ಮುಂಬೈ ಮಹಾರಾಷ್ಟ್ರದ್ದಲ್ಲ - ಅಣ್ಣಾಮಲೈ ಅಲ್ಲ ರಸಮಲೈ, ಬೆಂಗಳೂರಿನ ಬಗ್ಗೆಯೂ ಚರ್ಚೆ
ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರು ನೀಡಿರುವ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಮುಂಬೈನ ರಾಜಕಾರಣಿಗಳು ಅಣ್ಣಾಮಲೈ ಅವರನ್ನು ರಸಮಲೈ ಎಂದೂ ಕರೆದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಣ್ಣಾಮಲೈ ಅವರ ವಿರುದ್ಧ ಟ್ರೋಲ್ ಶುರುವಾಗಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಬಗ್ಗೆಯೂ ಚರ್ಚೆ ನಡೆದಿದೆ ಇದೆಲ್ಲಾ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮಹಾರಾಷ್ಟ್ರದ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಾಗಿ (ಬಿಎಂಸಿ) / ಸ್ಥಳೀಯ ಪಾಲಿಕೆಗಳ ಚುನಾವಣೆಯು ಗರಿಗೆದರಿದ್ದು, ವಿವಿಧ ರಾಜಕೀಯ ಪಕ್ಷಗಳ ನಡುವೆ ಮೈತ್ರಿ ಆಗಿದೆ. ಬಿರುಸಿನ ರಾಜಕೀಯ ಪ್ರಚಾರದ ಸಂದರ್ಭದಲ್ಲಿ ಕೆ. ಅಣ್ಣಾಮಲೈ ಅವರು ನೀಡಿರುವ ಹೇಳಿಕೆಯು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಈ ವಿವಾದ ತಣ್ಣಗಾಗುವ ಮೊದಲೇ ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರೂ ಅಣ್ಣಾಮಲೈ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಕೆ. ಅಣ್ಣಾಮಲೈ ಹೇಳಿದ್ದೇನು ?
ಅಣ್ಣಾಮಲೈ ಅವರು ಮುಂಬೈಯಲ್ಲಿ ಬಿಜೆಪಿ ಕೌನ್ಸಿಲರ್‌ಗಳ ಪರವಾಗಿ ಪ್ರಚಾರ ನಡೆಸುವ ಸಂದರ್ಭದಲ್ಲಿ ಮುಂಬೈ ಕೇವಲ ಮಹಾರಾಷ್ಟ್ರದ ನಗರವಲ್ಲ, ಅದೊಂದು ಅಂತಾರಾಷ್ಟ್ರೀಯ ನಗರ ಎಂದಿದ್ದರು. ವಿಶೇಷವಾಗಿ ತಮಿಳು ಭಾಷಿಕರು ಹೆಚ್ಚಿರುವ ಮುಂಬೈನ ವಾರ್ಡ್‌ಗಳಲ್ಲಿ ಪ್ರಚಾರ ಮಾಡುವಾಗ ಈ ಮಾತುಗಳನ್ನು ಹೇಳಿದ್ದರು. ಇದು ಮಹಾರಾಷ್ಟ್ರದಲ್ಲಿ ವಿವಾದ ಸ್ವರೂಪವನ್ನು ಪಡೆದುಕೊಂಡಿತ್ತು. ಮಹಾರಾಷ್ಟ್ರದಿಂದ ಮುಂಬೈ ಬೇರ್ಪಪಡಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಅಲ್ಲಿನ ವಿರೋಧ ಪಕ್ಷಗಳು ಆರೋಪ ಮಾಡಿವೆ. ಕ್ಷಮೆಯಾಚನೆಗೆ ಪಟ್ಟು ಹಿಡಿದಿವೆ.
ಅಣ್ಣಾಮಲೈ ಅಲ್ಲ ರಸಮಲೈ!
ಇನ್ನು ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರನ್ನು ರಸಮಲೈ ಎಂದು ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಕರೆದಿದ್ದಾರೆ. ಅಣ್ಣಾಮಲೈ ಅವರನ್ನು ಅಣಕಿಸುತ್ತ ಠಾಕ್ರೆ ಇತ್ತೀಚಿಗೆ ತಮಿಳುನಾಡಿನಿಂದ ಯಾರೋ ರಸಮಲೈ ಮುಂಬೈಗೆ ಬಂದಿದ್ದರು. ಮುಂಬೈ ಮಹಾರಾಷ್ಟ್ರದ ನಗರವಲ್ಲ, ಮುಂಬೈಗೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇವರು ಯಾರು, ಅವರಿಗೂ ಮುಂಬೈಗೂ ಏನು ಸಂಬಂಧವಿದೆ ಎಂದಿದ್ದಾರೆ. ಅಲ್ಲದೇ ಅದಕ್ಕಾಗಿಯೇ ಬಾಳಾಸಾಹೇಬರು ಹಟಾವೊ ಲುಂಗಿ ಬಜಾವೊ ಪುಂಗಿ ಎಂದು ಹೇಳಿದ್ದರು ಎಂದು ವ್ಯಂಗ್ಯವಾಡಿದ್ದರು.
ಬೆಂಗಳೂರು ಕರ್ನಾಟಕದಲ್ಲ ಎನ್ನುವ ದಿನ ದೂರವಿಲ್ಲ!
ಇಂದು: ಬಿಜೆಪಿ ನಾಯಕ ಅಣ್ಣಾಮಲೈ ಬಾಂಬೆ ಮಹಾರಾಷ್ಟ್ರದ ನಗರವಲ್ಲ, ಅದು ಅಂತರರಾಷ್ಟ್ರೀಯ ನಗರ ಎಂದಿದ್ದಾರೆ. ಎದ್ದೇಳಿ ತೆಲಂಗಾಣ ನಾಳೆ: ಅವರು ತೆಲಂಗಾಣಕ್ಕೆ ಬಂದು "ಹೈದರಾಬಾದ್ ತೆಲಂಗಾಣ ನಗರವಲ್ಲ. ಅದು ಆಂಧ್ರ ನಗರ" ಎಂದು ಹೇಳಲಿದ್ದಾರೆ. ಅದು ಹೀಗೆ ಆರಂಭವಾಗುತ್ತದೆ. ಮೊದಲು ಭಾಷೆಯನ್ನು ಅಳಿಸಿಹಾಕು, ನಂತರ ಸಂಸ್ಕೃತಿಯನ್ನು ಅಳಿಸಿಹಾಕು & ನಂತರ ಗುರುತನ್ನು ಅಳಿಸಿಹಾಕು. ಸ್ಥಳೀಯ ಗುರುತನ್ನು ದುರ್ಬಲಗೊಳಿಸಲು ರಾಷ್ಟ್ರೀಯತೆ ಎಂಬ ಟ್ಯಾಗ್ ಅನ್ನು ಬಳಸುವುದು ಅಪಾಯಕಾರಿ. ನಗರಗಳು ಜಾಗತಿಕವಾಗಿ ಬೆಳೆಯುತ್ತವೆ ಎಂಬ ಕಾರಣಕ್ಕಾಗಿ ಅವು ತಮ್ಮ ಬೇರುಗಳನ್ನು ಕಳೆದುಕೊಳ್ಳುವುದಿಲ್ಲ.
👉 ಮುಂಬೈ ಮಹಾರಾಷ್ಟ್ರದ್ದು
👉 ಹೈದರಾಬಾದ್ ತೆಲಂಗಾಣದ ಹೆಮ್ಮೆ...
ಜಾಗತಿಕ ನಗರ ಎಂದರೆ ಬೇರುರಹಿತ ನಗರ ಎಂದಲ್ಲ. ಅಭಿವೃದ್ಧಿ ಗುರುತಿಗೆ ಬಲವನ್ನು ಸೇರಿಸಬೇಕು, ಅದನ್ನು ಅಳಿಸಿಹಾಕಬಾರದು ಎಂದು@AntaraonX ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಇದೇ ರೀತಿ ಮುಂದೊಂದು ದಿನ ಬೆಂಗಳೂರು ಕರ್ನಾಟಕದಲ್ಲ, ಚೆನ್ನೈ ತಮಿಳುನಾಡಿನದ್ದಲ್ಲ ಅಂತಲೂ ಇವರು ಹೇಳಬಹುದು ಎಂದು ಇನ್ನೂ ಕೆಲವು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.












Click it and Unblock the Notifications