Nana Patekar Death: ಕನ್ನಡದ "ಯಕ್ಷ' ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟ ನಾನಾ ಪಾಟೇಕರ್ ಇನ್ನಿಲ್ಲ, ಸಾವಿಗೆ ಕಾರಣವೇನು ?
Nana Patekar Death: ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟ ನಾನಾ ಪಾಟೇಕರ್ (75) ಅವರು ಅಕ್ಟೋಬರ್ 8ರ ಗುರುವಾರ ಮುಂಜಾನೆ ತೀವ್ರ ಹೃದಯ ಸ್ತಂಭನದಿಂದ (Cardiact Arrest) ಮೃತಪಟ್ಟಿದ್ದಾರೆ. ನಾನಾ ಪಾಟೇಕರ್ ಅವರು ಕನ್ನಡದ "ಯಕ್ಷ' ಸಿನಿಮಾ ಸೇರಿದಂತೆ ಹಲವು ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಾನಾ ಪಾಟೇಕರ್ ಅವರು ಬಹುಭಾಷಾ ನಟ ಮಾತ್ರವಲ್ಲ, ರೈತರ ಸಮಸ್ಯೆಗೆ ಸ್ಪಂದಿಸುವ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದರು. ಬಡವರಿಗೆ ಅವರ ಹೃದಯಮಿಡಿದಿದ್ದು, ಇದೆ. ತಮ್ಮ ಜೀವಮಾನದಲ್ಲಿ ಅವರು ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಿರುವುದು ಸಹ ಇದೆ.

ಹಿರಿಯ ನಟ ನಾನಾ ಪಾಟೇಕರ್ ಅವರು ಗುರುವಾರ ಬೆಳಿಗ್ಗೆ 5:20 ಕ್ಕೆ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 45 ನಿಮಿಷಗಳ ನಿರಂತರ ಸಿಪಿಆರ್ ಹೊರತಾಗಿಯೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯಕೀಯ-ಕಾನೂನು ಪ್ರಕರಣ (MLC) ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಲ್ಕರ್ ಅವರು ತಿಳಿಸಿದ್ದಾರೆ.
ನಾನಾ ಪಾಟೇಕರ್ ಅವರ ನಿಧನದ ಸುದ್ದಿಯನ್ನು ಅವರ ಪುತ್ರ ಮಲ್ಹರ್ ಪಾಟೇಕರ್ ದೃಢಪಡಿಸಿದ್ದಾರೆ. ಅಕ್ಟೋಬರ್ 8ರ ಮುಂಜಾನೆ ಮೃತಪಟ್ಟಿದ್ದಾರೆ. ಗೋವಾದ ಡೋನಾ ಪೌಲಾದಲ್ಲಿರುವ ಅವರ ನಿವಾಸದಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಆದರೆ, ಹೃದಯಾಘಾತದಿಂದಾಗಿ ನಾನಾ ಪಾಟೇಕರ್ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಬೆಳಿಗ್ಗೆ 5.20ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ಸುಮಾರು 45 ನಿಮಿಷಗಳ ಕಾಲ ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನಪಟ್ಟರು ಆದರೆ ಅವರು ವಿಫಲರಾದರು ಎಂದು ತಿಳಿಸಿದ್ದಾರೆ.
ನಾನಾ ಪಾಟೇಕರ್ ಅವರು ನಾಲ್ಕು ದಶಕಗಳಿಗೂ ಹೆಚ್ಚು ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾನಾ ಪಾಟೇಕರ್ ಅವರು ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ವಿವಿಧ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬರವಣಿಗೆ ಮತ್ತು ನಿರ್ದೇಶನವನ್ನೂ ಮಾಡಿದ್ದರು. ಸಿನಿಮಾ ಮತ್ತು ಕಲಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಾಗಿ 2013ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
1978ರಲ್ಲಿ ಮುಜಾಫರ್ ಅಲಿ ಅವರು ನಿರ್ದೇಶಿಸಿದ ಗಮನ್ ಚಿತ್ರದೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. 1980ರ ದಶಕದಲ್ಲಿ, ನಾನಾ ಆಜ್ ಕಿ ಆವಾಜ್, ಅಂಕುಶ್, ಪ್ರತಿಘಾಟ್, ಅಂಧ ಯುದ್ಧ್, ಮೊಹ್ರೆ ಮತ್ತು ಸಲಾಮ್ ಬಾಂಬೆ! ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ಮೀರಾ ನಾಯರ್ ನಿರ್ದೇಶನದ ಸಲಾಮ್ ಬಾಂಬೆ! (1988) ಚಿತ್ರದಲ್ಲಿನ ಅವರ ನಟನೆಯು ಅವರಿಗೆ ಹೆಚ್ಚಿನ ಮನ್ನಣೆಯನ್ನು ತಂದುಕೊಟ್ಟಿತು.
ಆದಾಗ್ಯೂ, ವಿಧು ವಿನೋದ್ ಚೋಪ್ರಾ ಅವರ ಪರಿಂದಾ (1989) ಚಿತ್ರದಲ್ಲಿ ಗ್ಯಾಂಗ್ಸ್ಟರ್ ಅಣ್ಣಾ ಪಾತ್ರದಲ್ಲಿ ಅವರ ಅಭಿನಯವು ಅವರ ವೃತ್ತಿಜೀವನದ ಪ್ರಮುಖ ತಿರುವು ಪಡೆದುಕೊಂಡಿತು. ಚಂಚಲ ಅಪರಾಧಿ ಲಾರ್ಡ್ ಪಾತ್ರದ ಅವರ ಚಿತ್ರಣವು ಅವರಿಗೆ ಅತ್ಯುತ್ತಮ ಪೋಷಕ ನಟನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಅತ್ಯುತ್ತಮ ಪೋಷಕ ನಟನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಹಾರ್: ದಿ ಫೈನಲ್ ಅಟ್ಯಾಕ್ ಎನ್ನುವ ಸಿನಿಮಾದ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿಯೂ ಮಿಂಚಿದರು. ಈ ಸಿನಿಮಾದಲ್ಲಿ ಅವರು ಸೇನಾ ಅಧಿಕಾರಿಯಾಗಿಯೂ ನಟಿಸಿದ್ದರು. ನಾನಾ ರಾಜು ಬನ್ ಗಯಾ ಜಂಟಲ್ಮನ್, ಅಂಗಾರ್ ಮತ್ತು ತಿರಂಗಾ ಮುಂತಾದ ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದರು.
ಅಂಗಾರ್ (1992) ನಲ್ಲಿ, ಮಜೀದ್ ಖಾನ್ ಎನ್ನುವ ಖಳನಾಯಕನ ಪಾತ್ರವು ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ದಶಕದಲ್ಲಿ ಅವರಿಗೆ ಅತ್ಯಂತ ದೊಡ್ಡ ಮನ್ನಣೆ ದೊರೆತಿದ್ದು ಕ್ರಾಂತಿವೀರ್ (1994) ಚಿತ್ರದಲ್ಲಿ, ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಶಕ್ತಿಯಾಗಿ ರೂಪಾಂತರಗೊಳ್ಳುವ ತೊಂದರೆಗೀಡಾದ ವ್ಯಕ್ತಿಯ ಪಾತ್ರವಾದ ಪ್ರತಾಪ್ ನಾರಾಯಣ್ ತಿಲಕ್ ಎನ್ನುವ ಪಾತ್ರ. ಈ ಅಭಿನಯವು ಅವರಿಗೆ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.
ನಾನಾ ಪಾಟೇಕರ್ ಅವರು ಕೊನೆಯದಾಗಿ ಸುಬೇದಾರ್ ಚಿತ್ರದಲ್ಲಿ ಕಾಣಿಸಿಕೊಂಡರು. 2026 ರಲ್ಲಿ ಪ್ರೈಮ್ ವಿಡಿಯೋನ್ನಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ರಾಧಿಕಾ ಮದನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಗಣ್ಯರ ಸಂತಾಪ
ನಾನಾ ಪಾಟೇಕರ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಭಾರತೀಯ ಚಿತ್ರರಂಗದ ಅದ್ಭುತ ನಟ, ರಾಷ್ಟ್ರಪ್ರೇಮಿ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ತಮ್ಮ ಸಹಜ ಅಭಿನಯ ಹಾಗೂ ಕಂಚಿನ ಕಂಠದ ಸಂಭಾಷಣೆಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಮಹಾನ್ ಕಲಾವಿದ ಅವರಾಗಿದ್ದರು. ಕೇವಲ ಬೆಳ್ಳಿತೆರೆಯ ನಟರಾಗಿ ಮಾತ್ರವಲ್ಲದೆ, 'ನಾಮ್ ಫೌಂಡೇಶನ್' ಮೂಲಕ ರೈತರು ಹಾಗೂ ಗ್ರಾಮೀಣ ಜನರಿಗಾಗಿ ಮಿಡಿದಿದ್ದ ಸೂಕ್ಷ್ಮ ಸಂವೇದನೆಯ ವ್ಯಕ್ತಿತ್ವ ನಾನಾ ಪಾಟೇಕರ್ ಅವರದ್ದು.
ಪರಿಂದಾ, ಕ್ರಾಂತಿವೀರ್, ನಟಸಾಮ್ರಾಟ್, ಪ್ರಹಾರ್, ಅಗ್ನಿಸಾಕ್ಷಿ ಮುಂತಾದ ಅಮೋಘ ಚಿತ್ರಗಳಲ್ಲಿ ಅವರು ನೀಡಿದ್ದ ಅಭಿನಯ ಸರ್ವಶ್ರೇಷ್ಠ. ಅಂತಹ ನಟ ನಮ್ಮನ್ನಗಲಿರುವುದು ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಬಹುಭಾಷಾ ನಟ, ಪದ್ಮಶ್ರೀ ಪುರಸ್ಕೃತ, ಅದ್ಭುತ ಕಲಾವಿದ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ತಮ್ಮ ವಿಭಿನ್ನ ಹಾಗೂ ಮನೋಜ್ಞ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಅವರು, ಕನ್ನಡದ 'ಯಕ್ಷ' ಚಿತ್ರದಲ್ಲಿಯೂ ಅಭಿನಯಿಸಿದ್ದರು. ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಬಂಧು-ಬಳಗ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications
