Arnab Cyclone: ಚಂಡಮಾರುತ, ಭಾರೀ ಮಳೆ, ಪ್ರವಾಹ!; ಒಡಿಶಾ ಅನುಸರಿಸಿದ ಈ ಉಪಾಯಗಳನ್ನು ಭಾರತ ಅಳವಡಿಸಿಕೊಳ್ಳಬೇಕೇ?
Cyclone Arnab: ದಕ್ಷಿಣ ಭಾರತದಲ್ಲಿ 'ಅರ್ನಾಬ್ ಚಂಡಮಾರುತ (Arnab Cyclone Updates) ಅಬ್ಬರ ಶುರುವಾಗಿದ್ದು, ಅಕ್ಟೋಬರ್ 28ಕ್ಕೆ ಆಂಧ್ರ ಪ್ರದೇಶ ಕರಾವಳಿಗೆ, ಒಡಿಶಾ ಭಾಗಕ್ಕೆ ಅಪ್ಪಳಿಸಲಿದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ. ಹೀಗಾದಲ್ಲಿ ವೇಗದ ಬಿರುಗಾಳಿ ಸಹಿತಿ ಭಾರೀ ಮಳೆ ಸುರಿದ ಅಪಾರ ಹಾನಿ ಸಂಭವಿಸುವ ಸಾಧ್ಯತೆ ಇದೆ. ದೇಶದ ಯಾವುದೇ ನಗರದಲ್ಲಿ ಎರಡು ಗಂಟೆಗಳಲ್ಲಿ 90 ಮಿ.ಮೀ. ಮಳೆಯಾದರೆ ಅಲ್ಲಿ ಪ್ರವಾಹ ಉಂಟಾಗುತ್ತದೆ. ಹಾಗಾದರೆ ಈ ರೀತಿ ಘಟಿಸಿದರೆ ದಶಕಗಳ ಹಿಂದೆ ಒಡಿಶಾ ತನ್ನ ಹವಾಮಾನ ವ್ಯವಸ್ಥೆಯಲ್ಲಿ ಮಾಡಿಕೊಂಡು ಸುಧಾರಣೆ ಬೇರೆಡೆಗೂ ಅಳವಡಿಸಿಕೊಂಡರೇ ಅಪಾಯ ಕಡಿಮೆ ಮಾಡಬಹುದೇ? ಅಲ್ಲಿ ಕಂಡು ಕೊಂಡ ಉಪಾಯಗಳೇನು? ಭಾರತ ಅದನ್ನು ಪಾಲಿಸಬೇಕೆ?
ಮೂಲಸೌಕರ್ಯಗಳು ಎಷ್ಟೇ ಅಭಿವೃದ್ಧಿಪಡಿಸಿಕೊಂಡಿದ್ದರೂ ಸಹಿ ತೀವ್ರ ಗಾಳಿ ಮಳೆಗೆ ಎಲ್ಲವು ಕೊಚ್ಚಿ ಹೋಗುತ್ತದೆ. ಮಳೆಗೆ ಜೀವಗಳು ಹಾನಿ ಆಗುವ ಸಾಧ್ಯತೆ ಇರುತ್ತದೆ. ಅದರ ತಡೆಗೆ ಜನರಿಗೆ ಸಕಾಲದಲ್ಲಿ ಎಚ್ಚರಿಕೆ ನೀಡುವುದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಮುಖ್ಯವಾಗಿರುತ್ತದೆ ಎಂದು ಐಐಟಿ ಬಾಂಬೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಇನ್ಸ್ಟಿಟ್ಯೂಟ್ ಚೇರ್ ಪ್ರೊಫೆಸರ್ ಹಾಗೂ ಹವಾಮಾನ ಅಧ್ಯಯನಗಳ ಅಂತರಶಿಸ್ತೀಯ ಕಾರ್ಯಕ್ರಮದ ಸಂಚಾಲಕ ಡಾ. ಸುಬಿಮಲ್ ಘೋಷ್ ಅಭಿಪ್ರಾಯಪಟ್ಟಿದ್ದಾರೆ. ಇವರು ದೇಶದ ಇತರ ನಗರಗಳ ಮಳೆ, ಪ್ರವಾಹ, ಚಂಡಮಾರುತ ಅಪ್ಪಳಿಸುವ ಒಡಿಶಾದಲ್ಲಿ ಜಾರಿಗೆ ತಂದ ಸುಧಾರಣೆಗಳ ಬಗ್ಗೆ ಮಾತನಾಡಿದ್ದು, 'ದಿ ಬೆಟರ್ ಇಂಡಿಯಾ' ವರದಿ ಮಾಡಿದೆ.

ಮುಂಬೈಯಂತಹ ನಗರಗಳಲ್ಲಿ ಮಳೆಗಾದಲ್ಲಿ ಮೂರರಿಂದ ನಾಲ್ಕು ದಿನಗಳ ಅವಧಿಯಲ್ಲಿ 300ರಿಂದ 500 ಮಿ.ಮೀ.ವರೆಗೆ ಮಳೆ ಆಗುತ್ತದೆ. ಆಗ ಎದುರಾಗುವ ಪ್ರವಾಹವನ್ನು ಸಂಪೂರ್ಣ ತಡೆಯುವ ಬದಲು, ಅನಾಹುತಗಳ ಮುನ್ನ ಜನರಿಗೆ ಎಚ್ಚೆತ್ತುಕೊಳ್ಳಲು ತಿಳಿಸಲಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ಭಾರತದ ಪೂರ್ವ ಕರಾವಳಿಯ ಒಡಿಶಾದಲ್ಲಿ ಜಾರಿಗೆ ತಂದಿರುವ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಅವರು ಉಲ್ಲೇಖಿಸಿದ್ದಾರೆ.
ಭೀಕರ ಚಂಡಮಾರುತದಿಂದ ಒಡಿಶಾ ಪಾರಾಗಿದ್ದೇಗೆ?
ಗಂಟೆಗೆ 250 ಕಿ.ಮೀ.ಗಿಂತಲೂ ಹೆಚ್ಚಿನ ವೇಗದ ಗಾಳಿಯೊಂದಿಗೆ ಭೀಕರ ಚಂಡಮಾರುತವೊಂದು 1999ರ ಅಕ್ಟೋಬರ್ 29ರಂದು ಒಡಿಶಾ ರಾಜ್ಯಕ್ಕೆ ಅಪ್ಪಳಿಸಿತ್ತು. ಈ ಪ್ರಕೃತಿ ವಿಕೋಪದಲ್ಲಿ ಸುಮಾರು 10,000 ಜನರು ಪ್ರಾಣ ಕಳೆದುಕೊಂಡಿದ್ದರು. ಭಾರತದ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಇದು ಒಂದೆಂದು ಹೇಳಲಾಗುತ್ತಿದೆ. ಇದು ಅಲ್ಲಿನ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ತರಲು ಕಾರಣವಾಯಿತು.
ಎರಡು ದಶಕಗಳ ಬಳಿಕವೂ ಒಡಿಶಾ ಕರಾವಳಿಗೆ ಪ್ರಬಲ ಚಂಡಮಾರುತಗಳು ಅಪ್ಪಳಿಸಿವೆ. ಆದರೆ, ಹಿಂದಿನ ದುರಂತಕ್ಕೆ ಹೋಲಿಸಿದರೆ ಪ್ರಾಣಹಾನಿ ಗಣನೀಯವಾಗಿ ಕಡಿಮೆ ಮಾಡಲಾಗಿದೆ. ರಾಜ್ಯವು ಜನರನ್ನು ಸುರಕ್ಷಿತೆಗೆ ಮಾಡಿಕೊಂಡ ವ್ಯವಸ್ಥೆ, ವಿಪತ್ತು ಎದುರಿಸಲು ನಡೆಸಿದ ಸಿದ್ಧತೆಗಳು ಹೆಚ್ಚು ಗಮನ ಸೆಳೆಯುತ್ತಿವೆ.
'ಫನಿ' ಚಂಡಮಾರುತವು 2019ರಲ್ಲಿ ಗಂಟೆಗೆ 200 ಕಿ.ಮೀ.ಗೂ ಅಧಿಕ ವೇಗದಲ್ಲಿ ಒಡಿಶಾಗೆ ಅಪ್ಪಳಿಸಿದಾಗ ಸರ್ಕಾರವು ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಇದರಿಂದ ಸಾವು ನೋವು ತಗ್ಗಿತು. 2020ರಲ್ಲಿ ಅಂಫಾನ್ ಚಂಡಮಾರುತ ಅಪ್ಪಳಿಸಿದಾಗಲೂ ಅಷ್ಟಾಗಿ ಪ್ರಾಣಹಾನಿ ಆಗಿರಲಿಲ್ಲ. ಸಾವುಗಳ ಸಂಖ್ಯೆ 100ರ ಒಳಗೇ ಇತ್ತು.
ವಿಪತ್ತು ನಿರ್ವಹಣೆಯಲ್ಲಿ ತಂದ ಸುಧಾರಣೆಗಳೇನು?
ಒಡಿಶಾ ರಾಜ್ಯದಲ್ಲಿ 2000ರಲ್ಲಿ ಸ್ಥಾಪನೆಯಾದ 'ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹವಾಮಾನ ಮುನ್ಸೂಚನೆಗಳ ಆಧಾರದ ಮೇಲೆ ಜನರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಐಎಂಡಿ ಮುನ್ಸೂಚನೆಗಳು, ಚಂಡಮಾರುತದ ಚಲನವಲನ ಗಮನಿಸಲಾಗುತ್ತದೆ. ಕರಾವಳಿಯ 120ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಥಾಪಿಸಿರುವ 800ಕ್ಕೂ ಹೆಚ್ಚು ಬಹುಪಯೋಗಿ ಚಂಡಮಾರುತ ಆಶ್ರಯಗಳು, ಕಾವಲು ಗೋಪುರಗಳು ಈ ವ್ಯವಸ್ಥೆಯ ಭಾಗವಾಗಿವೆ. ಸೈರನ್ಗಳು ಮತ್ತು ಸಾಮೂಹಿಕ ಎಚ್ಚರಿಕೆಗಳ ಮೂಲಕ ಸುಮಾರು 1,200 ಹಳ್ಳಿಗಳ ಜನರಿಗೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಚಂಡಮಾರುತ ಎದುರಾದಾಗ ಮೊಬೈಲ್ ಸಂಪರ್ಕ ಮತ್ತು ದೂರಸಂಪರ್ಕ ವ್ಯವಸ್ಥೆಗಳು ಸ್ಥಗಿತಗೊಳಿಸಲಾಗುತ್ತದೆ. ಬಳಿಕ ಜಿಲ್ಲಾಧಿಕಾರಿಗಳಿಗೆ ನೀಡಲಾದ ಉಪಗ್ರಹ ಫೋನ್ಗಳು ಮತ್ತು ಹ್ಯಾಮ್ ರೇಡಿಯೊಳಿಂದ ಅವರು ಗ್ರಾಮ ಪಂಚಾಯತ್ಗಳು, ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ತರಬೇತಿ ಪಡೆದ ಸ್ವಯಂಸೇವಕರನ್ನು ಸಂಪರ್ಕಿಸುತ್ತಾರೆ. ಅವರೆಲ್ಲ ಅಪಾಯದ ಸ್ಥಳದಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸುತ್ತಾರೆ.
ಪ್ರವಾಹದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸುಲಭವಲ್ಲ. ಜಪಾನ್ನಂತಹ ದೇಶಗಳ ನಗರಗಳಲ್ಲಿ ಅನುಸರಿಸುವ ಪರಿಹಾರಗಳನ್ನು ಸ್ಥಳೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳದೆ ನೇರವಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಪ್ರವಾಹದಿಂದ ಆಗುವ ಹಾನಿಯನ್ನು ಕಡಿಮೆ ಮಾಡಲು ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವವರೆಗೆ ಕಾಯಬೇಕಿಲ್ಲ. ಮುಂಚಿತ ಎಚ್ಚರಿಕೆ ವ್ಯವಸ್ಥೆ ಪರಿಣಾಮಕಾರಿಯಾಗಿದ್ದರೆ, ಜನರನ್ನು ತ್ವರಿತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅನೇಕ ಜೀವಗಳನ್ನು ಉಳಿಸಬಹುದು.
ಸೂಕ್ತ ವ್ಯವಸ್ಥೆಗಳಿಂದ ಜೀವ ಉಳಿಸಲು ಸಾಧ್ಯ
2024ರಲ್ಲಿ 'ಡಾನಾ' ಚಂಡಮಾರುತದ ಮುನ್ಸೂಚನೆಯ ಆಧಾರದ ಮೇಲೆ ಶಾಲೆಗಳನ್ನು ಮುಚ್ಚಿದ ಕ್ರಮವನ್ನು ಇದಕ್ಕೆ ಉದಾಹರಣೆಯಾಗಿ ಅವರು ಉಲ್ಲೇಖಿಸಿದ್ದಾರೆ. ಇಂತಹ ಮುನ್ಸೂಚನಾ ವ್ಯವಸ್ಥೆಗಳು ಹೆಚ್ಚಿನ ಪ್ರಚಾರ ಪಡೆಯದಿದ್ದರೂ, ಅಪಾಯದ ಸಂದರ್ಭದಲ್ಲಿ ಜನರಿಗೆ ಮುನ್ನೆಚ್ಚರಿಕೆ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಜೀವಗಳನ್ನು ಉಳಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಒಡಿಶಾ ಬಳಿಕ ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ಕರಾವಳಿ ರಾಜ್ಯಗಳು ಸಮುದಾಯ ಆಧಾರಿತ ವಿಪತ್ತು ನಿರ್ವಹಣೆ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಅಭಿವೃದ್ಧಿಪಡಿಸಿವೆ.
ಒಡಿಶಾದಲ್ಲಿ ರೂಪಿಸಲಾದ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ನು ಇತರ ರಾಜ್ಯಗಳೂ ಅಳವಡಿಸಿಕೊಳ್ಳಲು ಅನುಕೂಲವಾಗುವಂತಿವೆ. ಇದೇ ರೀತಿಯ ಪ್ರಯತ್ನ ಮುಂಬೈನಲ್ಲಿಯೂ ಕೈಗೊಳ್ಳಲಾಗುತ್ತಿದೆ. ಐಐಟಿ ಬಾಂಬೆ ಅಭಿವೃದ್ಧಿಪಡಿಸಿರುವ mumbaiflood.in ವೆಬ್ಸೈಟ್ ಮೂರು ದಿನಗಳ ಮಳೆ ಮುನ್ಸೂಚನೆ, ರಾಡಾರ್ ಆಧಾರಿತ 90 ನಿಮಿಷಗಳ ತಕ್ಷಣದ ಮುನ್ಸೂಚನೆ ಹಾಗೂ ನಿರಂತರವಾಗಿ ನವೀಕರಿಸುವ ಪ್ರವಾಹ ಮಾದರಿಯನ್ನು ಒದಗಿಸುತ್ತದೆ. ಆರಂಭವಾದ ಕೆಲವೇ ದಿನಗಳಲ್ಲಿ ಈ ಪೋರ್ಟಲ್ಗೆ 10,000ಕ್ಕೂ ಹೆಚ್ಚು ಬಾರಿ ಭೇಟಿ ನೀಡಲಾಗಿತ್ತು. ಒಡಿಶಾದಲ್ಲಿ ಇರುವಂತೆ ಮುಂಬೈನಲ್ಲಿಯೂ ಕೊನೆಯ ಹಂತದವರೆಗೆ ಎಚ್ಚರಿಕೆ ತಲುಪಿಸುವ ವ್ಯವಸ್ಥೆ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
'ಅರ್ನಾಬ್' ಚಂಡಮಾರುತ
ಸದ್ಯ 'ಅರ್ನಾಬ್' ಚಂಡಮಾರುತ ಇನ್ನೆರಡು ದಿನಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ. ಒಡಿಶಾ ಜೊತೆಗೆ ಆಂಧ್ರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ತೆಲಂಗಾಣದಲ್ಲೂ ಚಂಡಮಾರುತ ಆರ್ಭಟಿಸಲಿದೆ. ಇತರ ರಾಜ್ಯಗಳಲ್ಲಿಯೂ ಈ ಪ್ರವಾಹ ನಿರ್ವಹಣಾ ವ್ಯವಸ್ಥೆ ಬದಲಾಯಿಸಿಕೊಳ್ಳುವುದು ಅನಿವಾರ್ಯವೆಂದು ತಜ್ಞರು ತಿಳಿಸಿದ್ದಾರೆ.


Click it and Unblock the Notifications
