ಬಿಜೆಡಿ ಸೋಲು; ಸಕ್ರಿಯ ರಾಜಕೀಯದಿಂದ ವಿ. ಕೆ. ಪಾಂಡಿಯನ್ ನಿವೃತ್ತಿ
ನವದೆಹಲಿ, ಜೂನ್ 09: ಒಡಿಶಾ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಜೂನ್ 4ರಂದು ಪ್ರಕಟವಾಗಿದೆ. ಆಡಳಿತವಿರೋಧಿ ಅಲೆಗೆ ಸಿಕ್ಕಿ ಆಡಳಿತರೂಢ ಬಿಜು ಜನತಾದಳ (ಬಿಜೆಡಿ) ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ.
ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಪ್ತ, ಮಾಜಿ ಐಎಎಸ್ ಅಧಿಕಾರಿ ವಿ. ಕೆ. ಪಾಂಡಿಯನ್ ಭಾನುವಾರ ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದರು. ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಪಾಂಡಿಯನ್ ಈ ತೀರ್ಮಾನ ಪ್ರಕಟಿಸಿದ್ದಾರೆ.

ಒಡಿಶಾ ವಿಧಾನಸಭೆ ಚುನಾವಣೆ 2024ರಲ್ಲಿ ಬಿಜೆಪಿ 78, ಬಿಜೆಡಿ 51, ಕಾಂಗ್ರೆಸ್ 14, ಸಿಪಿಐ(ಎಂ) 1 ಮತ್ತು ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಬಿಜೆಡಿ ಸೋಲುವ ಮೂಲಕ ನವೀನ ಪಟ್ನಾಯಕ್ ಅವರ 24 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಗೊಂಡಿತ್ತು.
ವಿಧಾನಸಭೆ ಚುನಾವಣೆಯಲ್ಲಿ ನವೀನ ಪಟ್ನಾಯಕ್ ಎರಡು ಕ್ಷೇತ್ರದಲ್ಲಿ ಕಣಕ್ಕಿಳಿದು ಒಂದರಲ್ಲಿ ಸೋಲು ಕಂಡಿದ್ದಾರೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮಿಳುನಾಡು ಮೂಲದ ಮಾಜಿ ಐಎಎಸ್ ಅಧಿಕಾರಿ ವಿ. ಕೆ. ಪಾಂಡಿಯನ್ ಮೇಲೆ ಅತಿಯಾಗಿ ಅವಲಂಬಿತರಾಗಿದ್ದರು. ಇದನ್ನು ಬಿಜೆಪಿ ಚುನಾವಣಾ ಅಸ್ತ್ರವಾಗಿ ಮಾಡಿಕೊಂಡಿತ್ತು.
ವಿ. ಕೆ. ಪಾಂಡಿಯನ್: 2023ರ ನವೆಂಬರ್‌ನಲ್ಲಿ ವಿ. ಕೆ. ಪಾಂಡಿಯನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಡಿ ಸೇರ್ಪಡೆಯಾಗಿದ್ದರು. ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡುವ ಕುರಿತು ಅವರು ಭಾನುವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
"ಚಿಕ್ಕ ಗ್ರಾಮದ ಸಣ್ಣ ಕುಟುಂಬದಿಂದ ಬಂದ ನಾನು ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕು ಎಂದು ಕನಸು ಕಂಡವನು. ಒಡಿಶಾದ ನೆಲದ ಮೇಲೆ ನಾನು ಕಾಲಿಟ್ಟ ಕ್ಷಣದಿಂದ ಇಲ್ಲಿನ ಜನರ ಅಪಾರವಾದ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ನಾನು ಜನರಿಗಾಗಿ ಕೆಲಸ ಮಾಡಲು ಸಾಕಷ್ಟು ಶ್ರಮಿಸಿದ್ದೇನೆ" ಎಂದು ಹೇಳಿದ್ದಾರೆ.
"ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಒಂದು ವೇಳೆ ಬಿಜೆಡಿ ಮರಳಿ ಅಧಿಕಾರ ಪಡೆದಿದ್ದರೆ ಅವರು ದೇಶದಲ್ಲಿ ಅತಿ ದೀರ್ಘಕಾಲ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಪಡೆಯುತ್ತಿದ್ದರು. ಅವರಿಂದ ನಾನು ಹಲವು ವಿಚಾರಗಳನ್ನು ಕಲಿತೆ ಎಂದು" ವಿ. ಕೆ. ಪಾಂಡಿಯನ್ ವಿಡಿಯೋದಲ್ಲಿ ತಿಳಿಸಿದ್ದಾರೆ.
"ನವೀನ್ ಪಟ್ನಾಯಕ್ ಅವರ ದೂರದೃಷ್ಟಿಯನ್ನು ಒಡಿಶಾದ ಜನರಿಗೆ ನನ್ನಿಂದ ತಲುಪಿಸಲು ಬಯಸಿದರು. ನಾವು ಆರೋಗ್ಯ, ಶಿಕ್ಷಣ, ಬಡತನ ನಿರ್ಮೂಲನೆ, ಬಂದರು, ಹೂಡಿಕೆ, ಮಹಿಳಾ ಸಬಲೀಕರಣ, ಮೂಲ ಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ" ಎಂದು ಪಾಂಡಿಯನ್ ವಿಡಿಯೋದಲ್ಲಿ ವಿವರಿಸಿದ್ದಾರೆ.
"ನಾನು ನಾಗರೀಕ ಸೇವೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ನೆರವಾಗಲು ಮಾತ್ರ. ರಾಜಕೀಯದಲ್ಲಿ ನನಗೆ ಯಾವುದೇ ಹುದ್ದೆ, ಅಧಿಕಾರ ಬೇಡ. ಆದ್ದರಿಂದ ನಾನು ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿಲ್ಲ. ಪಕ್ಷದಲ್ಲಿಯೂ ಯಾವ ಹುದ್ದೆ ಪಡೆಯಲಿಲ್ಲ" ಎಂದು ಪಾಂಡಿಯನ್ ಸ್ಪಷ್ಟಪಡಿಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾದಳ (ಬಿಜೆಡಿ) ರಾಜ್ಯದಲ್ಲಿ 12 ಸೀಟುಗಳಲ್ಲಿ ಜಯಗಳಿಸಿತ್ತು. ಈ ಬಾರಿ ಒಂದು ಸ್ಥಾನ ಗೆಲ್ಲಲು ಸಹ ವಿಫಲವಾಗಿದೆ. ಅಲ್ಲದೇ 2019ರ ವಿಧಾನಸಭೆ ಚುನಾವಣೆಯಲ್ಲಿ 112 ಸೀಟು ಗೆದ್ದಿತ್ತು. ಈ ಬಾರಿ 51 ಸೀಟುಗಳಲ್ಲಿ ಜಯಗಳಿಸಿ, ಅಧಿಕಾರ ಕಳೆದುಕೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಂತರ ವಿ. ಕೆ. ಪಾಂಡಿಯನ್ ಉತ್ತರಾಧಿಕಾರಿಯಾಗುತ್ತಾರೆ. ತಮಿಳುನಾಡು ಮೂಲದ ಅವರು ಸ್ಥಳೀಯರಲ್ಲ. ಹೊರಗಿನವರು ಒಡಿಶಾವನ್ನು ಆಳುತ್ತಾರೆ ಎಂದು ಭಾರೀ ಪ್ರಚಾರ ಮಾಡಿತು. ಒಡಿಶಾದ ಅಸ್ಮಿತೆ ಕುರಿತು ಪ್ರಶ್ನೆಗಳನ್ನು ಎತ್ತಿತು. ಬಿಜೆಡಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು.












Click it and Unblock the Notifications