ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಗೆ ಮುಂಬೈನಲ್ಲಿ ಟ್ರಾಫಿಕ್ ನಿರ್ಬಂಧ: ಸಾರ್ವಜನಿಕರ ಆಕ್ರೋಶ
ಮುಂಬೈ, ಜುಲೈ. 06: ಇದೆ ತಿಂಗಳ ಜುಲೈ 12 ರಿಂದ 15 ರವರೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಹೈ-ಪ್ರೊಫೈಲ್ ವಿವಾಹವು ನಡೆಯಲಿರುವ ಹಿನ್ನೆಲೆಯಲ್ಲಿ ಮುಂಬೈ ಟ್ರಾಫಿಕ್ ಪೊಲೀಸರು ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ. ನಗರದಲ್ಲಿ ಸುಗಮ ಸಂಚಾರ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಬಂಧಗಳನ್ನು ವಿಧಿಸಲಾಗಿದೆ.
ದೇಶದ ಪ್ರಮುಖ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಹಿನ್ನೆಲೆ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಹೋಗುವ ಹಲವಾರು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರು ಜುಲೈ 12 ರಿಂದ 15 ರ ನಡುವೆ ಕೆಲವು ರಸ್ತೆಗಳನ್ನು ಮುಚ್ಚಿದ್ದು, ಸಂಚಾರ ಸಲಹೆ ಘೋಷಿಸಿದ್ದಾರೆ.

ಸಂಚಾರ ನಿರ್ಬಂಧ ಘೋಷಿಸಿದ ಮುಂಬೈ ಪೊಲೀಸ್
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಹೋಗುವ ಹಲವಾರು ರಸ್ತೆಗಳಲ್ಲಿ ಜುಲೈ 12 ರಿಂದ 15 ರ ಆ ಮೂರು ದಿನಗಳಲ್ಲಿ ಮಧ್ಯಾಹ್ನ 1 ರಿಂದ ಮಧ್ಯರಾತ್ರಿಯವರೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂತಹ ಖಾಸಗಿ ಕಾರ್ಯಕ್ರಮಕ್ಕೆ ವಿಧಿಸಿರುವ ಟ್ರಾಫಿಕ್ ನಿರ್ಬಂಧಗಳು ಆನ್‌ಲೈನ್‌ನಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
ಇದು ಖಾಸಗಿ ವಿವಾಹ ಸಾರ್ವಜನಿಕ ಕಾರ್ಯಕ್ರಮವಲ್ಲ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜುಲೈ 12 ಮತ್ತು 15 ರಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ಮದುವೆಗೆ ಮುಂಬೈ ಸಾಕ್ಷಿಯಾಗಲಿದೆ.

ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರ ಕಿರಿಯ ಮಗ. ಅವರು ಜುಲೈ 12 ರಂದು ಮುಂಬೈನಲ್ಲಿ ಎನ್ಕೋರ್ ಹೆಲ್ತ್‌ಕೇರ್ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ.
ಅಂಬಾನಿ ಕುಟುಂಬವು ಈಗಾಗಲೇ ಗುಜರಾತ್‌ನ ಜಾಮ್‌ನಗರದಲ್ಲಿ ಮತ್ತು ಮೆಡಿಟರೇನಿಯನ್‌ನಾದ್ಯಂತ ಐಷಾರಾಮಿ ಕ್ರೂಸ್‌ನಲ್ಲಿ ಆಯೋಜಿಸಿರುವ ಎರಡು ವಿವಾಹಪೂರ್ವ ಕಾರ್ಯಕ್ರಮ ಅದ್ಧೂರಿಯಾಗಿದ್ದವು. ಹೀಗಾಗಿ ವಿವಾಹವು ಕೂಡ ಅದ್ಧೂರಿ ಕಾರ್ಯಕ್ರಮವಾಗಿದೆ ಎಂದು ನಿರೀಕ್ಷಿಸಲಾಗಿದೆ. ಅಂಬಾನಿ ಕುಟುಂಬವು ನಿನ್ನೆ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಸಮಾರಂಭವನ್ನು ಆಯೋಜಿಸಿತ್ತು, ಇದರಿಂದಲೂ ನಗರದ ಕೆಲವು ಭಾಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು.
A wedding is by definition not a public event!
— Aditya Paul (@adityampaul) July 6, 2024
Why are common Mumbaikars being harassed in one of our cities key corporate and business districts at the behest of a rich persons wedding? https://t.co/EsmlmJ2ltA
"ಸಾರ್ವಜನಿಕ ಕಾರ್ಯಕ್ರಮವಲ್ಲ"
ಮುಂಬೈ ಟ್ರಾಫಿಕ್ ಪೊಲೀಸರು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ (ಬಿಕೆಸಿ) ಹಲವಾರು ಭಾಗಗಳಲ್ಲಿ "ಈವೆಂಟ್ ವಾಹನಗಳನ್ನು" ಹೊರತುಪಡಿಸಿ ಯಾವುದೇ ವಾಹನ ದಟ್ಟಣೆಗೆ ಪ್ರವೇಶವಿಲ್ಲ ಎಂದು ಘೋಷಿಸಿದ್ದಾರೆ. ಆ ರಸ್ತೆಗಳನ್ನು ಬಳಸುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಇದರ ಕಾಮೆಂಟ್‌ನಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ಪೊಲೀಸರ ಈ ನಿರ್ಧಾರದಿಂದ ಖಾಸಗಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
"ಕೈಗಾರಿಕೋದ್ಯಮಿಯ ವೈಯಕ್ತಿಕ ಕಾರ್ಯಕ್ರಮವು ಯಾವಾಗ ಸಾರ್ವಜನಿಕ ಕಾರ್ಯಕ್ರಮವಾಯಿತು..? ಮುಂಬೈನ ಪ್ರತಿಯೊಬ್ಬ ನಾಗರಿಕರನ್ನು ಇದಕ್ಕೆ ಆಹ್ವಾನಿಸಲಾಗಿದೆಯೇ ಅಥವಾ ಆಯ್ದ ಕೆಲವರನ್ನು ಆಹ್ವಾನಿಸಲಾಗಿದೆಯೇ..? ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟು ಮಾಡುವ ಬದಲು ಇದನ್ನು ರಾತ್ರಿಯ ವೇಳೆ ನಡೆಸಲು ಸಂಘಟಕರಿಗೆ ಹೇಳಬೇಕಾಗಿತ್ತು" ಎಂದು ಹೇಳಿದ್ದಾರೆ.
"ವಿವಾಹವು ಸಾರ್ವಜನಿಕ ಕಾರ್ಯಕ್ರಮವಲ್ಲ! ನಮ್ಮ ನಗರದ ಪ್ರಮುಖ ಕಾರ್ಪೊರೇಟ್ ಮತ್ತು ವ್ಯಾಪಾರ ಜಿಲ್ಲೆಗಳಲ್ಲಿ ಶ್ರೀಮಂತ ವ್ಯಕ್ತಿಯ ಮದುವೆಯ ಆದೇಶದ ಮೇರೆಗೆ ಸಾಮಾನ್ಯ ಮುಂಬೈಕರ್‌ಗಳಿಗೆ ಏಕೆ ಕಿರುಕುಳ ನೀಡಲಾಗುತ್ತಿದೆ?" ಎಂದು ಆಮ್ ಆದ್ಮಿ ಪಕ್ಷದ ಮುಂಬೈ ಘಟಕದ ಜಂಟಿ ಕಾರ್ಯದರ್ಶಿ ಆದಿತ್ಯ ಪೌಲ್ ಪ್ರಶ್ನಿಸಿದ್ದಾರೆ.












Click it and Unblock the Notifications