ಒಡಿಶಾ ರೈಲು ದುರಂತ: 40 ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತಿಲ್ಲ, ಜಿಆರ್‌ಪಿ ಹೇಳಿದ್ದು ಹೀಗೆ
ನವದೆಹಲಿ, ಜೂನ್. 06: ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳ ಕಣ್ಣೀರು ಇನ್ನು ಕಡಿಮೆಯಾಗುತ್ತಿಲ್ಲ. ತಮ್ಮವರನ್ನು ಕಳೆದುಕೊಂಡಿರುವ ದುಃಖ ಅಷ್ಟು ಬೇಗ ಮನಸ್ಸಿನಿಂದ ಹೋಗುವುದಿಲ್ಲ. ಮೂರು ರೈಲುಗಳ ಭೀಕರ ಅಪಘಾತದಲ್ಲಿ ಅಸುನೀಗಿದವರ ಗುರುತು ಪತ್ತೆ ಇನ್ನು ನಡೆಯುತ್ತಲೇ ಇದೆ. ಇದರ ಜೊತೆಗೆ 40 ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ.
ಅಪಘಾತವಾದ ಮೂರು ರೈಲುಗಳ ಪೈಕಿ ಕೋರಮಂಡಲ್ ಎಕ್ಸ್‌ಪ್ರೆಸ್‌ನಿಂದ ವಶಪಡಿಸಿಕೊಂಡ ಸುಮಾರು 40 ಮೃತದೇಹಗಳಿಗೆ ಯಾವುದೇ ಗೋಚರ ಗಾಯದ ಗುರುತುಗಳಿಲ್ಲ. ಹೀಗಾಗಿ ಈ ನಲವತ್ತು ಮಂದಿ ಪ್ರಯಾಣಿಕರು ವಿದ್ಯುದಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ ಎಂದು ಜಿಆರ್‌ಪಿ ತಿಳಿಸಿದೆ.

ಒಡಿಶಾದ ಬಾಲಸೋರ್‌ನ ಸರ್ಕಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ಅಪಘಾತ ಸಂಭವಿಸಿದಾಗ ಲೈವ್ ಓವರ್‌ಹೆಡ್ ವೈರ್‌ಗಳು ತುಂಡಾಗಿ, ಕೆಲವು ಬೋಗಿಗಳಿಗೆ ಸಿಕ್ಕಿಹಾಕಿಕೊಂಡಿತ್ತು. ಇವುಗಳು ಅಪಘಾತದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರಿಗೆ ವಿದ್ಯುದಾಘಾತ ಉಂಟುಮಾಡಿದೆ ಎಂದು ಸೂಚಿಸಿದೆ.
ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಪಿ ಕುಮಾರ್ ನಾಯಕ್ ತಮ್ಮ ಎಫ್‌ಐಆರ್‌ನಲ್ಲಿ, "ಓವರ್‌ಹೆಡ್ ಎಲ್‌ಟಿ (ಲೋ ಟೆನ್ಷನ್) ಲೈನ್‌ಗೆ ಸಂಪರ್ಕಕ್ಕೆ ಬಂದ ನಂತರ ಘರ್ಷಣೆ ಮತ್ತು ವಿದ್ಯುದಾಘಾತದಿಂದ ಉಂಟಾದ ಗಾಯಗಳಿಂದ ಅನೇಕ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ತ್ರಿವಳಿ ರೈಲು ಅಪಘಾತದ ಸಂದರ್ಭದಲ್ಲಿ ಕೋಚ್‌ಗಳು ಉರುಳಿಬಿದ್ದಿದ್ದರಿಂದ ಮೇಲ್ಮುಖದ ತಂತಿಗಳು ವಿದ್ಯುತ್ ಮಾಸ್ಟ್‌ಗಳನ್ನು ಪಲ್ಟಿಯಾಗಿಸಿವೆ " ಎಂದು ಅಧಿಕಾರಿತಿಳಿಸಿದ್ದಾರೆ.

ಹೌರಾ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು - ಹೌರಾ ಎಕ್ಸ್‌ಪ್ರೆಸ್ ಮತ್ತು ಸ್ಟೇಷನರಿ ಗೂಡ್ಸ್ ರೈಲಿನ ಭೀಕರ ಅಪಘಾತ 278 ಜನರನ್ನು ಬಲಿ ತೆಗೆದುಕೊಂಡಿದೆ. ದುರಂತದಲ್ಲಿ 1200 ಮಂದಿ ಗಾಯಗೊಂಡಿದ್ದಾರೆ. ಒಡಿಶಾ ಪೊಲೀಸರು ದಾಖಲಿಸಿರುವ ಬಾಲಸೋರ್ ಜಿಆರ್‌ಪಿ ಪ್ರಕರಣ ಸಂಖ್ಯೆ 64 ಅನ್ನು ಸಿಬಿಐ ಮಂಗಳವಾರ ಕೈಗೆತ್ತಿಕೊಂಡಿದೆ.
ಇದೀಗ 278 ಜನರನ್ನು ಬಲಿ ಪಡೆದಿರುವ ಬಾಲಸೋರ್ ರೈಲು ಅಪಘಾತದಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಆಪಾದಿತ ಕ್ರಿಮಿನಲ್ ನಿರ್ಲಕ್ಷ್ಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ.
ರೈಲ್ವೇ ಸಚಿವಾಲಯದ ಕೋರಿಕೆ, ಒಡಿಶಾ ಸರ್ಕಾರದ ಒಪ್ಪಿಗೆ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಭಾರತ ಸರ್ಕಾರ) ದಿಂದ ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಮತ್ತು ಬಹನಾಗಾದಲ್ಲಿ ಗೂಡ್ಸ್ ರೈಲು ಒಳಗೊಂಡ ರೈಲು ಅಪಘಾತದ ಕುರಿತು ಮುಂದಿನ ಆದೇಶದ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ.
ಹಿಂದಿನ ದಿನ, ಸಿಬಿಐ ಅಧಿಕಾರಿಗಳ ತಂಡವು ಅಪಘಾತ ಸ್ಥಳಕ್ಕೆ ಆಗಮಿಸಿ, ಹಳಿಗಳು, ಸಿಗ್ನಲ್ ಕೊಠಡಿಯನ್ನು ಪರಿಶೀಲಿಸಿತು. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರೈಲ್ವೆ ಮಂಡಳಿಯು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವಂತೆ ಭಾನುವಾರ ಶಿಫಾರಸು ಮಾಡಿತ್ತು.












Click it and Unblock the Notifications