ರಾಹುಲ್ ಗಾಂಧಿ ಫಿರಂಗಿ, ನಾನು AK 47: ಸಿಧು ಸಿಡಿಗುಂಡು!
ಬಿಲಾಸ್ಪುರ, ಮೇ 16: "ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೋಕರೇಜ್ ಪಡೆದಿದ್ದು ಹೌದೋ ಅಲ್ಲವೋ ಎಂದು ಮೋದಿಯವರು ಸತ್ಯ ಹೇಳಬೇಕು. ರಫೇಲ್ ಗೆ ಸಂಬಂಧಿಸಿದ ಚರ್ಚೆಗೆ ನಾನು ಎಂದಿಗೂ ಸಿದ್ಧ. ರಾಹುಲ್ ಗಾಂಧಿ ಫಿರಂಗಿಯಾದರೆ, ನಾನು ಎಕೆ 47 ಗನ್" ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು, 2014 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಂಗೆಯ ಪುತ್ರ ಎನ್ನುತ್ತ ಅಧಿಕಾರಕ್ಕೆ ಬಂದರು. ಈಗ ರಫೇಲ್ ಏಜೆಂಟ್ ಆಗಿ ವಾಪಸ್ ಹೋಗುತ್ತಿದ್ದಾರೆ ಎಂದು ಮೋದಿ ಅವರನ್ನು ಲೇವಡಿ ಮಾಡಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
"ನಾನು ಭ್ರಷ್ಟಾಚಾರ ಮಾಡುತ್ತೇನೆ. ಮತ್ತು ಬೇರೆಯವರಿಗೂ ಮಾಡಲು ಬಿಡುತ್ತೇನೆ ಎಂಬ ವಿಷಯದ ಬಗ್ಗೆ ನಾನು ಮೋದಿ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಅಕಸ್ಮಾತ್ ಈ ಚರ್ಚೆಯಲ್ಲಿ ನಾನು ಸೋತರೆ ನಾನು ರಾಜಕೀಯವನ್ನೇ ಬಿಡುತ್ತೇನೆ" ಎಂದು ಸಿಧು ಹೇಳಿದರು.

ಇತ್ತೀಚೆಗೆ ಮೋದಿ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ಮಾಡುತ್ತಲೇ ಇರುವ ಸಿಧು, "ನಿಮ್ಮ ತಪ್ಪಾದ ಒಂದೇ ಒಂದು ಮತ ನಿಮ್ಮ ಮಕ್ಕಳನ್ನು ಪಕೋಡಾ ಮಾರುವಂತೆ ಮಾಡಬಹುದು" ಎಂದು ಮೋದಿ ಸರ್ಕಾರವನ್ನು ಗೇಲಿ ಮಾಡಿದ್ದರು.
ಹಿಮಾಚಲ ಪ್ರದೇಶದಲ್ಲಿ ಮೇ 19 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ತನ್ನಿಮಿತ್ತ ಅವರು ಪ್ರಚಾರ ನಡೆಸುತ್ತಿದ್ದರು. ಮೇ 23 ರಂದು ಲೋಕಸಭೆ ಚ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.












Click it and Unblock the Notifications