Modi 3.0 Budget: ಜುಲೈ 23ರಂದು ಕೇಂದ್ರ ಬಜೆಟ್ ಮಂಡನೆ
ನವದೆಹಲಿ, ಜುಲೈ 06: ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಜೆಟ್ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. 2024-25ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಫೆಬ್ರವರಿ 1ರಂದು ಮಂಡಿಸಲಾಗಿತ್ತು.
ಜುಲೈ 22ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಜುಲೈ 23ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ ಎಂದು ಶನಿವಾರ ಪ್ರಕಟಿಸಲಾಗಿದೆ.

ಈ ಕುರಿತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ಜುಲೈ 22 ರಿಂದ ಆಗಸ್ಟ್ 12ರ ತನಕ ಸಂಸತ್‌ನ ಬಜೆಟ್ ಅಧಿವೇಶನ ನಡೆಯಲಿದೆ.
ಸಚಿವ ಕಿರಣ್ ರಿಜಿಜು ಶನಿವಾರ ಟ್ವೀಟ್ ಮಾಡಿ, "ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಭಾರತದ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಬಜೆಟ್‌ಗಾಗಿ ರಾಜ್ಯಸಭೆ, ಲೋಕಸಭೆ ಅಧಿವೇಶನ ಕರೆಯಲಾಗುತ್ತದೆ. ಜುಲೈ 22ರಿಂದ ಆಗಸ್ಟ್ 12ರ ತನಕ ಅಧಿವೇಶನ ನಡೆಯಲಿದೆ. ಲೋಕಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಅನ್ನು ಜುಲೈ 23ರಂದು ಮಂಡಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ನಡೆಯಬೇಕಿದ್ದ ಕಾರಣ ನರೇಂದ್ರ ಮೋದಿ 2.0 ಸರ್ಕಾರ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡನೆ ಮಾಡಿತ್ತು. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-25ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಮಂಡಿಸಿದ್ದರು.
ಬಳಿಕ ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆ 2024 ಘೋಷಣೆಯಾಯಿತು. ಚುನಾವಣೆ ಮುಗಿದು ಜೂನ್‌ನಲ್ಲಿ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದಿತು. ನರೇಂದ್ರ ಮೋದಿ ಸಂಪುಟದಲ್ಲಿ ಹಣಕಾಸು ಖಾತೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಲಾಗಿದೆ. ಈಗ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದಾರೆ.
ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಅಗತ್ಯತೆಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಅವರ ಕಲ್ಯಾಣವು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. ಅವರು ಪ್ರಗತಿ ಹೊಂದಿದಾಗ ದೇಶವು ಪ್ರಗತಿಯಾಗುತ್ತದೆ ಎಂದು ಹೇಳಿದ್ದರು.
ಕಳೆದ 10 ವರ್ಷಗಳಲ್ಲಿ ಎಲ್ಲರಿಗೂ ವಸತಿ, ಎಲ್ಲರಿಗೂ ವಿದ್ಯುತ್, ಎಲ್ಲರಿಗೂ ಅಡುಗೆ ಅನಿಲ, ಬ್ಯಾಂಕ್ ಖಾತೆಗಳು ಮತ್ತು ಎಲ್ಲರಿಗೂ ಹಣಕಾಸು ಸೇವೆಗಳನ್ನು ನೀಡುವ ಮೂಲಕ ದಾಖಲೆ ಸಮಯದಲ್ಲಿ ಪ್ರತಿ ಮನೆ ಮತ್ತು ವ್ಯಕ್ತಿಯನ್ನು ತಲುಪಿದ್ದೇವೆ. ಸರ್ಕಾರವು ಸರ್ವಾಂಗೀಣ ಅಭಿವೃದ್ಧಿಯ ಮಾರ್ಗದೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದರು.
ನಾವು 2047ರ ವೇಳೆಗೆ ಭಾರತವನ್ನು ವಿಕ್ಷಿತ್ ಭಾರತ್ ಮಾಡಲು ಕೆಲಸ ಮಾಡುತ್ತಿದ್ದೇವೆ. ಆ ಗುರಿಯನ್ನು ಸಾಧಿಸಲು, ನಾವು ಜನರ ಸಾಮರ್ಥ್ಯವನ್ನು ಸುಧಾರಿಸಬೇಕು ಮತ್ತು ಅವರನ್ನು ಸಬಲೀಕರಣಗೊಳಿಸಬೇಕು. ಹಿಂದೆ, ಸಾಮಾಜಿಕ ನ್ಯಾಯವು ಹೆಚ್ಚಾಗಿ ರಾಜಕೀಯ ಘೋಷಣೆಯಾಗಿತ್ತು. ನಮ್ಮ ಸರ್ಕಾರಕ್ಕೆ, ಸಾಮಾಜಿಕ ನ್ಯಾಯವು ಪರಿಣಾಮಕಾರಿ ಮತ್ತು ಅಗತ್ಯವಾದ ಆಡಳಿತ ಮಾದರಿಯಾಗಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಿದ್ದರು.
ರೈಲ್ವೆ ಬಜೆಟ್ ಅನ್ನು ಸಹ ಸಾಮಾನ್ಯ ಬಜೆಟ್ ಜೊತೆಗೆ ಸೇರಿಸಲಾಗಿದೆ. ಹೊಸ ರೈಲು ಮಾರ್ಗಗಳ ಘೋಷಣೆ, ವಂದೇ ಭಾರತ್ ರೈಲುಗಳ ಸಂಚಾರ, ಸ್ಲೀಪರ್ ಮಾದರಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದ ಕುರಿತು ಬಜೆಟ್‌ನಲ್ಲಿ ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿಲ್ಲ. ಎನ್‌ಡಿಎ ಮೈತ್ರಿಕೂಟದ ಬೆಂಬಲದಿಂದ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಆದ್ದರಿಂದ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನಿರೀಕ್ಷೆ ಮಾಡಲಾಗಿದೆ.












Click it and Unblock the Notifications