ಭಯೋತ್ಪಾದಕರೊಂದಿಗೆ ನಂಟು: ಕರ್ನಾಟಕದ ಯುವಕರ ಮೇಲೆ ಎನ್‌ಐಎ ಕೇಸ್
ನವದೆಹಲಿ, ಜನವರಿ 10: ಕತಾರ್‌ನಲ್ಲಿ ನೆಲೆಸಿರುವ ಕೇರಳ ಮತ್ತು ಕರ್ನಾಟಕದ 7-8 ಯುವಕರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರಕರಣ ದಾಖಲಿಸಿದೆ.
ಈ ಯುವಕರು ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿರುವ ಜುಂಡ್ ಅಲ್-ಅಕ್ಸಾ ಮತ್ತು ಜಭಾತ್ ಉಲ್-ನುಸ್ರಾ ಉಗ್ರರ ಸಂಘಟನೆಗಳನ್ನು ಸೇರಿಕೊಳ್ಳಲು 2013ರಲ್ಲಿ ಸಿರಿಯಾಕ್ಕೆ ಹೊರಡಲು ಸಿದ್ಧತೆ ನಡೆಸಿದ್ದರು ಅಥವಾ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.
ಕತಾರ್‌ನಲ್ಲಿ ನೆಲಸಿರುವ ಈ ಯುವಕರು ಉಗ್ರ ಸಂಘಟನೆ ಸೇರಿಕೊಳ್ಳುವಂತೆ ಪ್ರಚೋದನೆಗೆ ಒಳಗಾಗಿದ್ದರು. ಕೇರಳದ ಕೆಲವು ಯುವಕರು ಐಎಸ್ ಸೇರಲು ಪ್ರಯತ್ನಿಸಿದ ಮತ್ತೊಂದು ಪ್ರಕರಣದ ವಿಚಾರಣೆ ವೇಳೆ ಕತಾರ್‌ನಲ್ಲಿ ನೆಲೆಸಿರುವ ಈ ಯುವಕರ ಚಟುವಟಿಕೆ ಬಗ್ಗೆ ಮಾಹಿತಿ ದೊರಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಈ ಎಲ್ಲ ಯುವಕರ ಗುರುತು ಮತ್ತು ಅವರ ವಿಳಾಸಗಳು ದೊರೆತಿವೆ. ಆದರೆ ಎಷ್ಟು ಮಂದಿ ಸಿರಿಯಾಕ್ಕೆ ತೆರಳಿದ್ದಾರೆ ಮತ್ತು ಎಷ್ಟು ಮಂದಿ ಇನ್ನೂ ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬುದು ಖಚಿತವಾಗಿಲ್ಲ.
ಈ ಯುವಕರ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಅಪರಾಧ ಸಂಚು ಮತ್ತು ಶಾಂತಿಯುತ ದೇಶದ ವಿರುದ್ಧ ಯುದ್ಧ ಮಾಡುವ ತಯಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿಯೂ ಕೇಸು ದಾಖಲಿಸಲಾಗಿದೆ.
ಭಯೋತ್ಪಾದನಾ ಚಟುವಟಿಕೆಗಳನ್ನು ಮಾಡುವ ಸಲುವಾಗಿ ಜುಂಡ್ ಅಲ್-ಅಕ್ಸಾ ಹಾಗೂ ಜಭಾತ್ ಅಲ್-ನುಸ್ರಾ ಸೇರ್ಪಡೆಯಾಗಲು ಈ ಯುವಕರು ಸಿರಿಯಾಕ್ಕೆ ಹೋಗಲು ಸಿದ್ಧತೆ ನಡೆಸಿದ್ದರು ಅಥವಾ ಅಲ್ಲಿಗೆ ತೆರಳಿದ್ದಾರೆ ಎಂದು ಎನ್‌ಐಎ ತಿಳಿಸಿದೆ.












Click it and Unblock the Notifications