Breaking: ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸದ ಆಯೋಗ
ಅಹಮದಾಬಾದ್, ಅಕ್ಟೋಬರ್ 14: ಗುಜರಾತ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿಲ್ಲ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ರಾಜೀವ್ ಕುಮಾರ್, ಕಳೆದ ಚುನಾವಣೆಯಿಂದ ನಾವು ಸಂಪ್ರದಾಯದಂತೆ ನಡೆದುಕೊಂಡಿದ್ದೇವೆ ಎಂದರು.
ಒಂದು ರಾಜ್ಯದ ಚುನಾವಣಾ ಫಲಿತಾಂಶಗಳು ಮತ್ತೊಂದು ರಾಜ್ಯದ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಇದರ ಬೆನ್ನಲ್ಲೇ ಗುಜರಾತ್ ವಿಧಾನಸಭಾ ಚುನಾವಣೆಯು ಒಂದು ತಿಂಗಳ ನಂತರ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಚುನಾವಣೆಯು ಏಕಕಾಲಕ್ಕೆ ನಡೆಯುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಶುಕ್ರವಾರವೇ ಎರಡು ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟಿಸಲಾಗುವುದು ಎಂದುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ. ಇದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ಏಕೆಂದರೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸರ್ಕಾರದ ಅವಧಿ ಮುಕ್ತಾಯದ ನಡುವೆ ಗರಿಷ್ಠ 6 ತಿಂಗಳ ಅಂತರವಿದೆ. ಇಂಥ ಸಂದರ್ಭಗಳಲ್ಲಿ ಎರಡೂ ರಾಜ್ಯಗಳ ಚುನಾವಣೆಯನ್ನು ಈ ಹಿಂದೆ ಏಕಕಾಲಕ್ಕೆ ಘೋಷಿಸಲಾಗುತ್ತಿತ್ತು.

ನಿಯಮ ಉಲ್ಲಂಘಿಸಿಲ್ಲ ಎಂದ ರಾಜೀವ್ ಕುಮಾರ್:
ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ದಿನಾಂಕವನ್ನು ಘೋಷಿಸಿದ ಕೇಂದ್ರ ಚುನಾವಣಾ ಆಯೋಗ ಆಯುಕ್ತ ರಾಜೀವ್ ಕುಮಾರ್, ಈ ಹಂತದಲ್ಲಿ ಯಾವುದೇ ರೀತಿಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದರು.
"ಎರಡು ರಾಜ್ಯಗಳ ವಿಧಾನಸಭೆಯ ಅವಧಿಯು ಅಂತ್ಯಗೊಳ್ಳುವುದಕ್ಕೆ ಕನಿಷ್ಠ 40 ದಿನಗಳ ಅಂತರವಿದೆ. ಆದರೆ ನಿಯಮಗಳ ಪ್ರಕಾರ, ಅದು 30 ದಿನಗಳಿಗಿಂತ ಕಡಿಮೆಯಾಗಿರಬೇಕು. ಆದ್ದರಿಂದ ಒಂದು ರಾಜ್ಯದ ಚುನಾವಣೆಯ ಫಲಿತಾಂಶವು ಮತ್ತೊಂದು ರಾಜ್ಯದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ," ಎಂದು ಹೇಳಿದರು.
ಗುಜರಾತ್ ವಿಧಾನಸಭೆಯ ಅವಧಿಯು ಫೆಬ್ರವರಿ ತಿಂಗಳಿನಲ್ಲಿ ಅಂತ್ಯಗೊಳ್ಳುತ್ತದೆ, ಅದೇ ರೀತಿ ಹಿಮಾಚಲ ಪ್ರದೇಶ ವಿಧಾನಸಭೆ ಅವಧಿಯು ಜನವರಿ ತಿಂಗಳಿಗೆ ಅಂತ್ಯಗೊಳ್ಳುತ್ತದೆ.
ಹಿಮಾಚಲ ಪ್ರದೇಶದಲ್ಲಿ ನ.12ಕ್ಕೆ ಮತದಾನ:
ಹಿಮಾಚಲ ಪ್ರದೇಶ 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 12ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 8ರಂದು ಮತಗಳ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 27 ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ವಾಪಸ್ ಪಡೆಯುವುದಕ್ಕೆ ಅಕ್ಟೋಬರ್ 29 ಕೊನೆಯ ದಿನವಾಗಿದೆ.












Click it and Unblock the Notifications