ಇಡಿ ವಿಚಾರಣೆಗೆ ಸೋನಿಯಾ ಗಾಂಧಿ; ರಸ್ತೆಗಿಳಿಯಲು ಕಾಂಗ್ರೆಸ್ ಅಣಿ
ನವದೆಹಲಿ, ಜುಲೈ 21: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆಗಾಗಿ ಗುರುವಾರ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಲಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಜಾರಿ ನಿರ್ದೇಶನಾಲಯದ ಕಚೇರಿಗೆ ಸೋನಿಯಾ ಗಾಂಧಿ ತೆರಳಲಿದ್ದಾರೆ. ಇದೇ ಮೊದಲ ಬಾರಿಗೆ ತನಿಖಾ ಸಂಸ್ಥೆಯು ಕಾಂಗ್ರೆಸ್ ಅಧ್ಯಕ್ಷರನ್ನು ಪ್ರಶ್ನಿಸುತ್ತಿದೆ. ಇವರ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸೋನಿಯಾ ಗಾಂಧಿಯವರ ಜೊತೆಗೆ ವಿಚಾರಣೆಗಾಗಿ ಇಡಿ ಕಚೇರಿಗೆ ತೆರಳಲಿದ್ದಾರೆ.
ಇದಕ್ಕೂ ಮುನ್ನ ದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪ್ರಸ್ತುತ ಸಂಸದರೂ ಆಗಿರುವ ರಾಹುಲ್ ಗಾಂಧಿಯನ್ನು ಐದು ದಿನಗಳಲ್ಲಿ 50 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.

ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ಅಣಿ: ಸೋನಿಯಾ ಗಾಂಧಿ ಅನ್ನು ಇಡಿ ಪ್ರಶ್ನಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು "ದುರುಪಯೋಗಪಡಿಸಿಕೊಳ್ಳುವ" ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಆಯಾ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ತನ್ನ ರಾಜ್ಯ ಘಟಕಗಳಿಗೆ ಈಗಾಗಲೇ ಸೂಚನೆ ನೀಡಿದೆ.
ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಬುಧವಾರ ಸಭೆ ನಡೆದಿದ್ದು, ಇಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ಸಭೆಯಲ್ಲಿದ್ದವರೆಲ್ಲರೂ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವುದರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. "ಕಾಂಗ್ರೆಸ್ ಸೋನಿಯಾ ಗಾಂಧಿಯೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತದೆ" ಎಂದು ಗೆಹ್ಲೋಟ್ ಹೇಳಿದ್ದಾರೆ.
ಹೆಚ್ಚುವರಿ ಕಾಲಾವಕಾಶ ಕೋರಿದ್ದ ಸೋನಿಯಾ ಗಾಂಧಿ: ಕಳೆದ ಜೂನ್ 2ರಂದು ಸೋನಿಯಾ ಗಾಂಧಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಕಾಲಾವಕಾಶ ನೀಡುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೋನಿಯಾ ಗಾಂಧಿ ಜೂನ್ ಮಧ್ಯಭಾಗದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ತದನಂತರದಲ್ಲಿ ಜುಲೈ 21ಕ್ಕೆ ವಿಚಾರಣೆಗೆ ಹಾಜರಾಗಲು ಇಡಿ ನೋಟಿಸ್ ಜಾರಿಗೊಳಿಸಿತ್ತು.
ಮನಿ ಲಾಂಡರಿಂಗ್ ಪ್ರಕರಣ: ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆದಾಯ ತೆರಿಗೆ ಇಲಾಖೆಯ ತನಿಖೆಯನ್ನು ವಿಚಾರಣಾ ನ್ಯಾಯಾಲಯವು ಗಮನಕ್ಕೆ ತಂದ ನಂತರ ಇತ್ತೀಚೆಗೆ ಏಜೆನ್ಸಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಪತ್ರಿಕೆಯನ್ನು ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಸ್ವಾಧೀನದಲ್ಲಿ ವಂಚನೆ, ಪಿತೂರಿ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯ ಆರೋಪಗಳನ್ನು ಈ ಪ್ರಕರಣವು ಒಳಗೊಂಡಿದೆ. ಜಾರಿ ನಿರ್ದೇಶನಾಲಯದ ವಿಚಾರಣೆ ಆಡಳಿತಾರೂಢ ಬಿಜೆಪಿಯ ಸೇಡಿನ ರಾಜಕಾರಣದ ಭಾಗ ಎಂದು ಕಾಂಗ್ರೆಸ್ ಕೆಂಡ ಕಾರಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅವ್ಯವಹಾರದ ಆರೋಪ: ದೇಶದಲ್ಲಿ ತದನಂತರ ಪ್ರಕಟಗೊಂಡ ಇತರ ಪತ್ರಿಕೆಗಳಿಗೆ ಪೈಪೋಟಿ ನೀಡುವುದಕ್ಕೆ ಸಾಧ್ಯವಾಗದೇ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗದೇ ತೀವ್ರ ವೈಫಲ್ಯವನ್ನು ಅನುಭವಿಸಿತು. ಇದರ ಪರಿಣಾಮವಾಗಿ ಜಾಹೀರಾತು ಆದಾಯದ ಕೊರತೆ ಸೃಷ್ಟಿಯಾಯಿತು. ಕಳೆದ 2008ರಲ್ಲಿ ಮೂರೂ ಆವೃತ್ತಿಯ ಪ್ರಕಟಣೆ ಸ್ಥಗಿತಗೊಳಿಸುತ್ತಿರುವುದಾಗಿ ಪತ್ರಿಕೆ ಘೋಷಿಸಿತು. 29/09/2010ರ ವೇಳೆಗೆ ಷೇರು ಹೋಲ್ಡರುಗಳ ಸಂಖ್ಯೆ 1057ಕ್ಕೆ ಇಳಿದಿತ್ತು. ಆ ಸಮಯದಲ್ಲಿ ಸಂಸ್ಥೆಯು 90.25 ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು.












Click it and Unblock the Notifications