ಪೊಲೀಸರ ತಳ್ಳಾಟದಿಂದ ಪಕ್ಕೆಲುಬು ಮುರಿದುಕೊಂಡ ಪಿ. ಚಿದಂಬರಂ
ನವದೆಹಲಿ, ಜೂನ್ 13: ನ್ಯಾಷನಲ್ ಹೆರಾಲ್ಡ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಂದು ಕಡೆ ಸಂಸದ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರೆ, ದೇಶದ ಹಲವೆಡೆ ಕಾಂಗ್ರೆಸ್ ನಾಯಕರು ಇಡಿ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ವೇಳೆ ಪೊಲೀಸರು ತಳ್ಳಿದ ನಂತರ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ನಾಯಕ ಪಿ. ಚಿದಂಬರಂ ಎಡ ಪಕ್ಕೆಲುಬು ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಟ್ವಿಟರ್‌ನಲ್ಲಿ ವಿಡಿಯೋ ಹೇಳಿಕೆಯಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಅನಾಗರಿಕತೆಯ ಎಲ್ಲಾ ಮಿತಿಗಳನ್ನು ದಾಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್: "ಮೋದಿ ಸರ್ಕಾರವು ಅನಾಗರಿಕತೆಯ ಎಲ್ಲ ಮಿತಿಗಳನ್ನು ದಾಟಿದೆ, ಮಾಜಿ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಪೊಲೀಸರು ಹೊಡೆದರು, ಅವರ ಕನ್ನಡಕವನ್ನು ನೆಲಕ್ಕೆ ಎಸೆಯಲಾಯಿತು, ಅವರ ಎಡ ಪಕ್ಕೆಲುಬಿನಲ್ಲಿ ಮುರಿತವಾಗಿದೆ, ಸಂಸದ ಪ್ರಮೋದ್ ತಿವಾರಿ ಅವರನ್ನು ರಸ್ತೆಯಲ್ಲಿ ಎಸೆಯಲಾಯಿತು. ಅವರ ತಲೆಗೆ ಗಾಯ ಮತ್ತು ಪಕ್ಕೆಲುಬು ಮುರಿತವಾಗಿದೆ. ಇದು ಪ್ರಜಾಪ್ರಭುತ್ವವೇ?" ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಇಡಿ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಗಾಂಧಿ: ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ ಹಿನ್ನೆಲೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾದರು. ಸೋಮವಾರ ಬೆಳಗ್ಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿಯಿಂದ ಇಡಿ ಕಚೇರಿವರೆಗೂ ಕಾಲ್ನಡಿಗೆ ಶುರು ಮಾಡಿದ್ದರು. ಸ್ವಲ್ಪ ದೂರ ತೆರಳುತ್ತಿದ್ದಂತೆ ಕಾರ್ಯಕರ್ತರು ಮೈ ಮೇಲೆ ನುಗ್ಗಿ ಬರುವುದಕ್ಕೆ ಶುರುವಾದ ಹಿನ್ನೆಲೆ ಕಾರು ಏರಿ ಇಡಿ ಕಚೇರಿಗೆ ತಲುಪಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ರಾಹುಲ್ ಗಾಂಧಿಯನ್ನು ಬರೋಬ್ಬರಿ 9 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಲಾಯಿತು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅವ್ಯವಹಾರದ ಆರೋಪ: ದೇಶದಲ್ಲಿ ತದನಂತರ ಪ್ರಕಟಗೊಂಡ ಇತರ ಪತ್ರಿಕೆಗಳಿಗೆ ಪೈಪೋಟಿ ನೀಡುವುದಕ್ಕೆ ಸಾಧ್ಯವಾಗದೇ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗದೇ ತೀವ್ರ ವೈಫಲ್ಯವನ್ನು ಅನುಭವಿಸಿತು. ಇದರ ಪರಿಣಾಮವಾಗಿ ಜಾಹೀರಾತು ಆದಾಯದ ಕೊರತೆ ಸೃಷ್ಟಿಯಾಯಿತು. ಕಳೆದ 2008ರಲ್ಲಿ ಮೂರೂ ಆವೃತ್ತಿಯ ಪ್ರಕಟಣೆ ಸ್ಥಗಿತಗೊಳಿಸುತ್ತಿರುವುದಾಗಿ ಪತ್ರಿಕೆ ಘೋಷಿಸಿತು. 29.09.2010ರ ವೇಳೆಗೆ ಷೇರು ಹೋಲ್ಡರುಗಳ ಸಂಖ್ಯೆ 1057ಕ್ಕೆ ಇಳಿದಿತ್ತು. ಆ ಸಮಯದಲ್ಲಿ ಸಂಸ್ಥೆಯು 90.25 ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು.
ನ್ಯಾಷನಲ್ ಹೆರಾಲ್ಡ್ ಮತ್ತು ಕಾಂಗ್ರೆಸ್ ನಡುವಿನ ನಂಟು; ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ವೈಐಎಲ್ 90.25 ಕೋಟಿ ರೂಪಾಯಿ ಬಡ್ಡಿರಹಿತ ಸಾಲವನ್ನು ನೀಡಿತ್ತು. ಇದರಲ್ಲಿ ಎಐಸಿಸಿ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿ ನೇರವಾಗಿ ವರ್ಗಾವಣೆಯಾಗಿತ್ತು ಎಂಬ ಆರೋಪವಿದೆ. ಅಲ್ಲದೇ, ಹೆರಾಲ್ಡ್ ಒಡೆತನದಲ್ಲಿದ್ದ 'ಹೆರಾಲ್ಡ್ ಹೌಸ್' ನವೀಕರಣಕ್ಕೆ ಒಂದು ಕೋಟಿ ರೂಪಾಯಿ ನೀಡಿತ್ತು ಎಂದು ಹೇಳಲಾಗುತ್ತಿದೆ.












Click it and Unblock the Notifications