ಸಿಬಿಎಸ್ ಇ ಶಾಲೆ ದಾಖಲಾತಿಗೆ ಪೋಷಕರ ಆದಾಯ ದಾಖಲೆ ಬೇಕಿಲ್ಲ
ನವದೆಹಲಿ, ಸೆಪ್ಟೆಂಬರ್ 28: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ ಇ) ಮಾನ್ಯತೆ ಪಡೆದ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲುಗೊಳಿಸಲು ಇಚ್ಛಿಸುವ ಪೋಷಕರಿಗೆ ಸಿಹಿ ಸುದ್ದಿಯಿದು. ಇನ್ನು, ಈ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸುವಾಗ ಈವರೆಗೆ ಕಡ್ಡಾಯವಾಗಿ ನೀಡಬೇಕಿದ್ದ ಪೋಷಕರ ಆದಾಯ ದಾಖಲೆಗಳ ನೀಡಿಕೆಯ ನಿಯಮವನ್ನು ರದ್ದುಪಡಿಸಲಾಗಿದೆ.
ಈ ನಿಯಮ, 9ನೇ ಹಾಗೂ 11ನೇ ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ ಎಂದು ಹೇಳಿರುವ ಸಿಬಿಎಸ್ ಇ, ದಾಖಲಾತಿ ವೇಳೆ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಸೂಚಿಸಿದೆ.

ಈ ಬಗ್ಗೆ ತನ್ನ ಅಧೀನದಲ್ಲಿರುವ ಎಲ್ಲಾ ಶಾಲೆಗಳಿಗೂ ಸಿಬಿಎಸ್ ಇ ಸಂದೇಶ ರವಾನಿಸಿದೆ.
2018ರಿಂದ 11ನೇ ತರಗತಿಯ ಪರೀಕ್ಷೆಯ ಜತೆಯಲ್ಲೇ 10ನೇ ತರಗತಿಯ ಪರೀಕ್ಷೆಯನ್ನೂ ನಡೆಸಲು ಸಿಬಿಎಸ್ ಇ ಸಿದ್ಧವಾಗಿರುವುದರಿಂದ ಈ ಹೊಸ ನಿಯಮಗಳನ್ನು ಜಾರಿಗೊಳಿಲಾಗಿದೆ.
ಇನ್ನುಳಿದಂತೆ, ಎಲ್ಲಾ ಶಾಲೆಗಳನ್ನು ತಮ್ಮಲ್ಲಿನ 9ನೇ ಹಾಗೂ 11ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಹೆಸರನ್ನು ಆಯಾ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸಂಖ್ಯೆಗಳ ಸಮೇತ ತಮ್ಮ ವೆಬ್ ಸೈಟ್ ಗಳಲ್ಲಿ ಪ್ರಕಟಿಸಬೇಕೆಂದು ಮಂಡಳಿ ಸೂಚಿಸಿದೆ. ಆಧಾರ್ ಕಾರ್ಡ್ ನೀಡುವಿಕೆ ಯೋಜನೆ ಇನ್ನೂ ಶುರುವಾಗಿರದ ರಾಜ್ಯಗಳಲ್ಲಿನ ಶಾಲೆಗಳು, ಆಯಾ ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಿದೆ.











Click it and Unblock the Notifications