ಭಾರತದಲ್ಲಿ ಓದು, ಉದ್ಯೋಗವಿಲ್ಲದೆ ಕಳೆಯುತ್ತಿರುವ 8.7 ಕೋಟಿ ಯುವಜನತೆ: ನೀತಿ ಆಯೋಗದ ವರದಿ

ಭಾರತದ ಯುವ ಜನತೆಯ ಭವಿಷ್ಯದ ಕುರಿತು ನೀತಿ ಆಯೋಗವು ಅತ್ಯಂತ ಕಳವಳಕಾರಿ ಮಾಹಿತಿಯೊಂದನ್ನ ಹೊರಹಾಕಿದೆ. ದೇಶದ ಸುಮಾರು 8.70 ಕೋಟಿ ಯುವಜನತೆ ಯಾವುದೇ ರೀತಿಯ ಓದು, ಉದ್ಯೋಗ ಅಥವಾ ತರಬೇತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳದೆ ಸುಮ್ಮನೆ ಕಾಲ ಕಳೆಯುತ್ತಿದ್ದಾರೆ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

2021ರ ರಾಷ್ಟ್ರೀಯ ಮಾದರಿ ಸಮೀಕ್ಷೆಯದತ್ತಾಂಶ ಆಧರಿಸಿ ಸಿದ್ಧಪಡಿಸಲಾಗಿರುವ 'ರಿ ಇಮ್ಯಾಜಿನಿಂಗ್ ಸ್ಕಿಲ್ಲಿಂಗ್ ಫಾರ್ ವಿಕಸಿತ್ ಭಾರತ್-2047' ವರದಿಯು ದೇಶದ ಯುವಜನತೆಯ ನಿಜವಾದ ಸ್ಥಿತಿಯನ್ನ ಕನ್ನಡಿ ಹಿಡಿದು ತೋರಿಸಿದಂತಿದೆ.

NITI Aayog

ಯುವ ಸಮುದಾಯವನ್ನ ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ನೀತಿ ಆಯೋಗವು ಒಟ್ಟು 5 ವಿಭಾಗಗಳ ವರ್ಗೀಕರಣ ಮಾಡಿಕೊಂಡಿದೆ. ಅವುಗಳಲ್ಲಿ ಶಾಲಾ-ಕಾಲೇಜು ಶಿಕ್ಷಣ ಪಡೆಯುತ್ತಿರುವವರು, ಉನ್ನತ ಶಿಕ್ಷಣದಲ್ಲಿರುವವರು, ಔಪಚಾರಿಕ ಹಾಗೂ ಅನೌಪಚಾರಿಕ ಉದ್ಯೋಗದಲ್ಲಿರುವವರ ಜೊತೆಗೆ, ಶಿಕ್ಷಣ ಮತ್ತು ಉದ್ಯೋಗ ಎರಡರಲ್ಲೂ ಇಲ್ಲದ 'ಎನ್ಇಇಟಿ' (NEET - Not in Education, Employment, and Training) ವರ್ಗವನ್ನು ಗುರುತಿಸಲಾಗಿದೆ.

ಈ ವಿಭಾಗದಲ್ಲಿರುವ ಯುವಕರು ಯಾವುದೇ ಆದಾಯವಿಲ್ಲದೆ, ಹಿಂದೆ ಮಾಡಿದ ಶಿಕ್ಷಣದ ಸಾಲ ಹಾಗೂ ಆರ್ಥಿಕ ಹೊರೆಯಿಂದಾಗಿ ಕುಗ್ಗಿ ಹೋಗಿದ್ದಾರೆ. ಕಡಿಮೆ ಆದಾಯದ ಕುಟುಂಬಗಳ ಮಕ್ಕಳಿಗೆ ಕಾಲೇಜು ಶುಲ್ಕದ ಜತೆಗೆ ಹೆಚ್ಚಿನ ಕೌಶಲ ತರಬೇತಿ ಪಡೆಯುವುದು ಕಷ್ಟಸಾಧ್ಯವಾಗಿದ್ದು, ಇದು ಅವರನ್ನ ಆರ್ಥಿಕ ಬಿಕ್ಕಟ್ಟಿಗೆ ದೂಡಿದೆ.

ಪದವಿಗಳಿದ್ದರೂ ಸಿಗದ ನೌಕರಿ

ದೇಶದಲ್ಲಿ ಸಾಂಪ್ರದಾಯಿಕ ಪದವಿಗಳನ್ನ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಅದಕ್ಕೆ ತಕ್ಕ ಉದ್ಯೋಗ ದೊರೆಯುತ್ತಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಅಂಕಿಅಂಶಗಳ ಪ್ರಕಾರ, ಪದವೀಧರರಲ್ಲಿ ಕೇವಲ ಶೇ.8.25ರಷ್ಟು ಮಂದಿ ಮಾತ್ರ ತಮ್ಮ ಅರ್ಹತೆಗೆ ತಕ್ಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಉನ್ನತ ಶಿಕ್ಷಣ ಮುಗಿಸಿದ ತಕ್ಷಣ ಉದ್ಯೋಗ ಸಿಗದ ಕಾರಣ ಅನೇಕರು ಕುಟುಂಬದ ನಿರ್ವಹಣೆಗಾಗಿ ಸಿಕ್ಕ ಕೆಲಸಗಳಿಗೆ ಸೇರಿಕೊಳ್ಳುತ್ತಾರೆ. ಇನ್ನುಳಿದವರು ಹೊಂದಾಣಿಕೆ ಮಾಡಿಕೊಳ್ಳಲಾಗದೆ ಅಂತಿಮವಾಗಿ ನೀಟ್ ವರ್ಗಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಈ ಸಮಸ್ಯೆಯನ್ನ ನಿವಾರಿಸಲು ಯುವಜನರಿಗೆ ಸ್ಥಳೀಯ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕಡಿಮೆ ಶುಲ್ಕದಲ್ಲಿ ಅಥವಾ ಸಹಾಯಧನದೊಂದಿಗೆ ಕೌಶಲ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ಬರಬೇಕಿದೆ. ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲೇ ಪಾರ್ಟ್‌ ಟೈಮ್‌ ಉದ್ಯೋಗದ ಮೂಲಕ ಹಣ ಮಾಡಿಕೊಳ್ಳಲು ಅನುವು ಮಾಡಿಕೊಡುವ 'ಲರ್ನ್ ವೈಲ್ ಅರ್ನ್' ಮಾದರಿಯನ್ನ ಅಳವಡಿಸಿಕೊಳ್ಳುವುದು ತುಂಬ ಮುಖ್ಯ ಎಂದು ವರದಿ ಶಿಫಾರಸು ಮಾಡಿದೆ.

ಯುವಜನರ ನಿರುದ್ಯೋಗ ಪ್ರಮಾಣ

ಭಾರತದ ಒಟ್ಟಾರೆ ನಿರುದ್ಯೋಗ ಪ್ರಮಾಣವು ಪ್ರಸ್ತುತ ಶೇ.5.20ರಷ್ಟಿದ್ದರೆ, 15-29 ವರ್ಷ ವಯೋಮಾನದ ಯುವಜನರಲ್ಲಿ ಇದು ಶೇ.15ರಷ್ಟು ಗರಿಷ್ಠ ಮಟ್ಟದಲ್ಲಿದೆ.

ಇನ್ನು ಕೆಲವು ರಾಜ್ಯಗಳಲ್ಲಂತೂ ಈ ಸಮಸ್ಯೆ ತೀವ್ರವಾಗಿದ್ದು, ಸಂಪೂರ್ಣ ಸಾಕ್ಷರತೆ ಸಾಧಿಸಿದ ಹೆಮ್ಮೆಯಲ್ಲಿರುವ ಕೇರಳದಲ್ಲಿಯೇ ಯುವಜನರ ನಿರುದ್ಯೋಗ ಪ್ರಮಾಣ ಶೇ.29.90ರಷ್ಟು ದಾಖಲಾಗಿದೆ.

ದೇಶದ ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಗಾಲ್ಯಾಂಡ್ (ಶೇ.27.4), ಮಣಿಪುರ (ಶೇ.22.9), ಲಡಾಖ್ (ಶೇ.22.2), ಅರುಣಾಚಲ ಪ್ರದೇಶ (ಶೇ.20.9), ಗೋವಾ (ಶೇ.19.1), ಪಂಜಾಬ್ (ಶೇ.18.8) ಹಾಗೂ ಆಂಧ್ರಪ್ರದೇಶ (ಶೇ.17.5) ಮುಂಚೂಣಿಯಲ್ಲಿವೆ.

ಈ ಎಲ್ಲ ಸವಾಲುಗಳನ್ನ ಮೆಟ್ಟಿ ನಿಲ್ಲಲು ಸ್ಥಳೀಯ ಮಟ್ಟದಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿ ಹಾಗೂ ಯುವಕರಿಗೆ ಸ್ವಉದ್ಯೋಗದ ಕೌಶಲ ತರಬೇತಿ ನೀಡುವುದು ತುಂಬ ಮುಖ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+