ದೇಹದ ಪ್ರತಿ ಕಣವೂ ಈ ದೇಶಕ್ಕೆ: ಗೆದ್ದ ಮೋದಿಯ ವಿನಮ್ರ ಮಾತುಗಳು
ನವದೆಹಲಿ, ಮೇ 23: ದೇಶದ ಜನ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಮತ್ತೊಮ್ಮೆ ನಮಗೆ ನೀಡಿದ್ದಾರೆ. ನಾನು ಒಂದು ಕ್ಷಣವೂ ನನಗಾಗಿ ಕೆಲಸ ಮಾಡುವುದಿಲ್ಲ, ಈ ದೇಹದ ಪ್ರತಿ ಕಣವೂ ದೇಶಕ್ಕೆ ಅರ್ಪಿಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ಬಳಿಕ ನವದೆಹಲಿಯಲ್ಲಿ ಬಿಜೆಪಿಯ ಮುಖ್ಯಕಚೇರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತದಾರರನ್ನು ಶ್ರೀ ಕೃಷ್ಣನಿಗೆ ಹೋಲಿಸಿದ ಅವರು, ಆ ಶ್ರೀ ಕೃಷ್ಣ ಯಾರ ಪಕ್ಷವೂ ನಿಲ್ಲದೆ ಕೇವಲ ಹಸ್ತಿನಾಪುರದ ಒಳಿತಿಗಾಗಿ ನ್ಯಾಯ, ಸತ್ಯದ ಪರ ನಿಂತಂತೆ ಮತದಾರರು ನಮ್ಮ ಪರ ನಿಂತಿದ್ದಾರೆ ಎಂದು ಮೋದಿ ಹೇಳಿದರು.
ಈ ಗೆಲುವು ಭಾರತದ ಗೆಲುವು, ದೇಶದ ಜನರ ಗೆಲುವು, ಭ್ರಷ್ಟಾಚಾರ ಮುಕ್ತ ದೇಶ ಕಟ್ಟುವ ಕನಸ್ಸು ಹೊಂದಿರುವವರ ವಿಜಯ ಎಂದ ಮೋದಿ, ನಮಗೆ ಸಿಕ್ಕ ಈ ಗೆಲುವನ್ನು ಬಿಜೆಪಿ ಮತ್ತು ಎನ್‌ಡಿಎಯ ಗೆಳೆಯರ ಜನರ ಪಾದಗಳಿಗೆ ಅರ್ಪಿಸುತ್ತೇವೆ ಎಂದು ಮೋದಿ ಹೇಳಿದರು.

ಬಿಜೆಪಿಯ ಕಾರ್ಯಕರ್ತರ ನೆನದ ಮೋದಿ
ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ಯಾವ ಪ್ರಲೋಭನೆಗಳಿಲ್ಲದೆ, ಕೇವಲ ದೇಶಕ್ಕಾಗಿ ಬಿಜೆಪಿಯ ಪರವಾಗಿ ಹಗಲು ರಾತ್ರಿಗಳನ್ನು ಒಟ್ಟು ಮಾಡಿ ದುಡಿದರು. ಈ ಗೆಲುವಿನಲ್ಲಿ ಅವರ ಯೋಗದಾನ ಅತ್ಯಂತ ಪ್ರಮುಖವಾದುದು. ಪ್ರಜಾಪ್ರಭುತ್ವಕ್ಕಾಗಿ, ದೇಶದ ಅಭಿವೃದ್ಧಿಗಾಗಿ, ತಾವು ನಂಬಿದ ವಿಚಾರಕ್ಕಾಗಿ ನಮ್ಮ ಹಲವು ಕಾರ್ಯಕರ್ತರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದ ಮೋದಿ, ಮಡಿದ ಕಾರ್ಯಕರ್ತರಿಗೆ ಗೌರವ ಸಲ್ಲಿಸಿದರು.

ಹಳೆಯ ದಿನಗಳನ್ನು ನೆನೆದ ಮೋದಿ
ಹಳೆಯ ದಿನಗಳನ್ನು ನೆನಪಿಸಿಕೊಂಡ ಮೋದಿ, ಲೋಕಸಭೆಯಲ್ಲಿ ನಮ್ಮ ಸಂಖ್ಯೆ ಕೇವಲ ಎರಡು ಇತ್ತು ಒಮ್ಮೆ, ಆದರೆ ನಾವಿಂದು ಎರಡನೇಯ ಬಾರಿ ಆರಿಸಿಬಂದಿದ್ದೇವೆ ಎಂದರು. ಇಬ್ಬರು ಇದ್ದಾಗಲೂ ಕೂಡ ನಿರಾಶರಾಗಲಿಲ್ಲ, ಆಗಲೂ ತಪ್ಪು ಹಾದಿ ಹಿಡಿದಿರಲಿಲ್ಲ, ಈಗ ಎರಡನೇ ಬಾರಿ ಆರಿಸಿ ಬಂದಿದ್ದೇವೆ ಈಗಲೂ ಸಹ ನಮ್ರತೆ ಬಿಡುವುದಿಲ್ಲ, ತಪ್ಪು ಹಾದಿ ತುಳಿಯುವುದಿಲ್ಲ, ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಮೋದಿ ಭರವಸೆ ನೀಡಿದರು.

ವಿರೋಧಿಗಳಗಳನ್ನು ಹಣಿದ ಮೋದಿ
ಇದೇ ಸಮಯದಲ್ಲಿ ವಿರೋಧಿಗಳನ್ನು ಮಾತಿನಲ್ಲಿ ಹಣಿದ ಮೋದಿ, ಕೆಲವರು ಜಾತ್ಯಾತೀತವಾದದ ಮುಖವಾಡ ಹಾಕಿಕೊಂಡು ರಾಜಕೀಯ ಮಾಡಲು ಕೆಲವರು ಯತ್ನಿಸಿದರು, ಇನ್ನು ಕೆಲವರು ಡೋಂಗಿ ಸಮಾಜವಾದದ ಪಾಠಗಳನ್ನು ಹೇಳಿಕೊಂಡು ರಾಜಕೀಯ ಮಾಡಿದರು ಆದರೆ ಇವರ್ಯಾರನ್ನೂ ಭಾರತದ ಒಪ್ಪಿಕೊಳ್ಳಲಿಲ್ಲ ಎಂದ ಮೋದಿ, ದೇಶದ ರಾಜಕೀಯ ವಿಶ್ಲೇಷಕರು ಸಹ ತಮ್ಮ ಹಳೆಯ ಕಾಲದ ಜ್ಞಾನವನ್ನು ಬದಲಾಯಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು.

ಇದು ಮೋದಿಯ ಗೆಲುವಲ್ಲ, ಜನರ ಗೆಲುವು
ಯಾರೋ ಕೂಗುತ್ತಾರೆ ಮೋದಿ.. ಮೋದಿ... ಎಂದು ಆದರೆ ಇದು ಮೋದಿಯ ಗೆಲುವಲ್ಲ, ಇದು ದೇಶದ ಬಡವನ ಗೆಲುವು, ಇದು ದೇಶದಕ ರೈತನ ಗೆಲುವು, ದೇಶದ ಹೆಣ್ಣುಮಕ್ಕಳ ವಿಜಯ, ನಿಯತ್ತಿನಿಂದ ದುಡಿಯುವ ಮಧ್ಯಮವರ್ಗದ ವಿಜಯ, ಅಸಂಘಟಿತ ಕಾರ್ಮಿಕರ ವಿಜಯ ಎಂದು ಮೋದಿ ಹೇಳಿದರು.












Click it and Unblock the Notifications