No confidence motion: ಮಣಿಪುರದ ವಿಚಾರವಾಗಿ ಪ್ರಧಾನಿ ಮೋದಿ 'ಮೌನ ವ್ರತ'- ಚರ್ಚೆ ಆರಂಭಿಸಿದ ಕಾಂಗ್ರೆಸ್
ನವದೆಹಲಿ, ಆಗಸ್ಟ್ 08: ಮಣಿಪುರ ಗಲಭೆ ಕುರಿತು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಚರ್ಚೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸುಮಾರು 6 ಗಂಟೆ 41 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸುಮಾರು ಒಂದು ಗಂಟೆ 15 ನಿಮಿಷಗಳನ್ನು ನೀಡಲಾಗಿದೆ. ಈ ಚರ್ಚೆಯು ಒಟ್ಟು 12 ಗಂಟೆಗಳ ಕಾಲ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 8 ಮತ್ತು 9 ರಂದು ಎರಡು ದಿನಗಳ ಕಾಲ ಚರ್ಚೆಗಳು ನಡೆಯಲಿದ್ದು, ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.

ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಸಂಸತ್ತಿನಲ್ಲಿ ಚರ್ಚೆಗೆ ಚಾಲನೆ ನೀಡಿದರು. ನಾಲ್ಕು ತಿಂಗಳ ನಂತರ ಸೋಮವಾರ ಸಂಸತ್ತಿಗೆ ಮರಳಿದ ಸಂಸದ ರಾಹುಲ್ ಗಾಂಧಿ ಮಂಗಳವಾರ ಲೋಕಸಭೆಯಲ್ಲಿ ಚರ್ಚೆಯನ್ನು ಪ್ರಾರಂಭಿಸುತ್ತಾರೆ ಎಂದು ಮೊದಲು ಊಹಿಸಲಾಗಿತ್ತು.
I.N.D.I.A ಮೈತ್ರಿಕೂಟದ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಳೆದ ವಾರ ಅಂಗೀಕರಿಸಿದ್ದರು.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಗೂ ಮುನ್ನ ಭಾರತೀಯ ಜನತಾ ಪಕ್ಷ ಮಂಗಳವಾರ ತನ್ನ ಸಂಸದೀಯ ಪಕ್ಷದ ಸಭೆಯನ್ನು ಕರೆದಿತ್ತು.

ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮಂಗಳವಾರ ಮತ್ತು ಬುಧವಾರ ನಡೆಯಲಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಮಣಿಪುರದ ಕುರಿತು ಉತ್ತರ ನೀಡಲಿದ್ದಾರೆ.
ಚರ್ಚೆಯನ್ನು ಆರಂಭಿಸಿರುವ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, 'ಮಣಿಪುರದ ಮಹಿಳೆಯರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಪ್ರಧಾನಿಯವರು ಇಲ್ಲಿಯವರೆಗೆ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಮಣಿಪುರ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ 80 ದಿನಗಳು ಏಕೆ ಬೇಕಾಯಿತು? ಇದುವರೆಗೂ ಮಣಿಪುರ ಸಿಎಂ ಅವರನ್ನು ಏಕೆ ತೆಗೆದು ಹಾಕಿಲ್ಲ? ಎಂದು ಕೇಳಿದ್ದಾರೆ.

ಮಣಿಪುರದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಸಂಸದರು, 'ಮಣಿಪುರ ವಿಚಾರದ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚಿಸುವುದು ಪ್ರತಿಪಕ್ಷಗಳು ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ' ಎಂದು ಹೇಳಿದ್ದಾರೆ.
'ಅವಿಶ್ವಾಸ ನಿರ್ಣಯವನ್ನು ಏಕೆ ಮಂಡಿಸಲಾಯಿತು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ದೇಶದಲ್ಲಿ ಎಲ್ಲಿಯೂ ನಡೆಯದ ಹಿಂಸಾಚಾರ ಮಣಿಪುರದಲ್ಲಿ ನಡೆಯುತ್ತಿದೆ. ಆದ್ದರಿಂದ ಈ ವಿಷಯದ ಬಗ್ಗೆ ಚರ್ಚಿಸುವುದು ಪ್ರತಿಪಕ್ಷಗಳು ಮತ್ತು ಸರ್ಕಾರ ಎರಡರ ಜವಾಬ್ದಾರಿಯಾಗಿದೆ' ಎಂದು ಸಮಾಜವಾದಿ ಪಕ್ಷ ಹೇಳಿದೆ.











Click it and Unblock the Notifications