯವಿರುವ ದೇಶಗಳಿಂದ ಬರುವ ಜನರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮತ್ತು 7 ದಿನದ ಸಂಸ್ಥಾಪಿಕ ಕ್ವಾರಂಟೈನ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿವೆ. ಭಾರತದಲ್ಲಿ ಇದುವರೆಗೂ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ. ಆದರೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ.












Click it and Unblock the Notifications