17 ಮೀನು ಮಾರಿ ಒಂದೇ ದಿನ ₹19.50 ಲಕ್ಷ ಗಳಿಸಿದ ಮೀನುಗಾರರು
ಒಡಿಶಾದ ಮೀನುಗಾರನೊಬ್ಬನಿಗೆ ಘೋಲ್ ಎನ್ನುವ ಅಪರೂಪದ ಮೀನು ಅದೃಷ್ಟದ ಬಾಗಿಲು ತೆರೆದಿದೆ. ಸೋಮವಾರ ಒಡಿಶಾದ ಪರದೀಪ್‌ನ ಪಾರ್ಬತಿ ಟ್ರಾಲರ್‌ನಲ್ಲಿದ್ದ ಮೀನುಗಾರರು ಬೀಸಿದ ಬಲೆಗೆ ಘೋಲ್ ಮೀನುಗಳು ಸಿಕ್ಕಿದ್ದು ಜಾಕ್‌ಪಾಟ್ ಹೊಡೆದಿದೆ.
17 ಘೋಲ್ ಮೀನುಗಳು ಸೇರಿ ಒಟ್ಟು 315 ಕೆ.ಜಿ. ತೂಕದ ಮೀನುಗಳನ್ನು ಹಿಡಿದಿದ್ದು, ಇದನ್ನು 19.50 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದು ಪರದೀಪ್ ಪ್ರದೇಶದಲ್ಲಿ ಅತ್ಯಂತ ದುಬಾರಿ ಮೀನು ಬೇಟೆಯಾಗಿದೆ.

10 ದೊಡ್ಡ ಮೀನುಗಳು ಸೇರಿದಂತೆ 17 ಘೋಲ್ ಮೀನುಗಳನ್ನು ಬಲೆಗೆ ಸಿಕ್ಕಿದ್ದವು. ಪರದೀಪ್ ಮೂಲದ ಉದ್ಯಮಿ ಬಾಗುಲಾ ಮಲ್ಲಿಕ್ ಅಪರೂಪದ ಮೀನುಗಳನ್ನು ಖರೀದಿಸಿದ್ದಾರೆ. ಮುಂಬೈ ಮೂಲದ ವಿತರಕರಿಗೆ ಮಲ್ಲಿಕ್ ಅವರು ಹೆಚ್ಚಿನ ಬೆಲೆಗೆ ಮೀನುಗಳನ್ನು ಮಾರಾಟ ಮಾಡುತ್ತಾರೆ ಎಂದು ತಿಳಿದುಬಂದಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಮೀನಿಗೆ ಯಾಕಿಷ್ಟು ಬೆಲೆ?
ಘೋಲ್ ಅನ್ನು ವೈಜ್ಞಾನಿಕವಾಗಿ ಪ್ರೋಟೋನಿಬಿಯಾ ಡಯಾಕಾಂಥಸ್ ಎಂದು ಕರೆಯಲಾಗುತ್ತದೆ, ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಳೀಯವಾಗಿರುವ ಅತ್ಯಂತ ವಿಲಕ್ಷಣ ಮತ್ತು ದುಬಾರಿ ಮೀನು ಜಾತಿಗಳಲ್ಲಿ ಒಂದಾಗಿದೆ.
ಮೀನಿನ ಹೃದಯವನ್ನು ಸಾಮಾನ್ಯವಾಗಿ 'ಸಮುದ್ರ ಚಿನ್ನ' ಎಂದು ಕರೆಯಲಾಗುತ್ತದೆ, ಇದು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ, ಇದು ವಿವಿಧ ಔಷಧಿಗಳಲ್ಲಿ ನಿರ್ಣಾಯಕ ಅಂಶವಾಗಿದೆ ಎಂದು ಹೇಳಲಾಗುತ್ತದೆ.
ಪೂರ್ವ ಏಷ್ಯಾದಲ್ಲಿ ಅದರ ಔಷಧೀಯ ಗುಣಲಕ್ಷಣಗಳಿಗಾಗಿ ಹೆಚ್ಚು ಮೌಲ್ಯಯುತವಾಗಿದೆ, ಕಪ್ಪು-ಚುಕ್ಕೆಗಳ ಕ್ರೋಕರ್ ಎಂದೂ ಕರೆಯಲ್ಪಡುವ ಘೋಲ್ ಮೀನು, ಅದರ ಪೌಷ್ಟಿಕಾಂಶದ ಪ್ರಯೋಜನಗಳಿಗೆ ಹೆಸರು ಮಾಡಿದೆ.
ಘೋಲ್ ಮೀನು ನಿಜವಾಗಿ ಗೋಲ್ಡ್ ಫಿಶ್ ಎನ್ನಬಹುದು, ಈ ಮೀನು ಸಿಕ್ಕಿದ ಮೀನುಗಾರ ಒಂದೇ ದಿನದಲ್ಲಿ ಲಕ್ಷಾಧಿಪತಿ ಆಗುವುದು ಮಾತ್ರ ಖಚಿತ. ಈ ಹಿಂದೆ ಕೂಡ ಹಲವು ಮೀನುಗಾರರು ಘೋಲ್ ಮೀನು ಸಿಕ್ಕ ನಂತರ ಲಕ್ಷ ಲಕ್ಷ ಹಣ ಸಂಪಾದನೆ ಮಾಡಿದ್ದಾರೆ.
ಈ ಮೀನು ಒಂದು ಕೆ.ಜಿ ಗೆ 6 ರಿಂದ 10 ಸಾವಿರದವರೆಗೆ ಮಾರಾಟ ಮಾಡಿದ ನಿದರ್ಶನಗಳಿವೆ. ಈ ಮೀನನ್ನು ಗುಜರಾತ್‌ನ ರಾಜ್ಯದ ಮೀನು ಎಂದು ಗುರುತಿಸಲಾಗಿದೆ. ಸದ್ಯ ಈ ಮೀನುಗಳನ್ನು ಕೃತಕ ಸಾಕಾಣಿಕೆ ಮೂಲಕ ಬೆಳೆಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.
2021ರಲ್ಲಿ ಮಹಾರಾಷ್ಟ್ರದ ಫಾಲ್ಗರ್ ನಲ್ಲಿ ಮೀನುಗಾರನೊಬ್ಬ ಬರೋಬ್ಬರಿ 157 ಘೋಲ್ ಮೀನುಗಳನ್ನು ಹಿಡಿದು ಅವುಗಳ್ನು 1.33 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದ.












Click it and Unblock the Notifications