ಬೆಟ್ಟಿಂಗ್ ಲೋಕದಲ್ಲಿ ಮೋದಿ ಮೇಲುಗೈ, ಕಾಂಗೈ ಹಿಂದೆ
ನವದೆಹಲಿ, ಸೆಪ್ಟೆಂಬರ್ 21: ಲೋಕಸಭಾ ಚುನಾವಣೆ ಇನ್ನೂ ತುಸು ದೂರವಿದೆ. ಆದರೆ ಬೆಟ್ಟಿಂಗ್ ಲೋಕ ಅದಾಗಲೇ ಎದ್ದುಕುಳಿತಿದೆ. ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಸಿಎಂ ನರೇಂದ್ರ ಮೋದಿ ಆಯ್ಕೆಯಾಗುತ್ತಿದ್ದಂತೆ ಬೆಟ್ಟಿಂಗ್ ವೀರರು ಭರ್ಜರಿ ಬಾಜಿಗೆ ಇಳಿದಿದ್ದಾರೆ.
ಬೆಟ್ಟಿಂಗ್ ಲೋಕದ ನಾಡಿಮಿಡಿತ ನೋಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ದೂರವೇ. ಮುಂಬೈನ ಸತ್ತಾ ಬಾಜಾರ್ ಲೋಕದಲ್ಲಂತೂ ನರೇಂದ್ರ ಮೋದಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಅಷ್ಟೇ ಅಲ್ಲ ಮೋದಿಯೇ ಮುಂದಿನ ಪ್ರಧಾನಿ ಎಂದು ಘೋಷಿಸಿದೆ.
ಆರ್ಥಿಕ-ರಾಜಕೀಯ ಪರಿಣತನಿಗೆ ಸರಿಸಮನಾಗಿ ರಾಜಕೀಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸುವ ಬೆಟ್ಟಿಂಗ್ ಜಗತ್ತು ಹಾಲಿ ರಾಜಕೀಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆಯಂತೆ. ಅನೇಕ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬೆಟ್ಟಿಂಗ್ ಲೋಕದಲ್ಲಿ ಒಂದು ಸುತ್ತು...

ಕೂಸು ಹುಟ್ಟೋಕೆ ಮುಂಚೆ ಕುಲಾವಿ
ಸಾಮಾನ್ಯವಾಗಿ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದ ನಂತರವೇ ಬೆಟ್ಟಿಂಗ್ ಲೋಕ ರಂಗೇರುತ್ತಿತ್ತು. ಆದರೆ ಈ ಬಾರಿ ಅತ್ಯುತ್ಸಾಹದಲ್ಲಿರುವ ಬೆಟ್ಟಿಂಗ್ ವೀರರು ಅದಾಗಲೇ ಬಾಜಿ ಕಟ್ಟುತ್ತಿದ್ದಾರೆ. ಬೆಟ್ಟಿಂಗ್ ಲೋಕ ಅದಾಗಲೇ ಸ್ಪಷ್ಟವಾಗಿ ಇದು ರಾಹುಲ್ ಗಾಂಧಿಯ ಕಾಂಗ್ರೆಸ್ ಮತ್ತು ನರೇಂದ್ರ ಮೋದಿಯ ಬಿಜೆಪಿ ನಡುವೆ ಯುದ್ಧದ ಗೆರೆ ಎಳೆದು ಕೂತಿದೆ.

ಬೆಟ್ಟಿಂಗ್: ಚುನಾವಣೆ ಘೋಷಣೆ ಬಳಿಕ ಇನ್ನೂ ತೀವ್ರ
ನಿನ್ನೆ ಶುಕ್ರವಾರ ಮೋದಿ ಮೇಲೆ 1.30 ರೂಪಾಯಿಗೆ ಬಾಜಿ ಕಟ್ಟಲಾಗಿದೆ. ಅಂದರೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಬೆಟ್ ಕಟ್ಟಿದರೆ 1 ರೂಪಾಯಿಗೆ 1.30 ರೂ ಬರುತ್ತದೆ. ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರಕುತ್ತಿದ್ದಂತೆ ಇದು ಇನ್ನೂ ವೃದ್ಧಿಸುವ ಊಹೆಯಿದೆ.

ಬೆಟ್ಟಿಂಗ್: ಸಿಂಗ್, ಸೋನಿಯಾ ಗಾಂಧಿಗೆ ಎಷ್ಟು?
ಬೆಟ್ಟಿಂಗ್: ಇದೇ ಬಾಜಿ ರಾಹುಲ್ ಗಾಂಧಿಗೆ ವಿರುದ್ಧವಾಗಿ 3 ರೂ. ನಷ್ಟಿದೆ. ಇನ್ನು ಮನಮೋಹನ್ ಸಿಂಗ್ ವಿರುದ್ಧ 12 ರೂ. ಇದೆ. ಸೋನಿಯಾ ಗಾಂಧಿ ವಿರುದ್ಧ 13 ರೂ. ನಷ್ಟಿದೆ.

ಬೆಟ್ಟಿಂಗ್: ಎಲ್ಲೆಲ್ಲಿ ಆಟ ಕಟ್ಟಲಾಗುತ್ತಿದೆ?
ಬೆಟ್ಟಿಂಗ್: ಮುಂಬೈ, ಅಹಮದಾಬಾದ್, ಜೈಪುರ, ಇಂದೋರ್, ಕರಾಚಿ ಮತ್ತು ದುಬೈನಲ್ಲಿ ಈ ಚುನಾವಣಾ ಬೆಟ್ಟಿಂಗ್ ಹೆಚ್ಚು ತೀವ್ರವಾಗಿದೆ. ಈಗಾಗಲೇ ಸುಮಾರು 90 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಲಾಗಿದೆ ಎನ್ನಲಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣಕ್ಕೆ ಏರಲಿದೆ.

ಬಾಚಿದಾರರಿಗೆ ಕಾಡಿದ ಅಡ್ವಾಣಿ
ಬೆಟ್ಟಿಂಗ್ ಕಟ್ಟುವವರಿಗೆ ಇದುವರೆಗೂ ಅಡ್ವಾಣಿ ಭೂತ ಕಾಡುತ್ತಿತ್ತಂತೆ. ಅಡ್ವಾಣಿ ಅವರು 4 ರಾಜ್ಯಗಳ ವಿಧಾಸನಭೆ ಘೋಷಣೆಯಾಗುವವರೆಗೂ ಮೋದಿ ಪ್ರಧಾನಿ ಅಭ್ಯರ್ಥಿತನವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಆತಂಕ ಮನೆ ಮಾಡಿತ್ತಂತೆ. ಆದರೆ ಈಗ ಎಲ್ಲವೂ ತಿಳಿಯಾಗಿದ್ದು, ಇನ್ನೂ ಸಾಕಷ್ಟು ಕಾಲಾವಕಾಶವಿರುವಾಗಲೇ ಮೋದಿ ಪ್ರಧಾನಿ ಅಭ್ಯರ್ಥಿ ಆಯ್ಕೆಯಾಗಿರುವುದು ಬೆಟ್ಟಿಂಗ್ ಕಟ್ಟುವರರನ್ನು ಉತ್ತೇಜನಗೊಳಿಸಿದೆಯಂತೆ.

ಬೆಟ್ಟಿಂಗ್: ಬಿಜೆಪಿಗೆ 272ರ ಮಾಂತ್ರಿಕ ಸಂಖ್ಯೆ
ಬೆಟ್ಟಿಂಗ್: ಬಿಜೆಪಿ 272ರ ಮಾಂತ್ರಿಕ ಸಂಖ್ಯೆಯನ್ನು ದಾಟುವ ಸಾಧ್ಯತೆಗಳು ಹೆಚ್ಚಾಗಿದೆಯಂತೆ. ಇದರ ವಿರುದ್ಧ 1.50 ರೂಪಾಯಿ ಬಾಜಿ ಕಟ್ಟಲಾಗಿದೆಯಂತೆ. ಅದೇ ಕಾಂಗ್ರೆಸ್ಸಿಗೆ 5 ರೂ. ಓಡುತ್ತಿದೆಯಂತೆ.

ಬೆಟ್ಟಿಂಗ್ ಲೋಕದವರು ಬುದ್ದುಗಳಲ್ಲವಂತೆ:
ಬೆಟ್ಟಿಂಗ್ ಲೋಕದ ಬುಕ್ಕಿಗಳು ಕಣ್ಮುಚ್ಚಿ ಬೆಟ್ಟಿಂಗ್ ಕಟ್ಟುವುದಿಲ್ಲವಂತೆ. ಯಾವುದೇ ಆರ್ಥಿಕ-ರಾಜಕೀಯ ಪರಿಣತನಿಗೆ ಸರಿಸಮನಾಗಿ ರಾಜಕೀಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸುತ್ತಾನಂತೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಮೇಲೂ ಬುಕ್ಕಿಗಳು ಕಣ್ಣಿಟ್ಟಿದ್ದಾರೆ.

ಶೀಲಾ ದೀಕ್ಷಿತ್ ಪರ ಬಾಜಿ ಜೋರು
ದೆಹಲಿಯಲ್ಲಿ ಬಿಜೆಪಿ ಛಿದ್ರ ಮನೆಯಾಗಿದೆ. ವಿಜಯ್ ಗೋಯಲ್ ನೇತೃತ್ವದ ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಉತ್ಸಾಹವೇ ಇಲ್ವಂತೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಬಾಜಿದಾರರು ಕಾಂಗ್ರೆಸ್ಸಿನ ಶೀಲಾ ದೀಕ್ಷಿತ್ ಪರ ಬಾಜಿ ಜೋರಾಗಿ ಕಟ್ಟಿದ್ದಾರಂತೆ.

ಮೂರು ರಾಜ್ಯದಲ್ಲಿ ಬಿಜೆಪಿ ಜಯಭೇರಿ
ಉಳಿದಂತೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತದೆ, Any bets? ಎನ್ನುತ್ತಿದೆ ಬೆಟ್ಟಿಂಗ್ ಲೋಕ.












Click it and Unblock the Notifications