ಸ್ವಾತಂತ್ರ್ಯ ಯಾರೂ ನೀಡುದಿಲ್ಲ, ನಾವೇ ಪಡಕೊಬೇಕು: ಅಮೆರಿಕದ ಉದ್ಯೋಗ ಬಿಟ್ಟು ಭಾರತದಲ್ಲಿ ಉದ್ಯಮ ಕಟ್ಟಿದ CEO ಅಹನಾ ಗೌತಮ್
ಮುಂಬೈ: ವಿದೇಶದಲ್ಲಿ ಉನ್ನತ ವ್ಯಾಸಂಗ, ಅಮೆರಿಕದ ಕಾರ್ಪೊರೇಟ್ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ, ಐಷಾರಾಮಿ ಜೀವನ, ಎಲ್ಲರನ್ನ ಸೆಳೆಯುವ ಕಾರ್ನರ್ ಆಫೀಸ್‌ನಲ್ಲಿ ಕೆಲಸ - ಇವೆಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ತಮ್ಮದೇ ಆದ ಹೊಸ ಉದ್ಯಮವನ್ನ ಕಟ್ಟುವ ಸಾಹಸಕ್ಕೆ ಕೈಹಾಕುವುದು ಎಂದರೆ ಅಷ್ಟು ಸುಲಭದ ಮಾತಲ್ಲ ನೋಡಿ.
ಆದರೆ, ಮುಂಬೈ ಮೂಲದ ಸ್ಟಾರ್ಟ್ಅಪ್ 'ಓಪನ್ ಸೀಕ್ರೆಟ್' ಸಂಸ್ಥೆಯ ಸಿಇಒ ಅಹನಾ ಗೌತಮ್ ಅವರು ಈ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಹೌದು, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಸಂದೇಶವೊಂದು ಈಗ ವೈರಲ್ ಆಗಿದ್ದು, ಅನೇಕ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿದೆ.

ಅಮೆರಿಕದ ಐಷಾರಾಮಿ ಉದ್ಯೋಗ ತ್ಯಜಿಸಿದ ನಿರ್ಧಾರ
ರಾಜಸ್ಥಾನದ ಭರತ್‌ಪುರ ಎಂಬ ಸಣ್ಣ ಊರಿನಿಂದ ಬಂದು, ಪ್ರತಿಷ್ಠಿತ ಐಐಟಿ ಬಾಂಬೆ ಹಾಗೂ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಅಹನಾ ಗೌತಮ್ ಅವರಿಗೆ ಅಮೆರಿಕದಲ್ಲಿ ಒಳ್ಳೆಯ ಭವಿಷ್ಯವಿತ್ತು. ಆದರೆ, "ಭರತ್‌ಪುರದಿಂದ ಬೋಸ್ಟನ್‌ಗೆ ತಲುಪುವುದು ನನ್ನ ಗುರಿಯಾಗಿರಲಿಲ್ಲ. ಬದಲಿಗೆ ನನ್ನ ತಾಯ್ನಾಡಿಗೆ ಮರಳಿ, ಇಲ್ಲೇ ಏನನ್ನಾದರೂ ಸಾಧಿಸಬೇಕು ಎಂಬುದು ನನ್ನ ಕನಸಾಗಿತ್ತು. ಸ್ವಾತಂತ್ರ್ಯವನ್ನು ಯಾರೂ ನಿಮ್ಮ ಕೈಗೆ ತಂದು ಕೊಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು," ಎಂದು ಅಹನಾ ಅವರು ಬರೆದುಕೊಂಡಿದ್ದಾರೆ.
ಅಮೆರಿಕದಲ್ಲಿ ಸಿಗಲಿದ್ದ ಉನ್ನತ ಹುದ್ದೆಗಿಂತ, ಸ್ವದೇಶದಲ್ಲಿ ಏನನ್ನಾದರೂ ಸೃಷ್ಟಿಸುವ ತುಡಿತ ಅವರಲ್ಲಿ ಹೆಚ್ಚಾಗಿತ್ತು.
ಓಪನ್ ಸೀಕ್ರೆಟ್ ಸಿಇಒ
ಭಾರತದಲ್ಲಿ ಒಂದು ಸ್ವಂತ ಉದ್ಯಮ ಕಟ್ಟಿ ನಡೆಸುವುದು ಅಷ್ಟು ಸುಲಭದ ಹಾದಿಯಲ್ಲ ಎಂಬುದನ್ನ ಓಪನ್ ಸೀಕ್ರೆಟ್ ಸಿಇಒ ಅಹನಾ ಹೇಳುತ್ತಾರೆ. "ಕೆಲವು ದಿನಗಳು ತುಂಬಾ ಗೊಂದಲಮಯವಾಗಿರುತ್ತವೆ. ಸರಕುಗಳ ರವಾನೆಯಲ್ಲಿ ವಿಳಂಬ, ನೇಮಕಾತಿಯಲ್ಲಾಗುವ ತಪ್ಪುಗಳು, ಲೆಕ್ಕಾಚಾರಗಳು ಕೈಕೊಡುವುದು - ಹೀಗೆ ಪ್ರತಿದಿನವೂ ಹೊಸ ಸವಾಲುಗಳು ಎದುರಾಗುತ್ತವೆ. ಆದರೆ, ವಿದೇಶದಲ್ಲಿ ಸಿಗುವ ಸುಲಭದ ಬದುಕಿಗಿಂತ, ನನ್ನ ದೇಶದಲ್ಲಿ ನಾನು ಎದುರಿಸುವ ಈ ಕಷ್ಟದ ದಿನಗಳೇ ನನಗೆ ಹೆಚ್ಚು ತೃಪ್ತಿ ನೀಡುತ್ತವೆ," ಎಂದು ಅವರು ಹೇಳಿದ್ದಾರೆ. ತಮ್ಮ ಕನಸಿನ ಉದ್ಯಮವನ್ನ ಬೆಳೆಸುವಲ್ಲಿನ ಶ್ರಮವು ಅವರಿಗೆ ಹೆಮ್ಮೆಯ ವಿಷಯವಾಗಿದೆ ಎಂಬುದನ್ನು ಈ ಮಾತುಗಳು ಸಾಬೀತುಪಡಿಸುತ್ತವೆ.
Today, the eve of Independence Day, I’m in my office in India - not the corner office in the U.S. I was on track for.
— Ahana Gautam (@GautamAhana) August 14, 2026
Nobody hands you independence. You take it. I took mine the day I decided Bharatpur-to-Boston wasn’t the finish line - building back home was.
It’s messy some… pic.twitter.com/BBSQSdE2Yh
ಭಾರತದ ಭವಿಷ್ಯದ ಬಗ್ಗೆ ಒಲವು
ವಿದೇಶದಲ್ಲಿ ನೆಲೆಸಿರುವ, ಆದರೆ ಭಾರತಕ್ಕೆ ಮರಳಲು ಯೋಚಿಸುತ್ತಿರುವ ಭಾರತೀಯರಿಗೆ ಅಹನಾ ಅವರು ಸಂದೇಶವೊಂದನ್ನು ನೀಡಿದ್ದಾರೆ. "ಭಾರತದ ಕಥೆಯನ್ನ ಹೊರಗಿನಿಂದ ನೋಡುವ ಕಾಲ ಮುಗಿದಿದೆ. ಈಗ ನಾವೇ ಆ ಕಥೆಯನ್ನು ಬರೆಯುತ್ತಿದ್ದೇವೆ. ಭಾರತಕ್ಕೆ ಮರಳಲು ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಮುಂದಿನ ದಿನಗಳಲ್ಲಿ ಇಡೀ ಜಗತ್ತು 'ಇಂಡಿಯನ್ ಡ್ರೀಮ್' ಬೆನ್ನೇರಬೇಕು," ಎಂದು ಅವರು ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಮೆಚ್ಚುಗೆ
ಅಹನಾ ಅವರ ಈ ಸ್ಫೂರ್ತಿದಾಯಕ ಪೋಸ್ಟ್‌ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ರೆಸ್ಪಾನಸ್ ವ್ಯಕ್ತವಾಗಿದೆ. "ನೀವು ಸ್ವತಂತ್ರ ಮಹಿಳೆಯಾಗಿ ಬೆಳೆದಿರುವುದು ನಮಗೆ ಹೆಮ್ಮೆ ತಂದಿದೆ. ದೇಶದ ಪ್ರತಿಯೊಬ್ಬ ಹೆಣ್ಣುಮಗಳೂ ನಿಮ್ಮಂತೆ ಸ್ವತಂತ್ರಳಾಗಬೇಕು," ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಅಮೆರಿಕದ ಕನಸುಗಳನ್ನ ಬಿಟ್ಟು, ಎಲ್ಲವನ್ನೂ ನೀಡಿದ ತಾಯ್ನಾಡಿಗೆ ಮರಳುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ನಿಮ್ಮ ಧೈರ್ಯ, ದೃಢನಿಶ್ಚಯ ಮತ್ತು ಸಾಧನೆಗೆ ಅಭಿನಂದನೆಗಳು," ಎಂದು ಶುಭ ಹಾರೈಸಿದ್ದಾರೆ.
ಅನ್ಯ ದೇಶದ ಆಕರ್ಷಕ ಸಂಬಳವನ್ನು ತ್ಯಜಿಸಿ, ಸ್ವದೇಶದಲ್ಲಿ ಕಷ್ಟಪಟ್ಟು ದುಡಿಯುವ ಇವರ ಮನೋಭಾವವನ್ನು ಹಲವರು ಕೊಂಡಾಡಿದ್ದಾರೆ.


Click it and Unblock the Notifications
