ರಾಹುಲ್ ಸಮಾವೇಶದ ಸತ್ಯ ಬಿಚ್ಚಿಟ್ಟ ಮೋದಿ
ಜೈಪುರ, ನ. 19 : "ಕೆಲವು ಸಮಾವೇಶದಲ್ಲಿ ಜನರನ್ನು ಗೋಗರೆದು ಹಿಡಿದಿಟ್ಟುಕೊಳ್ಳಬೇಕು" ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ರಾಜಸ್ಥಾನದಲ್ಲಿ ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೋದಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದರು.
ಡಿ.1ರಂದು ವಿಧಾನಸಭೆ ಚುಣಾವಣೆ ನಡೆಯುವ ರಾಜಸ್ಥಾನದಲ್ಲಿ ಮಂಗಳವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಪ್ರಚಾರ ನಡೆಸಿದರು. ಮಾಧೋಪುರ್, ಜೈಪುರ, ಅಲ್ವಾರ್ ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ ಕಾಂಗ್ರೆಸ್ ಸಮಾವೇಶದ ಕುರಿತು ವ್ಯಂಗ್ಯವಾಡಿದರು.
ಅಲ್ವಾರ್ ನಲ್ಲಿ ಸಮಾವೇಶ ನಡೆದ ಮೈದಾನ ಚಿಕ್ಕದಾಗಿದ್ದು, ಜನರು ಹೊರಗೆ ನಿಂತಿದ್ದರು. ಇದಕ್ಕೆ ಜನರ ಕ್ಷಮೆ ಕೇಳಿದ ಮೋದಿ, "ಕೆಲವು ಸಮಾವೇಶದಲ್ಲಿ ಜನರನ್ನು ಗೋಗರೆದು ಹಿಡಿದಿಟ್ಟುಕೊಳ್ಳಬೇಕು" ಎಂದು ರಾಹುಲ್ ಗಾಂಧಿಗೆ ಕುಟುಕಿದರು. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಭಾಷಣಕ್ಕೆ ಜನರಿಲ್ಲದ ಬಗೆಯನ್ನು ಮೋದಿ ತಮ್ಮದೇ ಶೈಲಿಯಲ್ಲಿ ಬಣ್ಣಿಸಿದರು. (ಮೋದಿ ಭಾಷಣದ ಅಂಶಗಳು)

ಭ್ರಷ್ಟಾಚಾರದಲ್ಲಿ ಭಾರತ ವಿಶ್ವ ಚಾಂಪಿಯನ್
ಭ್ರಷ್ಟಾಚಾರದಲ್ಲಿ ಭಾರತ ವಿಶ್ವ ಚಾಂಪಿಯನ್ ಪಟ್ಟ ಪಡೆದಿದೆ, ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ. ಚುನಾವಣೆ ಗೆಲ್ಲಲು ಭರವಸೆ ನೀಡುವ ಕೇಂದ್ರ ಸರ್ಕಾರ ನಂತರ ಜನರನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗುತ್ತದೆ ಎಂದು ಆರೋಪಿಸಿದರು.

ಸಮಾವೇಶದಲ್ಲಿ ಜರನ್ನು ಹಿಡಿದಿಟ್ಟುಕೊಳ್ಳಬೇಕು
ಈ ಸಮಾವೇಶದಲ್ಲಿ ಜನರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲ, ಅದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ. ಕೆಲವು ಸಮಾವೇಶದಲ್ಲಿ ಸ್ಥಳಾವಕಾಶಕ್ಕಿಂತಲೂ ಜನತೆಯ ಕೊರತೆ ಎದುರಾಗುತ್ತದೆ. ಆಗ ಇರುವ ಜನರನ್ನು ಗೋಗರೆದು ಹಿಡಿದಿಟ್ಟುಕೊಳ್ಳುವ ಸ್ಥಿತಿ ಎದುರಾಗುತ್ತದೆ ಎಂದು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.

ಅಶೋಕ್ ಗೆಹ್ಲೋಟ್ ಮಾದರಿ ಬೇಕೆ?
ರಾಜಸ್ಥಾನದಲ್ಲಿರುವ ಅಶೋಕ್ ಗೆಹ್ಲೋಟ್ ಮಾದರಿ ಸರ್ಕಾರ ನಿಮಗೆ ಬೇಕೆ? ಬುಡಕಟ್ಟು ಜನರನ್ನು ನಿರ್ಲಕ್ಷಿಸಿರುವ ಸರ್ಕಾರವಿದು ಎಂದು ಆರೋಪಿಸಿರುವ ಮೋದಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಜನರಿಗೆ ಕರೆ ನೀಡಿದರು. ಹಣ ಲೂಟಿ ಮಾಡುವುದೇ ಕಾಂಗ್ರೆಸ್ ಕೆಲಸವಾಗಿದೆ. ಆದ್ದರಿಂದ ಇಂತಹ ಸರ್ಕಾರಕ್ಕೆ ಮತ್ತೊಮ್ಮೆ ಅಧಿಕಾರ ನೀಡುವುದು ಬೇಡ ಎಂದು ಮೋದಿ ಹೇಳಿದರು.

ದೇಶದ ಆಸ್ತಿಯನ್ನು ಮಾರಾಟ ಮಾಡಿದೆ
ಕೇಂದ್ರ ಯುಪಿಎ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ಹಗರಣ ನಡೆಸಿ, ದೇಶದ ಆಸ್ತಿಯನ್ನು ಮಾರಾಟ ಮಾಡಿದೆ ಎಂದು ಆರೋಪಿಸಿರುವ ಮೋದಿ, ಕಾಂಗ್ರೆಸ್ ನಾಯಕರಿಗೆ ದೇಶ ಅಭಿವೃದ್ಧಿ ಮಾಡುವುದಕ್ಕಾಗಿ ಅಧಿಕಾರ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಜನರನ್ನೇ ಮರೆಯುತ್ತಾರೆ
ರಾಜಸ್ಥಾನದ ಸದ್ಯದ ಸರ್ಕಾರ ಚುನಾವಣೆಯನ್ನು ಗೆಲ್ಲುವುದಾಕ್ಕಾಗಿರುವ ಯಂತ್ರ. ಚುನಾವಣೆ ಮುಗಿಯುವವರೆಗೂ ಭರವಸೆ ನೀಡುತ್ತಿರುವ ಕಾಂಗ್ರೆಸ್ ಚುನಾವಣೆ ನಂತರ ಜನರನ್ನೇ ಮರೆತುಬಿಡುತ್ತದೆ. ನಿಮಗೆ ಗುಜರಾತ್ ಮಾದರಿ ಅಭಿವೃದ್ಧಿ ಬೇಕು ಎನ್ನುವುದಾದದರೆ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.

ನಮಗೆ ಪ್ರಮಾಣ ಪತ್ರ ಬೇಡ
ಗುಜರಾತ್ ಸರ್ಕಾರಕ್ಕೆ ರಾಜಾಸ್ಥಾನ ಸರ್ಕಾರದಿಂದ ಪ್ರಮಾಣಪತ್ರ ಅಗತ್ಯವಿಲ್ಲ, ಗೆಹ್ಲೋಟ್ ಜೀ ಗುಜರಾತ್ ವಿಷಯ ಗಮನಿಸುವ ಮುನ್ನ ನಿಮ್ಮ ನಾಯಕರ ಮತ್ತು ರಾಜ್ಯದ ವಿಷಯಗಳ ಬಗ್ಗೆ ಗಮನ ಹರಿಸಿ ಎಂದು ಮೋದಿ ಹೇಳಿದರು.

ಹೈಕೋರ್ಟ್ ನಿಮಗೆ ಪಾಠ ಮಾಡಿದೆ
ದೇಶದಲ್ಲಿ ರಾಜಾಸ್ಥಾನದಂತಹ ದುರ್ಬಲ ಸರ್ಕಾರವನ್ನು ನಾನು ಎಂದೂ ನೋಡಿಲ್ಲ ಎಂದು ರಾಜ್ಯ ಹೈಕೋರ್ಟ್ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನು ನೋಡಿಯೂ ನೀವು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತೀರಾ? ಎಂದು ಮೋದಿ ಪ್ರಶ್ನಿಸಿದರು.

ನಿಮ್ಮ ಮತ ದೇಶಕ್ಕೆ ಮಾದರಿ
ಡಿ.1ರಂದು ನೀವು ನೀಡುವ ಮತ ನಿಮ್ಮ ಶಾಸಕರನ್ನು ಮಾತ್ರ ಆಯ್ಕೆ ಮಾಡುವುದಿಲ್ಲ. ಅದು ದೇಶಕ್ಕೆ ಮಾದರಿ ಆಗಬೇಕು. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತೀರಾ? ಎಂದು ನೀವು ನಿರ್ಧರಿಸಿ ಎಂದು ಮೋದಿ ಹೇಳಿದ್ದಾರೆ.












Click it and Unblock the Notifications