ಸಿಬಿಐ ನಿರ್ದೇಶಕರ ಆಯ್ಕೆ : ಮೋದಿ ನೇತೃತ್ವದ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ
ನವದೆಹಲಿ, ಜನವರಿ 24 : ನೂತನ ಸಿಬಿಐ ನಿರ್ದೇಶಕರ ಆಯ್ಕೆ ಕುರಿತು ಗುರುವಾರ ನಡೆದ ಸಭೆ ಅಂತಿಮ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ. ಮುಂದಿನ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಯಲಿದೆ.
ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಉನ್ನತ ಮಟ್ಟ ಸಭೆ ನಡೆಯಿತು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಇಂದಿನ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮುಂದಿನವಾರ ಮತ್ತೊಮ್ಮೆ ಸಭೆ ನಡೆಯಲಿದೆ' ಎಂದು ಹೇಳಿದರು.

'70 ರಿಂದ 80 ಹೆಸರುಗಳು ಸಮಿತಿಯ ಮುಂದೆ ಬಂದಿದ್ದವು. ಆದರೆ, ಅವರು ಯಾವ ಯಾವ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬ ವಿವರಗಳು ಅಪೂರ್ಣವಾಗಿದ್ದವು. ಆದ್ದರಿಂದ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಮತ್ತು ಮುಖ್ಯ ನ್ಯಾಯಮೂರ್ತಿಗಳು ಶೀಘ್ರವೇ ಮತ್ತೊಂದು ಸುತ್ತಿನ ಸಭೆ ಕರೆಯಬೇಕು ಎಂದು ಮನವಿ ಮಾಡಿದೆವು' ಎಂದು ಖರ್ಗೆ ಹೇಳಿದರು.
ಎರಡು ವಾರಗಳ ಹಿಂದೆ ಉನ್ನತ ಮಟ್ಟದ ಸಭೆ ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿತ್ತು. ಆದ್ದರಿಂದ, ನೂತನ ನಿರ್ದೇಶಕರ ಆಯ್ಕೆಗೆ ಗುರುವಾರ ಸಭೆ ಸೇರಲಾಗಿತ್ತು.
ಉನ್ನತ ಮೂಲಗಳ ಮಾಹಿತಿ ಪ್ರಕಾರ 1983 ಬ್ಯಾಚ್ ಐಎಎಸ್ ಅಧಿಕಾರಿ ಶಿವಾನಂದ ಝಾ, ಬಿಎಸ್‌ಎಫ್ ಡೈರೆಕ್ಟರ್ ಜನರಲ್ ರಜನಿಕಾಂತ್ ಮಿಶ್ರಾ, ಸಿಐಎಸ್‌ಎಫ್ ಡೈರೆಕ್ಟರ್ ಜನರಲ್ ರಾಜೇಶ್ ರಂಜನ್ ಮುಂತಾದವರ ಹೆಸರುಗಳು ಮುಂಚೂಣಿಯಲ್ಲಿವೆ.











Click it and Unblock the Notifications