ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸೂರ್ಯನಿಲ್ಲದ ಮುಂಜಾವು...': ಅಪ್ಪನಿಗೆ ಅಖಿಲೇಶ್‌ ಭಾವನಾತ್ಮಕ ವಿದಾಯ

|
Google Oneindia Kannada News

ಲಕ್ನೋ, ಅಕ್ಟೋಬರ್ 12: ಸಮಾಜವಾದಿ ನಾಯಕ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯನ್ನು ಮೈನ್‌ಪುರಿ ಜಿಲ್ಲೆಯ ಸೈಫೈನಲ್ಲಿ(ಮುಲಾಯಂ ಜನ್ಮಸ್ಥಳ) ಮಂಗಳವಾರ ನೇರವೇರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ತಂದೆಯ ಅಂತ್ಯಸಂಸ್ಕಾರ ನಡೆದ ಒಂದು ದಿನದ ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭಾವನಾತ್ಮಕ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ನೊಂದಿಗೆ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.

ಅಪ್ಪನ ಶವಸಂಸ್ಕಾರ ನಡೆದ ಜಾಗದ ಮುಂದೆ ನಿಂತಿರುವ ಎರಡು ಫೋಟೊಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸೂರ್ಯನಿಲ್ಲದ ಮುಂಜಾವು ಉದಯಿಸಿದಂತೆ ಭಾಸವಾಗುತ್ತಿದೆ ಎಂದು ನೋವು ಹಂಚಿಕೊಂಡಿದ್ದಾರೆ.

ಹಿಂದಿಯಲ್ಲಿ ಟ್ವೀಟಿಸಿರುವ ಅವರು, 'ಆಜ್‌ ಪೆಹಲಿ ಬಾರ್‌ ಲಗಾ... ಬಿನ್‌ ಸೂರಜ್‌ ಕೆ ಉಗಾ ಸವೇರಾ (ಸೂರ್ಯನಿಲ್ಲದೇ ಮುಂಜಾವು ಉದಯಿಸಿದೆ... ಇಂದು ಮೊದಲ ಬಾರಿ ಹೀಗನ್ನಿಸಿದೆ)' ಎಂದು ಹೇಳಿದ್ದಾರೆ.

ಮೂರು ಬಾರಿ ಮುಖ್ಯಮಂತ್ರಿ ಹಾಗೂ ಕೇಂದ್ರ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿರುವ 82 ವರ್ಷದ ಮುಲಾಯಂ ಸಿಂಗ್ ಯಾದವ್ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗುರುಗ್ರಾಮದ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಮುಲಾಯಂ ಸಿಂಗ್‌ ಯಾದವ್‌ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ರಾಷ್ಟ್ರದ ಪ್ರಮುಖ ನಾಯಕರು ಭಾಗವಹಿಸಿದ್ದರು.

Mulayam Singh Yadav Samajwadi Party chief Akhilesh Yadav posted emotional tweet

'ನೇತಾಜಿ ಅಮರ್ ರಹೇ' ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ, ಸರ್ಕಾರಿ ಗೌರವಗಳೊಂದಿಗೆ ಮುಲಾಯಂ ಅವರಿಗೆ ಅಂತಿಮ ವಿದಾಯ ಹೇಳಲಾಯಿತು.

ಪ್ರಧಾನಿ ಮೋದಿ ಪರವಾಗಿ ಮುಲಾಯಂ ಸಿಂಗ್‌ ಪಾರ್ಥೀವ ಶರೀರಕ್ಕೆ ಪುಷ್ಪಾರ್ಚನೆ ಮಾಡಿದ ರಾಜನಾಥ್‌ ಸಿಂಗ್‌, 'ನಾವು ಗಾಢವಾದ ಸಂಬಂಧ ಹೊಂದಿದ್ದೆವು. ಭಾರತದ ರಾಜಕಾರಣದಲ್ಲಿ ಮುಲಾಯಂ ಮಹಾನ್‌ ನಾಯಕರಾಗಿದ್ದರು. ಇಂದು ದೇಶಕ್ಕೆ ದೊಡ್ಡ ನಷ್ಟವಾಗಿದೆ' ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಹಾಗೂ ಬ್ರಜೇಶ್ ಪಾಠಕ್ ಅವರು ಅಂತ್ಯಕ್ರಿಯೆ ವೇಳೆ ಉಪಸ್ಥಿತರಿದ್ದರು.

ಮುಲಾಯಂ ಅವರ ಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಅಭಿಮಾನಿಗಳು 'ನೇತಾಜಿ ಅಮರ್ ರಹೇ' ಎಂಬ ಘೋಷಣೆಯನ್ನು ಕೂಗುತ್ತಿದ್ದರು. ಕೆಲವರು ತಮ್ಮ ನೆಚ್ಚಿನ ನಾಯಕನನ್ನು ನೆನೆದು ಕಣ್ಣೀರು ಇಡುವುದು ಕಂಡುಬಂದಿತು.

1970ರಲ್ಲಿ ಸಮಾಜವಾದಿ ನಾಯಕ ರಾಮ್‌ ಮನೋಹರ್‌ ಲೋಹಿಯಾ ಅವರ ಚಿಂತನೆಗಳಿಗೆ ಆಕರ್ಷಿತರಾದ ಮುಲಾಯಂ, ಜನತಾ ಪರಿವಾರದ ಅಗ್ರ ನಾಯಕರಾಗಿ ಬೆಳೆದರು. 1990 ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದ ಅವರು, ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.

ಮುಲಾಯಂ ಅವರ ಹಿರಿಯ ಮಗ ಅಖಿಲೇಶ್‌ ಯಾದವ್‌ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಉತ್ತರ ಪ್ರದೇಶದ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
Mulayam Singh Yadav Death: Samajwadi Party Leader Akhilesh Yadav Shares Pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X