ಬಾಲಾಪರಾಧಿ ಬಿಡುಗಡೆಗೆ ತಡೆ ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ
ನವದೆಹಲಿ, ಡಿ.20: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಬಿಡುಗಡೆಗೆ ತಡೆ ಕೋರಿ ದೆಹಲಿಯ ಮಹಿಳಾ ಆಯೋಗ ತಡರಾತ್ರಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಶೀಲಿಸಿದ ಸುಪ್ರೀಂಕೋರ್ಟಿನ ರಜಾಕಾಲದ ಪೀಠ, ಅರ್ಜಿಯ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಸೋಮವಾರ(ಡಿ.21) ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದಿದೆ.
ದೆಹಲಿ ಹೈಕೋರ್ಟ್ ಆದೇಶದ ಪ್ರಕಾರ ಭಾನುವಾರ ಬಾಲಾಪರಾಧಿಗೆ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 16ರ ನಿರ್ಭಯಾ (ಅಸಲಿ ಹೆಸರು ಜ್ಯೋತಿ ಸಿಂಗ್) ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಸ್ವಾತಿ ಮಲಿವಾಳ್ ಅವರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಎ.ಕೆ.ಗೋಯೆಲ್ ಮತ್ತು ಯು.ಯು.ಲಲಿತ್ ಅವರಿದ್ದ ರಜಾಕಾಲದ ಪೀಠ, ಬಾಲಾಪರಾಧಿಯನ್ನು ಬಿಡುಗಡೆ ಮಾಡುವಂತೆ ಕೋರಿರುವ ಅರ್ಜಿ ವಿಚಾರಣೆಯನ್ನು ಈ ಕೂಡಲೇ ವಿಚಾರಣೆ ನಡೆಸಲು ನಿರಾಕರಿಸಿತು.

ಆಯೋಗದ ಆಶಾಭಾವನೆ: ಅರ್ಜಿಯ ವಿಚಾರಣೆ ಇಂದು ನಡೆಯದಿದ್ದರೂ, ಪ್ರಕರಣ ವಿಚಾರಣಾ ಹಂತದಲ್ಲಿರುವುದರಿಂದಾಗಿ ದೆಹಲಿ ಪೊಲೀಸರು ಮತ್ತು ಕಾರಾಗೃಹ ಆಡಳಿತ ಆರೋಪಿಯನ್ನು ಬಿಡುಗಡೆ ಮಾಡುವುದಿಲ್ಲ ಎಂಬ ಆಶಾಭಾವನೆಯನ್ನು ಮಹಿಳಾ ಆಯೋಗ, ಆಯೋಗದ ಪರ ವಕೀಲರ ತಂಡದ ನಿರೀಕ್ಷೆಯಾಗಿದೆ.
ಮಹಿಳಾ ಆಯೋಗದ ಪರ ವಕೀಲರಾದ ಗುರುಕೃಷ್ಣಕುಮಾರ್, ದೇವದತ್ ಕಾಮತ್ ಅವರು ನ್ಯಾಯಮೂರ್ತಿ ಗೋಯೆಲ್ ನಿವಾಸಕ್ಕೆ ರಾತ್ರಿ 1.30ಕ್ಕೆ ತೆರಳಿ ಪರಿಸ್ಥಿತಿ ವಿವರಿಸಿದರು.
ಈ ನಡುವೆ, ಬಾಲಾಪರಾಧಿಯ ಜೀವಕ್ಕೆ ಅಪಾಯವಿರುವುದರಿಂದ ಆತನನ್ನು ರಹಸ್ಯ ಪ್ರದೇಶಗಳಲ್ಲಿ ಇರಿಸಲಾಗಿದೆ. 2012ರಲ್ಲಿ ಅತ್ಯಾಚಾರ ಎಸಗಿದಾಗ ಅತ 17 ವರ್ಷ ವಯಸ್ಸಿನವನಾಗಿದ್ದ ಈಗ 20 ವರ್ಷ ಆತನಿಗೆ ಪ್ರಕರಣದಲ್ಲಿ ಮುಕ್ತಿ ಸಿಕ್ಕರೆ ಸಮಾಜಕ್ಕೆ ನಾವು ಕೊಡುವ ಸಂದೇಶವಾದರೂ ಏನು ಎಂಬ ಪ್ರಶ್ನೆಯನ್ನು ಹೊತ್ತು ಜ್ಯೊತಿ ಸಿಂಗ್ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಬಾಲಾಪರಾಧಿ ಬಿಡುಗಡೆಗೆ ಪ್ರತಿರೋಧ ಒಡ್ಡಿ ದೆಹಲಿಯ ಜಂತರ್-ಮಂತರ್‌ನಲ್ಲಿ ನಿರ್ಭಯಾ ಹೆತ್ತವರು ನಡೆಸುತ್ತಿರುವ ಪ್ರತಿಭಟನೆಗೆ ಮಹಿಳಾ ಆಯೋಗ, ವಿದ್ಯಾರ್ಥಿನಿಯರು, ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ಪ್ರತಿಭಟನಾ ನಿರತ ನಿರ್ಭಯಾ ಪೋಷಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.












Click it and Unblock the Notifications