70 ಸಾವಿರ ಡಾಲರ್ ಸಾಲ, ಒಂಟಿತನ, ಲೇಆಫ್: ಕಷ್ಟಗಳನ್ನು ಮೆಟ್ಟಿ ನಿಂತು ಕೆನಡಾದಲ್ಲಿ ಮಿಂಚಿದ ಬೆಂಗಳೂರು ಟೆಕ್ಕಿ

ಬೆಂಗಳೂರು: ವಿದೇಶದಲ್ಲಿ ನೆಲೆಸುವುದು, ಅಲ್ಲಿನ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡುವುದು ಅನೇಕರ ಪಾಲಿಗೆ ಒಂದು ಬಹುದೊಡ್ಡ ಕನಸು. ಆದರೆ ಆ ಕನಸನ್ನು ನನಸು ಮಾಡಿಕೊಳ್ಳುವ ಹಾದಿ ಯಾರು ಅಂದುಕೊಂಡಷ್ಟು ಸುಲಭವಲ್ಲ. ಬೆಂಗಳೂರು ಮೂಲದ 33 ವರ್ಷದ ಟೆಕ್ಕಿ ಸಬಾ ಹುಸೇನ್ ಖಾಜಿ ಅವರು ವಿದೇಶಿ ನೆಲದಲ್ಲಿ ತಾವೆದುರಿಸಿದ ಆರ್ಥಿಕ ಮತ್ತು ಭಾವನಾತ್ಮಕ ಸವಾಲುಗಳನ್ನು, 70,000 ಡಾಲರ್ ಶೈಕ್ಷಣಿಕ ಸಾಲದ ಹೊರೆ ಮತ್ತು ಕಾರ್ಪೊರೇಟ್ ಲೇಆಫ್‌ಗಳನ್ನು ಮೆಟ್ಟಿ ನಿಂತು ಯಶಸ್ವಿಯಾದ ಕಥೆಯನ್ನು ಹಿಂದೂಸ್ತಾನ್‌ ಟೈಮ್ಸ್‌ ಜೊತೆ ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಕೆನಡಾದ ಟೊರೊಂಟೊದಲ್ಲಿ ಉನ್ನತ ಕಾರ್ಪೊರೇಟ್ ಉದ್ಯೋಗಿಯಾಗಿರುವ ಸಬಾ, ತಮ್ಮ ಈ ಸ್ಫೂರ್ತಿದಾಯಕ ಪಯಣವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈ ಅನಿವಾಸಿ ಭಾರತೀಯೆ (NRI) ಮೊದಲು ಅಮೆರಿಕಕ್ಕೆ ತೆರಳಿ, ನಂತರ ಕೆನಡಾವನ್ನು ತಮ್ಮ ಕಾಯಂ ನೆಲೆಯಾಗಿ ಮಾಡಿಕೊಂಡರು. ಅವರ ಈ ಸಾಧನೆಯ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ.

NRI Techie

ಶಿಕ್ಷಣ ಮತ್ತು ಐಐಟಿ ವೈಫಲ್ಯ

ಕಾರ್ನೆಲ್‌ನಂತಹ ಐವಿ ಲೀಗ್ ವಿಶ್ವವಿದ್ಯಾಲಯವನ್ನು ಪ್ರವೇಶಿಸುವ ಮುನ್ನ ಸಬಾ ಅವರು ಭಾರತೀಯ ಶಿಕ್ಷಣ ವ್ಯವಸ್ಥೆಯ ಕಠಿಣ ವಾಸ್ತವಗಳನ್ನು ಎದುರಿಸಿದ್ದರು. "ನಾನು ಎರಡು ಬಾರಿ ಐಐಟಿ ಪ್ರವೇಶ ಪರೀಕ್ಷೆ ಬರೆದು ವಿಫಲಳಾದೆ. ಆ ಸಮಯದಲ್ಲಿ ಅದೇ ನನ್ನ ಜೀವನದ ಅಂತ್ಯ ಎಂದು ಭಾವಿಸಿದ್ದೆ. ಆದರೆ ಜೀವನ ಅಲ್ಲಿಗೇ ನಿಲ್ಲುವುದಿಲ್ಲ. ನಾನು ಇಂಜಿನಿಯರಿಂಗ್ ಮುಗಿಸಿ, ಭವಿಷ್ಯದ ಬಗ್ಗೆ ಅನಿಶ್ಚಿತತೆ ಇದ್ದರೂ ಧೈರ್ಯ ಮಾಡಿ ವಿಶ್ವದ ಟಾಪ್ 5 ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕಾರ್ನೆಲ್‌ಗೆ ಅರ್ಜಿ ಸಲ್ಲಿಸಿದೆ. ಅಲ್ಲಿ ಅವಕಾಶ ಸಿಕ್ಕಾಗ ನನ್ನ ಸಾಮರ್ಥ್ಯದ ಬಗ್ಗೆ ನನಗೇ ಮೊದಲ ಬಾರಿಗೆ ವಿಶ್ವಾಸ ಮೂಡಿತು" ಎಂದು ಅವರು ಸ್ಮರಿಸುತ್ತಾರೆ.

ಉದ್ಯೋಗದಲ್ಲಿದ್ದಾಗ ಏಕಾಏಕಿ ಲೇಆಫ್ ಆದಾಗ ಅವರು ದೊಡ್ಡ ಸವಾಲನ್ನು ಎದುರಿಸಬೇಕಾಯಿತು. "ಕೆಲಸ ಹೋದಾಗ ನಾನು ಶೂನ್ಯದಿಂದ ಮತ್ತೆ ಆರಂಭಿಸಬೇಕಾಯಿತು. ಆದರೆ ನನಗೆ ಅದು ಅತಿ ದೊಡ್ಡ ಸವಾಲಾಗಿರಲಿಲ್ಲ. ನನ್ನನ್ನು ಒಂಟಿಯಾಗಿ ಬೆಳೆಸಿದ ನನ್ನ ತಾಯಿಯಿಂದ ಸಾವಿರಾರು ಮೈಲುಗಳಷ್ಟು ದೂರವಿದ್ದೆ. ಅದೇ ನನ್ನ ಪಾಲಿಗೆ ಬಹುದೊಡ್ಡ ನೋವಾಗಿತ್ತು. ನನ್ನ ತಾಯಿ, ಅತ್ತೆ ಮತ್ತು ಪತಿ ನನ್ನ ಬೆನ್ನಿಗೆ ನಿಂತರು. ನನ್ನ ತಾಯಿ ನನ್ನನ್ನು 'ಮಗ' ಎಂದು ಕರೆಯುತ್ತಿದ್ದರು. ಆ ಜವಾಬ್ದಾರಿ ಹಾಗೂ ಪ್ರೀತಿಯೇ ನನ್ನನ್ನು ಮುನ್ನಡೆಸಿತು" ಎನ್ನುತ್ತಾರೆ ಸಬಾ.

ವಿದೇಶಿ ನೆಲದ ಹೋರಾಟ

ವಿದೇಶದಲ್ಲಿನ ಸವಾಲುಗಳ ಬಗ್ಗೆ ವಿವರಿಸಿದ ಅವರು, "ಭಾರತದಲ್ಲಿ ಒಳ್ಳೆ ಅಂಕ ಬಂದರೆ ಒಳ್ಳೆ ಜೀವನ ಸಿಗುತ್ತದೆ ಎಂದು ಬೆಳೆಯುತ್ತೇವೆ. ಆದರೆ ಅಮೆರಿಕದಲ್ಲಿ ಹಾಗಿಲ್ಲ. ಅಲ್ಲಿ ಕೇವಲ ಅಂಕಗಳ ಆಧಾರದ ಮೇಲೆ ಏನೂ ಸಿಗುವುದಿಲ್ಲ. ಹೊಸ ಜನರನ್ನು ಭೇಟಿಯಾಗಿ, ಅವಕಾಶಗಳನ್ನು ನಾವೇ ಹುಡುಕಿಕೊಳ್ಳಬೇಕಿತ್ತು. ಇದು ನನಗೆ ಅತ್ಯಂತ ಕಷ್ಟಕರವಾಗಿತ್ತು.

ಆರ್ಥಿಕವಾಗಿಯೂ ನಾನು ತುಂಬಾ ಭಯಭೀತಳಾಗಿದ್ದೆ. ನನ್ನ ತಲೆಯ ಮೇಲೆ 70,000 ಡಾಲರ್ (ಅಂದಾಜು 58 ಲಕ್ಷ ರೂ.) ಶಿಕ್ಷಣ ಸಾಲವಿತ್ತು. ಅಮೆರಿಕಕ್ಕೆ ವಿಮಾನ ಹತ್ತುವ ಮುನ್ನವೇ ನನ್ನ ಬಳಿ ಇದ್ದ 10,000 ಡಾಲರ್ ಉಳಿತಾಯವೆಲ್ಲ ಖಾಲಿಯಾಗಿತ್ತು. ಉದ್ಯೋಗವಿಲ್ಲದೆ, ಯಾವುದೇ ಆರ್ಥಿಕ ಭದ್ರತೆ ಇಲ್ಲದೆ ಹೊಸ ದೇಶದಲ್ಲಿ ಜೀವನ ಆರಂಭಿಸಲು ನಿಜಕ್ಕೂ ಕಷ್ಟವಾಗಿತ್ತು" ಎಂದು ಹೇಳಿದ್ದಾರೆ. ಇದರ ಜೊತೆಗೆ ಮದುವೆಯಾದ ಬಳಿಕ 2 ವರ್ಷಗಳ ಕಾಲ ಪತಿಯಿಂದ ದೂರವಿದ್ದು ವಿದ್ಯಾಭ್ಯಾಸ ಮಾಡುವುದು ಅವರಿಗೆ ಸವಾಲಾಗಿತ್ತು.

ಯುವಕರಿಗೆ ಕಿವಿಮಾತು

ಇಂದು ಸಬಾ ಅವರು ಕೆನಡಾದಲ್ಲಿ ಪತಿ ಹಾಗೂ ಮಗುವಿನೊಂದಿಗೆ ನೆಲೆಸಿದ್ದು, ಅಲ್ಲಿನ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿಗಳ ಪಟ್ಟಿಯಲ್ಲಿದ್ದಾರೆ. ಜೊತೆಗೆ, ತಮ್ಮ ತಾಯಿಯನ್ನು ಪ್ರಪಂಚ ಪರ್ಯಟನೆ ಮಾಡಿಸುವ ಕನಸನ್ನು ನನಸು ಮಾಡಿದ್ದಾರೆ. "ವಿದೇಶಿ ಜೀವನ ಯಾರು ಅಂದುಕೊಂಡಷ್ಟು ಸುಲಭವಿಲ್ಲ. ಒಂಟಿತನ, ಆರ್ಥಿಕ ಅಸ್ಥಿರತೆ ಎಲ್ಲವೂ ಇರುತ್ತದೆ. ಆದರೆ ಅದು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ. ಯುವಜನತೆಗೆ ನನ್ನದೊಂದು ಕಿವಿಮಾತು; ನಿಮ್ಮ ಕಂಫರ್ಟ್ ಝೋನ್ ನಿಂದ ಹೊರಬನ್ನಿ. ಹೊಸ ಜಾಗಕ್ಕೆ ಹೋಗಿ ನಿಮ್ಮದೇ ಆದ ಜೀವನ ಕಟ್ಟಿಕೊಳ್ಳಿ. ಕಷ್ಟಗಳು ನಿಮ್ಮ ನಿಜವಾದ ಸಾಮರ್ಥ್ಯವನ್ನು ಹೊರತರುತ್ತವೆ" ಎಂದು ಅವರು ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+