New Parliament Inauguration: ಮೇ 28ರ ಸಂಸತ್ ಭವನ ಉದ್ಘಾಟನೆ ಬಹಿಷ್ಕರಿಸಿದ 19 ವಿಪಕ್ಷಗಳ ನಡೆಗೆ ಖಂಡನೆ ವ್ಯಕ್ತ
ಬೆಂಗಳೂರು, ಮೇ 25: ಇದೇ ಮೇ 28 ರಂದು ಭಾನುವಾರ ಉದ್ಘಾಟನೆಗೊಳ್ಳುತ್ತಿರುವ ಹೊಸ ಸಂಸತ್ ಭವನದ ಕಾರ್ಯಕ್ರಮಕ್ಕೆ ಆಮಂತ್ರಣ ವಿಚಾರವಾಗಿ ಬಹುತೇಕ ಎಲ್ಲ ವಿರೋಧ ಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಮಧ್ಯೆ ಎನ್‌ಡಿಎ ಪಕ್ಷವು ವಿಪಕ್ಷಗಳ ನಿರ್ಧಾರವನ್ನು ಬಹಿರಂಗವಾಗೇ ಖಂಡಿಸಿದೆ.
ಸಂಸತ್ ಭವನ ಕಟ್ಟಡ ಉದ್ಘಾಟನೆಯನ್ನು ಸುಮಾರು 19 ರಾಜಕೀಯ ಪಕ್ಷಗಳು ಬಹಿಷ್ಕರಿಸುವುದಾಗಿ ಘೋಷಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೇಂದ್ರವು ಅವಮಾನಿಸಲಾಗಿದೆ ಎಂದು ಕೆಲವು ಪಕ್ಷಗಳ ಮುಖಂಡರು ಆರೋಪಿಸಿದ್ದಾರೆ. ಇನ್ನೂ ಕೆಲವು ಕಾರಣಗಳಿಂದಾಗಿ ಲೋಕಾರ್ಪಣೆ ಸಮಾವೇಶಕ್ಕೆ ಗೈರಾಗುವು ಬಗ್ಗೆ, ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರೆ. ವಿಪಕ್ಷಗಳ ಈ ನಡೆಯನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಖಂಡಿಸಿದೆ.

ವಿಪಕ್ಷಗಳ ಈ ನಿರ್ಧಾರವು ಕೇವಲ ಅಗೌರವ ತೋರಿದಂತಲ್ಲ, ಇದು ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಘೋರವಾದ ಅವಮಾನ ಮಾಡಿದಂತಾಗಿದೆ ಎಂದು ಎನ್‌ಡಿಎ ಬೇಸರ ವ್ಯಕ್ತಪಡಿಸಿದೆ. ಈ ಮೂಲಕ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸದೇ ಹಾಜರಾಗಿ ಸಾಂವಿಧಾನಿಕ ಮೌಲ್ಯಗಳಿಗೆ ಬೆಲೆ ಕೊಡಿ ಎಂದು ತಿಳಿಸಿದೆ.
ಕಾರಣ ಸಂಸತ್ ಭವನ ಕೇವಲ ಅದೊಂದು ಕಟ್ಟಡವಲ್ಲ. ರಾಜಕೀಯ ಹಳೇ ಸಂಪ್ರದಾಯ, ಮೌಲ್ಯಗಳು, ಪೂರ್ವ ನಿದರ್ಶನಗಳು ಮತ್ತು ಮಹತ್ವದ ನಿಯಮಗಳನ್ನು ಒಳಗೊಂಡ ಕೇಂದ್ರವು ಹೌದು. ಇದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರೇನ್ ಅಭಿಪ್ರಾಯಪಟ್ಟಿದ್ದಾರೆ.
ಆ. 15ರಂದು ಕಾರ್ಯಕ್ರಮ ಆಯೋಜಿಸಬೇಕಿತ್ತು?
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನ ಲೋಕಾರ್ಪಣೆಗೆ ಆಹ್ವಾನಿಸಿಲ್ಲ. ಮುರ್ಮು ಅವರೇ ಭವನ ಉದ್ಘಾಟನೆ ಮಾಡಬೇಕು ಎಂದು ವಿಪಕ್ಷಗಳ ಕೆಲ ಮುಖಂಡರು ಆಗ್ರಹಿಸಿದ್ದರು. ಅಲ್ಲದೇ ವಿಡಿ ಸಾವರ್ಕರ್ ಜನ್ಮದಿನದಂದು ಉದ್ಘಾಟನೆ ಸಮಾರಂಭ ಇಟ್ಟುಕೊಳ್ಳಲಾಗಿದೆ. ಅದರ ಬದಲಾಗಿ ಆಗಸ್ಟ್ 15ರಂದು ಆಯೋಜಿಸಬೇಕಿತ್ತು ಎಂದೆಲ್ಲ ಆಕ್ಷೇಪಗಳು ಕೇಳಿ ಬಂದವು.

ಕೇಂದ್ರ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಆಹ್ವಾನಿಸದೇ ಕೇವಲ ಅವರಿಗೆ ಮಾತ್ರ ಅವಮಾನಿಸಿಲ್ಲ, ದಲಿತ, ಬುಡಕಟ್ಟು ಮತ್ತು ಸಮಾಜದ ಮೂಲ ವರ್ಗಕ್ಕೆ ಅವಮಾನ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಕಿಡಿ ಕಾರಿತ್ತು. ಸಮಾರಂಭವನ್ನು ಬಹಿಷ್ಕರಿಸುವಂತೆ ಕರೆ ನೀಡಿತ್ತು. ಇತ್ತ ಕಾಂಗ್ರೆಸ್ ಈ ವಿಚಾರದಲ್ಲಿ ಯಾವ ನಿಲುವು ಕೈಗೊಳ್ಳಲಿದೆ ಎಂಬುದು ಇಂದು ತಿಳಿಯಲಿದೆ. ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದರು.












Click it and Unblock the Notifications