ಭಾರತದಲ್ಲಿ 8.9 ಕೋಟಿ ಮಕ್ಕಳಿಗೆ ಕೋವಿಡ್ ಲಸಿಕೆ: ಕೇಂದ್ರ ಮಾಹಿತಿ
ನವದೆಹಲಿ, ಮೇ 10; ದೇಶಾದ್ಯಂತ 12ರಿಂದ 14 ವರ್ಷ ವಯೋಮಾನದ 3 ಕೋಟಿಗೂ ಅಧಿಕ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಮಾಹಿತಿ ನೀಡಿದ್ದಾರೆ.
ಈ ವಯೋಮಾನದಲ್ಲಿ ಒಂದು ಕೋಟಿಗೂ ಅಧಿಕ ಮಕ್ಕಳು ಎರಡನೇ ಡೋಸ್ ಪಡೆದಿರುವ ಮಾಹಿತಿ ಇದೆ. ಹಾಗೆಯೇ, 15-18 ವಯೋಮಾನದ 5 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆ ಕೊಡಲಾಗಿದೆ. 12 ವರ್ಷ ಮೇಲ್ಪಟ್ಟ ವಯಸ್ಸಿನ 8.9 ಕೋಟಿ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸಲಾಗಿರುವುದು ತಿಳಿದುಬಂದಿದೆ.
"ಲಸಿಕೆ ಅಭಿಯಾನದಲ್ಲಿ ಮಕ್ಕಳ ಕೊಡುಗೆ ಬಹಳ ಇದೆ. 12-14 ವಯೋಮಾನದ 3 ಕೋಟಿಗೂ ಅಧಿಕ ಮಕ್ಕಳಿಗೆ ಮೊದಲ ಡೋಸ್ ಕೊಡಲಾಗಿದೆ. ಲಸಿಕೆ ಪಡೆದ ನನ್ನ ಎಲ್ಲಾ ಪುಟ್ಟ ಸ್ನೇಹಿತರಿಗೂ ಧನ್ಯವಾದ" ಎಂದು ಕೇಂದ್ರ ಸಚಿವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ಧಾರೆ.
ಬಯೋಲಾಜಿಕಲ್ ಇ (Biological E) ಕಂಪನಿಯ ಕೋರ್ಬೆವ್ಯಾಕ್ಸ್ (Corbevax) ಎಂಬ ಲಸಿಕೆಯನ್ನು ಈ ವಮೋಮಾನದ ಮಕ್ಕಳಿಗೆ ನೀಡಲಾಗುತ್ತಿದೆ. ಮಾರ್ಚ್ 16ರಂದು ಈ ಅಭಿಯಾನ ಆರಂಭಗೊಂಡಿದೆ. 28 ದಿನಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.

ಒಟ್ಟು ಎಷ್ಟು ಮಂದಿಗೆ ಲಸಿಕೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಕೋವಿಡ್ ಲಸಿಕೀಕರಣ ಯೋಜನೆ 190.48 ಕೋಟಿ ಗಡಿದಾಟಿದೆ. 12-14 ವಯೋಮಾನದಲ್ಲಿ 3,06,69,820 ಮಕ್ಕಳು ಮೊದಲ ಡೋಸ್ ಪಡೆದರೆ, 1,02,00,272 ಮಕ್ಕಳು ಎರಡನೇ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

15-18 ವರ್ಷ ವಯಸ್ಸಿನ ಮಕ್ಕಳಿಗೆ
ಇನ್ನು, 15-18 ವರ್ಷ ವಯೋಮಾನದವರ ಪೈಕಿ 5 ಕೋಟಿಗೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. 5,87,70,428 ಮಂದಿ ಮೊದಲ ಡೋಸ್ ಪಡೆದರೆ, 4,33,08,651 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. 12-14 ಮತ್ತು 15-18 ಈ ಎರಡು ವಯೋಮಾನದವರನ್ನು ಒಟ್ಟು ಸೇರಿಸಿದರೆ 8.9 ಕೋಟಿ (8,94,40,248) ಮಕ್ಕಳಿಗೆ ಲಸಿಕೆ ಹಾಕಿದಂತಾಗಿದೆ.

ಭಾರತದಲ್ಲಿ ಲಸಿಕಾ ಯೋಜನೆ ಹಾದಿ
ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಸಿಕೆ ಹಾಕುವ ಯೋಜನೆ ಆರಂಭವಾಗಿದ್ದು 2021 ಜನವರಿ 16ರಂದು. ಈವರೆಗೆ 190 ಕೋಟಿಗೂ ಹೆಚ್ಚು ವ್ಯಾಕ್ಸಿನ್ ಡೋಸ್‌ಗಳನ್ನು ಹಾಕಲಾಗಿದೆ. ಲಸಿಕೀಕರಣ ಯೋಜನೆ ಆರಂಭದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಯಿತು. ಫೆಬ್ರವರಿ 2ರಂದು ಪೊಲೀಸರು, ಪತ್ರಕರ್ತರು ಹೀಗೆ ಫ್ರಂಟ್‌ಲೈನ್ ಕಾರ್ಯಕರ್ತರಿಗೆ ಲಸಿಕೆ ಕೊಡುವುದನ್ನು ಶುರು ಮಾಡಲಾಯಿತು. ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರು ಮತ್ತು ನಿರ್ದಿಷ್ಟ ಕಾಯಿಲೆ ಇರುವ 45ವರ್ಷ ಮೇಲ್ಪಟ್ಟ ಜನರಿಗೆ ಇದನ್ನು ವಿಸ್ತರಿಸಲಾಯಿತು. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಲಭ್ಯವಾಗುವಂತೆ ಮಾಡಲಾಯಿತು.

18 ವರ್ಷ ಮೇಲಿನ ವಯಸ್ಸಿನವರಿಗೆ
2021 ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ನಡೆಯಿತು. ಈ ವರ್ಷ ಜನವರಿ 3ರಿಂದ 15-18 ವಯೋಮಾನದವರಿಗೆ ಕೋವ್ಯಾಕ್ಸಿನ್ ಲಸಿಕೆ ಕೊಡಲಾಗುತ್ತಿದೆ. ಮಾರ್ಚ್ 16ರಿಂದ ಬಯೋಲಾಜಿಕಲ್ ಇ ಕಂಪನಿಯ ಕೋರ್ಬೆವ್ಯಾಕ್ಸ್ ಲಸಿಕೆಯನ್ನ 12-15 ವಯೋಮಾನದ ಮಕ್ಕಳಿಗೆ ಕೊಡಲಾಗುತ್ತಿದೆ. ಕೋವಿಡ್ ಅಲೆಗಳು ಇನ್ನೂ ನಿಲ್ಲದ ಹಿನ್ನಲೆಯಲ್ಲಿ ಇದೇ ಏಪ್ರಿಲ್ 10ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮುನ್ನೆಚ್ಚರಿಕೆಯಾಗಿ ಮೂರನೇ ಡೋಸ್ ಕೊಡಲಾಗುತ್ತಿದೆ.

ಲಸಿಕೆಗಳ ವಿವರ
ಮೊದಲಿಗೆ ಅತಿ ಹೆಚ್ಚು ಲಸಿಕೆಗಳನ್ನು ನೀಡಲಾಗಿರುವುದು ಕೋವಿಶೀಲ್ಡ್. ಸೀರಂ ಇನ್ಸ್‌ಟಿಟ್ಯೂಟ್ ಸಂಸ್ಥೆ ಈ ಲಸಿಕೆ ತಯಾರಿಸುತ್ತಿದೆ. ಇದು ಬಿಟ್ಟರೆ ಎರಡನೇ ಅತಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಹಾಕಲಾಗಿರುವುದು ಕೋವ್ಯಾಕ್ಸಿನ್. ಇದು ಭಾರತ್ ಬಯೋಟೆಕ್ ತಯಾರಿಸುವ ವ್ಯಾಕ್ಸಿನ್ ಆಗಿದೆ. ದೇಶದ ಲಸಿಕೀಕರಣ ಯೋಜನೆಯಲ್ಲಿ ಈ ಎರಡು ಲಸಿಕೆಗಳ ಪಾತ್ರವೇ ಹೆಚ್ಚು. ಇದೀಗ ಬಯೋಲಾಜಿಕಲ್ ಇ ಕಂಪನಿಯ ಲಸಿಕೆಗಳನ್ನು 12ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಕೊಡಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್ ಇ (Sputnik E) ಮೊದಲಾದ ಲಸಿಕೆಗಳ ಬಳಕೆಯಾಗಿರುವುದು ತೀರಾ ಕಡಿಮೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications