ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧಿಸುವುದರ ಬದಲಿಗೆ ನಿಯಂತ್ರಣಕ್ಕೆ ಮಸೂದೆ
ನವದೆಹಲಿ, ನವೆಂಬರ್ 24: ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುವುದರ ಬದಲಿಗೆ ನಿಯಂತ್ರಣ ಸಾಧಿಸುವುದಕ್ಕೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ದೇಶದಲ್ಲಿ "ಕ್ರಿಪ್ಟೋಕರೆನ್ಸಿಗಳು ದುರುಪಯೋಗವಾಗದಂತೆ ನಿಯಂತ್ರಿಸುವ ಕಾರ್ಯ ವಿಧಾನವು ಜಾರಿಯಲ್ಲಿರುತ್ತದೆ.
ಕ್ರಿಪ್ಟೋಕರೆನ್ಸಿ ಮೂಲಕ ನಡೆಯುತ್ತಿರುವ ಭೂಗತ ವಹಿವಾಟುಗಳ ಬಗ್ಗೆ ಸರ್ಕಾರವು ಕಾಳಜಿ ವಹಿಸುತ್ತದೆ. ವಿಶೇಷವಾಗಿ 'ಹವಾಲಾ' ಮತ್ತು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದಕ್ಕೆ ಕ್ರಿಪ್ಟೋಕರೆನ್ಸಿಗಳ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ಲಕ್ಷ್ಯ ವಹಿಸಲಾಗುತ್ತದೆ. ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲಾಗುತ್ತದೆಯೇ ವಿನಃ ಸಂಪೂರ್ಣವಾಗಿ ನಿಷೇಧಿಸಲಾಗುವುದಿಲ್ಲ ಎಂದು ತಜ್ಞರು ಊಹಿಸಿದ್ದಾರೆ.
ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಕಳೆದ ಒಂದು ತಿಂಗಳಿನಲ್ಲೇ ಬಿಟ್‌ಕಾಯಿನ್ ಬೆಲೆ ದಾಖಲೆ ಮಟ್ಟದಲ್ಲಿ ಇಳಿಕೆಯಾಗಿದೆ.

ದೇಶದ ತೆರಿಗೆ ವ್ಯವಸ್ಥೆಗೆ ಕ್ರಿಪ್ಟೋಕರೆನ್ಸಿ ಅಪಾಯಕಾರಿ:
"ಕ್ರಿಪ್ಟೋಕರೆನ್ಸಿಯನ್ನು ಕಾನೂನು ಟೆಂಡರ್ ಎಂದು ಗುರುತಿಸಲಾಗುವುದಿಲ್ಲ. ಏಕೆಂದರೆ ಇದು ದೇಶದ ಕರೆನ್ಸಿ ಮತ್ತು ತೆರಿಗೆ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಕಾನೂನುಬಾಹಿರ ಅಥವಾ ದೇಶ-ವಿರೋಧಿ ಕೆಲಸಕ್ಕೆ ಬಳಸುವ ಕ್ರಿಪ್ಟೋಕರೆನ್ಸಿಯ ಮೂಲವನ್ನು ಪತ್ತೆಹಚ್ಚುವುದಕ್ಕೆ ಕಟ್ಟುನಿಟ್ಟಾದ ಕಾರ್ಯ ವಿಧಾನವು ಜಾರಿಗೆ ತರಬೇಕಿದೆ," ಎಂದು ತಜ್ಞರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಕ್ರಮದಿಂದಾಗಿ ಕ್ರಿಪ್ಟೋ ಮಾರುಕಟ್ಟೆಗಳು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಪಾಯವನ್ನು ತಪ್ಪಿಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದೆ.
ಭಯೋತ್ಪಾದಕರಿಗೆ ಹಣ ಒದಗಿಸುವ ಮಾರ್ಗ:
ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಸಂಬಂಧಿಸಿದಂತೆ "ನವೆಂಬರ್ ತಿಂಗಳ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಈ ವೇಳೆ ಸರ್ಕಾರವು ಕ್ರಿಪ್ಟೋಕರೆನ್ಸಿ ಕುರಿತಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಒಮ್ಮತ ಮೂಡಿತ್ತು. "ಅನಿಯಂತ್ರಿತ" ಕ್ರಿಪ್ಟೋ ಮಾರುಕಟ್ಟೆಗಳು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮಾರ್ಗಗಳಾಗಲು ಬಿಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.
ಚಳಿಗಾಲ ಅಧಿವೇಶನವದಲ್ಲಿ ಡಿಜಿಟಲ್ ಕರೆನ್ಸಿ ಮಸೂದೆ 2021:
ಲೋಕಸಭೆಯ ವೆಬ್‌ಸೈಟ್ ಪ್ರಕಾರ ನವೆಂಬರ್ 29 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲು ಪಟ್ಟಿ ಮಾಡಲಾದ 26 ಬಿಲ್‌ಗಳಲ್ಲಿ ಅಧಿಕೃತ ಡಿಜಿಟಲ್ ಕರೆನ್ಸಿ ಬಿಲ್, 2021ರ ಕ್ರಿಪ್ಟೋಕರೆನ್ಸಿ ಮತ್ತು ನಿಯಂತ್ರಣವೂ ಸೇರಿದೆ. ಮಸೂದೆಯು "ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು" ಪ್ರಯತ್ನಿಸುತ್ತದೆ, ಆದರೆ "ಆಧಾರಿತ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು" ಅನುಮತಿಸುತ್ತದೆ. ಇದು ಆರ್‌ಬಿಐನಿಂದ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ "ಸುಲಭದಾಯಕ ಚೌಕಟ್ಟನ್ನು ರಚಿಸುವ" ಗುರಿಯನ್ನು ಹೊಂದಿದೆ.
ಕಳೆದ ವಾರ ಬಿಜೆಪಿ ಮುಖಂಡ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿಯು ಕ್ರಿಪ್ಟೋಕರೆನ್ಸಿಗಳ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ ನಂತರ ಡಿಜಿಟಲ್ ಕರೆನ್ಸಿಗಳನ್ನು ಸಂಪೂರ್ಣ ನಿಷೇಧಿಸುವುದರ ಬದಲಿಗೆ ನಿಯಂತ್ರಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು.
ಕ್ರಿಪ್ಟೋಮಾರುಕಟ್ಟೆಯಲ್ಲಿ ಭಾರಿ ಕುಸಿತ:
ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಬುಧವಾರ ಎಲ್ಲಾ ಪ್ರಮುಖ ಡಿಜಿಟಲ್ ಕರೆನ್ಸಿಗಳು ಮೌಲ್ಯವು ಶೇಕಡಾ 15 ಮತ್ತು ಅದಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಬಿಟ್‌ಕಾಯಿನ್ ಸುಮಾರು ಶೇಕಡಾ 18.53, ಎಥೆರಿಯಮ್ ಶೇಕಡಾ 15.58 ಮತ್ತು ಟೆಥರ್ ಶೇಕಡಾ 18.29 ರಷ್ಟು ಕುಸಿದಿದೆ. ಕ್ರಿಪ್ಟೋಕರೆನ್ಸಿಗಳಲ್ಲಿ ಪರಿಣತಿ ಹೊಂದಿರುವ ನ್ಯೂಯಾರ್ಕ್ ಮೂಲದ ಸುದ್ದಿ ಸೈಟ್ CoinDesk ನಿಂದ ಪಡೆದ ಮಾಹಿತಿಯ ಪ್ರಕಾರ, ಮಂಗಳವಾರ ಸಂಜೆ Bitcoin ನ ಮೌಲ್ಯವು $ 55,460.96 ಕ್ಕೆ ಕುಸಿದಿದೆ, ಇದು ನವೆಂಬರ್‌ನಲ್ಲಿ ತಲುಪಿದ ಸುಮಾರು 69,000 ಡಾಲರ್ ಸಾರ್ವಕಾಲಿಕ ಗರಿಷ್ಠದಿಂದ ಹೆಚ್ಚುವರಿ 20 ಪ್ರತಿಶತ ಕುಸಿತವಾಗಿದೆ.












Click it and Unblock the Notifications