Bank Strike Jan 27: ವಾರದಲ್ಲಿ 5 ದಿನ ಕೆಲಸದ ಅವಧಿಗೆ ಆಗ್ರಹ: ದೇಶವ್ಯಾಪಿ ಬ್ಯಾಂಕ್ ಮುಷ್ಕರ
ನವದೆಹಲಿ: ಬ್ಯಾಂಕ್ ನೌಕರರು ತಮ್ಮ ಬಹುದಿನಗಳ ಬೇಡಿಕೆ ಆಗಿರುವ ವಾರಕ್ಕೆ 5 ದಿನ ಕೆಲಸ ನೀತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ವಾರದಲ್ಲಿ ಐದು ದಿನ ಮಾತ್ರ ಕೆಲಸ ನೀತಿಯನ್ನು ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಲು ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಿರ್ಧರಿಸಿದೆ. ಇದರಿಂದ ಮಂಗಳವಾರ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಬ್ಯಾಂಕಿಂಗ್ ಕಾರ್ಯಾಚರಣೆ ವ್ಯತ್ಯಾಸವಾಗುವ ಸಾಧ್ಯತೆ ಇದೆ.
ಬ್ಯಾಂಕ್‌ಗಳ ನೌಕರರ ಒಕ್ಕೂಟವು ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಂಧಾನ ಸಭೆಯನ್ನು ನಡೆಸಿತ್ತು. ಈ ಸಂಧಾನ ಸಭೆಯಲ್ಲಿ ಬ್ಯಾಂಕ್ ನೌಕರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಪ್ರತಿನಿಧಿಸುವ ಒಂಬತ್ತು ಸಂಘಟನೆಗಳ ಒಕ್ಕೂಟವಾದ UFBU ಮುಷ್ಕರಕ್ಕೆ ಕರೆ ನೀಡಿದೆ. ಇನ್ನು ಕಳೆದ ಎರಡು ದಿನಗಳಿಂದ ಬ್ಯಾಂಕ್ ಮುಚ್ಚಿತ್ತು. ಮಂಗಳವಾರವೂ ವ್ಯತ್ಯಾಸವಾಗುತ್ತಿರುವುದು ಬ್ಯಾಂಕ್ ಕೆಲಸ ಮಾಡಿಕೊಳ್ಳಬೇಕು ಎಂದು ಕಾಯುತ್ತಿರುವವರಿಗೆ ಸಮಸ್ಯೆಯನ್ನು ತಂದೊಡ್ಡಿದೆ. ಜನವರಿ 25ರ (ಭಾನುವಾರ) ಮತ್ತು ಜನವರಿ 26 (ಗಣರಾಜ್ಯೋತ್ಸವ)ದ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿ ಬ್ಯಾಂಕುಗಳು ಮುಚ್ಚಲ್ಪಟ್ಟಿದ್ದವು. ಇದೀಗ ಮಂಗಳವಾರವೂ ಮುಷ್ಕರ ಇರುವುದರಿಂದ ಸತತ ಮೂರನೇ ದಿನ ಬ್ಯಾಂಕಿಂಗ್ ವಹಿವಾಟಿನಲ್ಲಿ ವ್ಯತ್ಯಾಸವಾಗಲಿದೆ.

ಬ್ಯಾಂಕ್ ನೌಕರರಿಗೆ ವಾರಕ್ಕೆ ಐದು ದಿನ ಕೆಲಸ ಸೀಮಿತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವ ಆಗ್ರಹ ಇದೆ. ಈಚೆಗೆ ಸಂಧಾನ ಪ್ರಕ್ರಿಯೆಯ ಸಮಯದಲ್ಲಿ ವಿವರವಾದ ಚರ್ಚೆಗಳ ಹೊರತಾಗಿಯೂ, ನಮ್ಮ ಬೇಡಿಕೆಯ ಬಗ್ಗೆ ಯಾವುದೇ ಭರವಸೆ ಕೊಡಲಿಲ್ಲ. ಹೀಗಾಗಿ ನಾವು ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು UFBU ಘಟಕವಾದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಹೆಚ್ಚುವರಿ ಕೆಲಸ
ಇನ್ನು ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು. ಸೋಮವಾರದಿಂದ ಶುಕ್ರವಾರದವರೆಗೆ ನಾವು ಪ್ರತಿದಿನ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ. ಪ್ರತಿದಿನವೂ 40 ನಿಮಿಷಗಳು ಹೆಚ್ಚುವರಿ ಕೆಲಸ ಮಾಡುವುದರಿಂದ ನಷ್ಟವಾಗುವುದಿಲ್ಲ. ಕೆಲಸಗಳು ಸಹ ಬಾಕಿ ಉಳಿಯುವುದಿಲ್ಲ ಎನ್ನುವುದು ಬ್ಯಾಂಕ್ ನೌಕರರ ವಾದವಾಗಿದೆ.
ವಿವಿಧ ಬ್ಯಾಂಕ್‌ಗಳ ವಹಿವಾಟಿನ ಮೇಲೆ ಪರಿಣಾಮ ಸಾಧ್ಯತೆ
ಇನ್ನು ಮಂಗಳವಾರ ಬ್ಯಾಂಕ್ ನೌಕರರು ದೇಶವ್ಯಾಪ್ತಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಶಾಖೆಗಳಲ್ಲಿ ನಗದು ಠೇವಣಿ, ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಆಡಳಿತಾತ್ಮಕ ಕೆಲಸಗಳಂತಹ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಪ್ರಮುಖ ಖಾಸಗಿ ವಲಯದ ಕೆಲವು ನಿರ್ದಿಷ್ಟ ಬ್ಯಾಂಕ್‌ಗಳು ಮುಷ್ಕರ ನಡೆಸಲಿರುವ ಒಕ್ಕೂಟಗಳ ಭಾಗಿಯಾಗಿಲ್ಲ.
ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸಲಿವೆ. ಆದಾಗ್ಯೂ ಎಟಿಎಂ ನಗದು ಲಭ್ಯತೆಯು ಲಾಜಿಸ್ಟಿಕ್ ವಿಳಂಬದಿಂದಾಗಿ ಸ್ಥಳೀಯ ಉಂಟಾಗುವ ಸಾಧ್ಯತೆ ಇದೆ. ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸಬೇಕೆಂದು ಒಕ್ಕೂಟಗಳು ಒತ್ತಾಯಿಸುತ್ತಿವೆ. ಇದು ಮಾರ್ಚ್ 2024 ರಲ್ಲಿ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ನೊಂದಿಗೆ ಸಹಿ ಹಾಕಿದ 12 ನೇ ದ್ವಿಪಕ್ಷೀಯ ಒಪ್ಪಂದದ ಸಮಯದಲ್ಲಿ ಒಪ್ಪಿಕೊಂಡ ಪ್ರಮುಖ ಅಂಶವಾಗಿದೆ ಎಂದು ಹೇಳಲಾಗಿದೆ. ಈಗ ಬ್ಯಾಂಕ್‌ಗಳು ಪ್ರತಿ ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರದಂದು ಕಾರ್ಯನಿರ್ವಹಿಸುತ್ತಿವೆ.












Click it and Unblock the Notifications