3ನೇ ಬಾರಿಗೆ ಪ್ರಧಾನಿ: ನೆಹರು ದಾಖಲೆ ಮುರಿದ ನರೇಂದ್ರ ಮೋದಿ
ಬೆಂಗಳೂರು, ಜೂನ್ 09; ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಿದೆ. ನರೇಂದ್ರ ಮೋದಿ ಭಾನುವಾರ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮೋದಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾದರು.
ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾಗಿದ್ದ ನರೇಂದ್ರ ಮೋದಿ (73) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದರು. ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದ್ರೌಪದಿ ಮುರ್ಮು ನರೇಂದ್ರ ಮೋದಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

2014, 2019 ಮತ್ತು 2024ರ ಲೋಕಸಭೆ ಚುನಾವಣೆಯ ಬಳಿಕ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ದಾಖಲೆಯನ್ನು ಮುರಿದರು. ನೆಹರು ಸತತ ಮೂರು ಬಾರಿ ಚುನಾವಣೆಗಳಲ್ಲಿ ಗೆದ್ದು, ಮೂರು ಬಾರಿ ಪ್ರಧಾನಿಯಾಗಿದ್ದರು.
ಮೂರು ಬಾರಿ ಪ್ರಧಾನಿ: ಜವಾಹರಲಾಲ್ ನೆಹರು 1947 ರಿಂದ 1964 ರವರೆಗೆ 16 ವರ್ಷ ಮತ್ತು 286 ದಿನಗಳ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 1951-52 ರಲ್ಲಿ ಕಾಂಗ್ರೆಸ್ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ನಂತರ ಮತ್ತು ಆನಂತರ 1957 ಮತ್ತು 1962ರಲ್ಲಿ ನೆಹರು ಪ್ರಧಾನಿಯಾಗಿದ್ದರು. ನೆಹರೂ ಮೇ 1964ರಲ್ಲಿ ತಮ್ಮ ಮೂರನೇ ಅವಧಿಯ ಮಧ್ಯದಲ್ಲಿ ನಿಧನ ಹೊಂದಿದರು.
ನೆಹರೂ ಮೂರನೇ ಅವಧಿಯಲ್ಲಿಯೂ ಸಹ ಸಂಪೂರ್ಣ ಬಹುಮತವನ್ನು ಉಳಿಸಿಕೊಂಡು ಸರ್ಕಾರ ರಚನೆ ಮಾಡಿದ್ದರು. ಆದರೆ 2019ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದಿದ್ದ ಬಿಜೆಪಿ 2024ರಲ್ಲಿ 240 ಸ್ಥಾನಗಳನ್ನು ಮಾತ್ರ ಪಡೆದಿದೆ. ಎನ್‌ಡಿಎ ಮೈತ್ರಿಕೂಡದ ಪಾಲುದಾರ ಪಕ್ಷಗಳ ಜೊತೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ 17 ಸೆಪ್ಟೆಂಬರ್ 1950ರಂದು ಗುಜರಾತ್ ರಾಜ್ಯದ ವಡ್ನಗರ್‌ದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಪ್ರಧಾನಿಯಾಗುವುದಕ್ಕೂ ಮೊದಲು ನರೇಂದ್ರ ಮೋದಿ 2001ರಿಂದ 2014 ರವರೆಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಲೋಕಸಭೆಯಲ್ಲಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2014ರ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಚುನಾವಣಾ ಕಣಕ್ಕಿಳಿದಿದ್ದರು. 581,022 ಮತಗಳನ್ನು ಪಡೆದು ಜಯಗಳಿಸಿದರು ಮತ್ತು ಮೊದಲ ಬಾರಿಗೆ ಭಾರತದ ಪ್ರಧಾನಿಯಾದರು.
2019ರ ಚುನಾವಣೆಯಲ್ಲಿ ನರೇಂದ್ರ ಮೋದಿ 2ನೇ ಬಾರಿಗೆ ವಾರಣಾಸಿಯಿಂದ ಕಣಕ್ಕಿಳಿದರು. 674,664 ಮತಗಳನ್ನು ಪಡೆದು ಜಯಗಳಿಸಿದರು. 2ನೇ ಅವಧಿಗೆ ಭಾರತದ ಪ್ರಧಾನಿಯಾದರು. 2024ರಲ್ಲಿ ಅವರು ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಆದರೆ ಅವರು ಪುನಃ ವಾರಣಾಸಿಯಿಂದ ಕಣಕ್ಕಿಳಿದರು. ಚುನಾವಣೆಯಲ್ಲಿ 6,12,970 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಮೂಲಕ 2014, 2019 ಮತ್ತು 2024ರಲ್ಲಿ ವಾರಣಾಸಿಯಲ್ಲಿ ಜಯಗಳಿಸಿದ್ದಾರೆ. ಮೂರು ಬಾರಿಯೂ ಭಾರತದ ಪ್ರಧಾನಿಯಾಗಿದ್ದಾರೆ.












Click it and Unblock the Notifications