ಮಧ್ಯಪ್ರದೇಶ ಚುನಾವಣೆ; ಚೌವ್ಹಾಣ್, ಕಮಲ್ ನಾಥ್ ಸಿಎಂ ಹುದ್ದೆಗೆ ಯಾರು ಉತ್ತಮ?
ಭೋಪಾಲ್, ನವೆಂಬರ್ 05: ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆ ತಯಾರಿ ಜೋರಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನೇರ ಎದುರಾಳಿಗಳಾಗಿದ್ದು, ಬಿರುಸಿನ ಪ್ರಚಾರವನ್ನು ಕೈಗೊಂಡಿವೆ. ಹೊಸ ಸರ್ಕಾರ ಆಯ್ಕೆ ಮಾಡಲು ನವೆಂಬರ್ 17ರಂದು ಮತದಾನ ನಡೆಯಲಿದೆ.
ಮಧ್ಯಪ್ರದೇಶ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನವೆಂಬರ್ 17ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಪ್ರಕಟವಾಗಲು ಡಿಸೆಂಬರ್ 3ರ ತನಕ ಕಾಯಬೇಕಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಗಳು. ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಎದುರಾಳಿ.

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ NDTV-CSDS Lokniti Poll ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ. ವಿವಿಧ ವಿಚಾರಗಳ ಕುರಿತು ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗಿದೆ. ಅಲ್ಲದೇ ಮುಖ್ಯಮಂತ್ರಿ ಹುದ್ದೆಗೆ ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತು ಕಮಲ್ ನಾಥ್ ಇವರಲ್ಲಿ ಯಾರು ಉತ್ತಮ? ಎಂದು ಜನರನ್ನು ಪ್ರಶ್ನಿಸಲಾಗಿದೆ.
ಯಾರು ಉತ್ತಮ ಮುಖ್ಯಮಂತ್ರಿ?; ಅಕ್ಟೋಬರ್ 24ರ ಬಳಿಕ ರಾಜ್ಯದ 230 ಕ್ಷೇತ್ರಗಳ ಪೈಕಿ 30 ಸೀಟುಗಳಲ್ಲಿ 3 ಸಾವಿರ ಜನರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಉತ್ತಮ ಸಿಎಂ ರೇಸ್‌ನಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತು ಕಮಲ್ ನಾಥ್ ನಡುವೆ ನೇರ ಪೈಪೋಟಿ ಇದ್ದು, ಶೇ 4ರಷ್ಟು ಮತಗಳ ಅಂತರದಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಉತ್ತಮ ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ.
2018ರ ಚುನಾವಣೆ ಬಳಿಕ ಶಿವರಾಜ್ ಸಿಂಗ್ ಚೌವ್ಹಾಣ್‌ಗೂ ಮೊದಲು ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಆಡಳಿತ ಬಂದು ಚೌವ್ಹಾಣ್ ಅಧಿಕಾರಕ್ಕೇರಿದ ಬಳಿಕ ರಸ್ತೆ, ವಿದ್ಯುತ್, ಆಸ್ಪತ್ರೆ ಮುಂತಾದ ವಲಯಗಳಲ್ಲಿ ಅಭಿವೃದ್ಧಿಯಾಗಿದೆ. ಆದರೆ ಮಹಿಳಾ ಸುರಕ್ಷತೆ ವಿಚಾರದಲ್ಲಿ ತೃಪ್ತಿದಾಯಕ ಕೆಲಸಗಳು ಆಗಿಲ್ಲ ಎಂದು ಜನರು ಹೇಳಿದ್ದಾರೆ.
2018-2020ರ ನಡುವಿನ ಕಮಲ್ ನಾಥ್ ನೇತೃತ್ವದ ಆಡಳಿತವನ್ನು ಶೇ 34ರಷ್ಟು ಜನರು ಮೆಚ್ಚಿದ್ದಾರೆ. 2020-2023ರ ತನಕದ ಚೌವ್ಹಾಣ್ ಸರ್ಕಾರವನ್ನು ಶೇ 36ರಷ್ಟು ಜನರು ಮೆಚ್ಚಿದ್ದಾರೆ. 2018ರ ಬಳಿಕ ಸರ್ಕಾರ ರಚನೆ ಮಾಡಿದ್ದ ಕಮಲ್ ನಾಥ್ 2020ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದ ಬಳಿಕ ಅವರ ಬೆಂಬಲಿಗ ಶಾಸಕರು ಕಾಂಗ್ರೆಸ್ ಬಿಟ್ಟ ಕಾರಣ ಸರ್ಕಾರ ಬಹುಮತ ಕಳೆದುಕೊಂಡಿತು.
ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಆಡಳಿತ ಸಂಪೂರ್ಣ ತೃಪ್ತಿದಾಯಕವಾಗಿದೆ ಎಂದು ಶೇ 27ರಷ್ಟು ಜನರು ಹೇಳಿದ್ದಾರೆ. ತೃಪ್ತಿದಾಯಕವಾಗಿದೆ ಎಂದು ಶೇ 34ರಷ್ಟು ಜನರು ಹೇಳಿದ್ದರೆ, ಸಾಧಾರಣವಾಗಿದೆ ಎಂದು ಶೇ 16 ಮತ್ತು ತೃಪ್ತಿದಾಯಕವಾಗಿಲ್ಲ ಎಂದು ಶೇ 18ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಕಮಲ್ ನಾಥ್ ಮತ್ತು ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಆಡಳಿತದ ಬಗ್ಗೆ ಜನರನ್ನು ಕೇಳಿದಾಗ ಶೇ 36ರಷ್ಟು ಜನರು ಶಿವರಾಜ್ ಸಿಂಗ್ ಚೌವ್ಹಾಣ್ ಪರ, ಶೇ 34ರಷ್ಟು ಜನರು ಕಮಲನ್ ನಾಥ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 6ರಷ್ಟು ಜನರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಶೇ 13ರಷ್ಟು ಜನರು ಇಬ್ಬರ ಆಡಳಿತವೂ ಒಂದೇ ರೀತಿಯಾಗಿತ್ತು ಎಂದು ಹೇಳಿದ್ದಾರೆ.
ಈ ಬಾರಿಯ ಚುನಾವಣೆಯ ಪ್ರಮುಖ ವಿಚಾರ ಯಾವುದು? ಎಂಬ ಪ್ರಶ್ನೆಗೆ ಶೇ 27ರಷ್ಟು ಜನರು ನಿರುದ್ಯೋಗ, ಶೇ 27ರಷ್ಟು ಜನರು ಬೆಲೆ ಏರಿಕೆ, ಶೇ 13ರಷ್ಟು ಜನರು ಬಡತನ, ಶೇ 5ರಷ್ಟು ಜನರು ಭ್ರಷ್ಟಾಚಾರ, ಶೇ 20ರಷ್ಟು ಜನರು ಇತರ ವಿಚಾರಗಳು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಬೇಕೆ? ಎಂದು ಜನರನ್ನು ಪ್ರಶ್ನಿಸಲಾಗಿದೆ. ಆಗ ಶೇ 44ರಷ್ಟು ಜನರು ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ 20ರಷ್ಟು ಜನರು ಬೇಡ ಎಂದು ಮತ್ತು ಶೇ 32ರಷ್ಟು ಜನರು ಏನೂ ಹೇಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications