IMD Weather Forecast: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ; ಕರ್ನಾಟಕ ಸೇರಿ 10 ರಾಜ್ಯಗಳಿಗೆ ಭರ್ಜರಿ ಮಳೆ
ನವದೆಹಲಿ: ಬಂಗಾಳಕೊಲ್ಲಿ ಮತ್ತು ಲಕ್ಷದ್ವೀಪ ಸುತ್ತಮುತ್ತ ಸಮುದ್ರಮಟ್ಟದಲ್ಲಿ ಈವರೆಗೆ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ, ಕಡಿಮೆ ಒತ್ತಡದ ಪ್ರದೇಶವು ಇದೀಗ ಮತ್ತೊಂದು ಸ್ವರೂಪದಲ್ಲಿ ತೀವ್ರಗೊಳ್ಳಲಿದೆ. ಅ.26ರಂದು ಸ್ಪಷ್ಟ ಚಂಡಮಾರುತವಾಗಿ ಬದಲಾವಣೆ ಆಗಲಿದೆ. ಇದರಿಂದ ದಕ್ಷಿಣ ಭಾರತದ ಕರಾವಳಿ ರಾಜ್ಯಗಳು ಒಳಗೊಂಡಂತೆ ಒಟ್ಟು 10ಕ್ಕೂ ಅಧಿಕ ರಾಜ್ಯಗಳಿಗೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಕ್ಟೋಬರ್ 26ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಂಡು, ಅದು ಚಲಿಸುವ ದಿಕ್ಕಿನತ್ತ ಬಿರುಗಾಳಿ ಉಂಟಾಗಲಿದ್ದು, ತಮಿಳುನಾಡು, ಕೇರಳ, ಪುದುಚೇರಿ, ಓಡಿಶಾ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿ ತೀರಕ್ಕೆ ಬಂದಪ್ಪಳಿಸಿದರೆ ತೀವ್ರ ಹಾನಿ ಎದುರಾಗುವ ಭೀತಿಯು ಇದೆ.

ಎಲ್ಲೆಲ್ಲಿ ಯಾವಾಗೆಲ್ಲ ಮಳೆ ಆಗುತ್ತೆ?
ಕೇರಳ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಅಕ್ಟೋಬರ್ 25 ಮತ್ತು 26ರಂದು ಧಾರಾಕಾರ ಮಳೆ ಆಗಲಿದೆ. ಈ ಮಹಾಮಳೆ ಅಕ್ಟೋಬರ್ 29 ರವರೆಗೂ ಮುಂದುವರಿಯಬಹುದು. ಇಂದು ಶನಿವಾರ (ಅ.24) ಕರ್ನಾಟಕ ಒಳನಾಡು ಜಿಲ್ಲೆಗಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪದ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಆಗುತ್ತಿದ್ದು, ಇದು ಮುಂದಿನ ಮೂರು ದಿನ ಮುಂದುವರಿಯಬಹುದು.
ಕೇರಳದ 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಕೇರಳದಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಅಕ್ಟೋಬರ್ 25ರಂದು 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳು ಭಾರೀ ಮಳೆ ಆಗುವ ಪಟ್ಟಿಯಲ್ಲಿವೆ.
ಆಂಧ್ರಪ್ರದೇಶ, ಒಡಿಶಾಗೂ ಭಾರೀ ಮಳೆ ಎಚ್ಚರಿಕೆ
ಬಂಗಾಳಕೊಲ್ಲಿಯ ಚಂಡಮಾರುತವು ಬಿರುಗಾಳಿ ಸಹಿತವಾಗಿ ವೇಗವಾಗಿ ಅಕ್ಟೋಬರ್ 28ರ ಸುಮಾರಿಗೆ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯತ್ತ ಚಲಿಸುವ ಲಕ್ಷಣಗಳು ಘೋರಿಸಿವೆ. ಆಂಧ್ರಪ್ರದೇಶದಲ್ಲಿ ಅಕ್ಟೋಬರ್ 27 ಮತ್ತು 28ರಂದು ಭಾರೀ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಒಡಿಶಾದಲ್ಲಿ ಸೇರಿ ದಕ್ಷಿಣ ಭಾರತದ ಕರಾವಳಿ ರಾಜ್ಯಗಳ ಜೊತೆಗೆ ಅಕ್ಟೋಬರ್ 26ರಿಂದ ಉತ್ತರ ಭಾರತದ ವಿವಿಧೆಡೆ ಮಳೆ ಚುರುಕು ಪಡೆಯಲಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಛತ್ತೀಸ್‌ಗಢದ ಕೆಲವು ಭಾಗಗಳಲ್ಲೂ ಜೋರು ಹಿಂಗಾರು ಮಳೆಯಾಗಲಿದೆ.
ಮೀನುಗಾರರಿಗೆ ಎಚ್ಚರಿಕೆ ನೀಡಿದ ಐಎಂಡಿ
ಸಮುದ್ರದ ಸ್ಥಿತಿ ಪ್ರಕ್ಷುಬ್ಧವಾಗುವ ಮುನ್ಸೂಚನೆಯ ಹಿನ್ನೆಲೆ ಅಕ್ಟೋಬರ್ 25ರವರೆಗೆ ಪೂರ್ವ-ಮಧ್ಯ ಮತ್ತು ಆಗ್ನೇಯ ಬಂಗಾಳಕೊಲ್ಲಿ ಸಮುದ್ರ ತೀರಕ್ಕೆ ಮೀನುಗಾರಿಕೆಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಕೊಡಲಾಗಿದೆ. ಅಕ್ಟೋಬರ್ 26 ರಿಂದ 29ರವರೆಗೆ ಪಶ್ಚಿಮ-ಮಧ್ಯ ಮತ್ತು ವಾಯುವ್ಯ ಬಂಗಾಳಕೊಲ್ಲಿಯ ಕೆಲವು ಭಾಗಗಳ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ತಿಳಿಸಲಾಗಿದೆ ಎಂದು ಐಎಂಡಿ ತನ್ನ ವರದಿಯಲ್ಲಿ ತಿಳಿಸಿದೆ.


Click it and Unblock the Notifications
