Madhya Pradesh Assembly Elections 2023: ಸಿಎಂ ಚೌಹಾಣ್ ವಿರುದ್ಧ 'ಹನುಮಾನ್' ಸ್ಪರ್ಧೆ!
ಭೋಪಾಲ್ ಅಕ್ಟೋಬರ್ 16: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ತಯಾರಿ ರಂಗೇರುತ್ತಿದೆ. ಹೈವೋಲ್ಟೇಜ್ ಆಗಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ತನ್ನ ಅಭ್ಯಾರ್ಥಿಯ ಹೆಸರನ್ನು ಘೋಷಣೆ ಮಾಡಿದೆ. ಜನಪ್ರಿಯ ನಟ ವಿಕ್ರಮ್ ಮಸ್ತಲ್ ಅವರನ್ನು ಕಾಂಗ್ರೆಸ್ ಮಧ್ಯಪ್ರದೇಶ ಸಿಎಂ ವಿರುದ್ಧ ಕಣಕ್ಕಿಳಿಸಿದೆ. ಹೀಗಾಗಿ ಈ ಬಾರಿಯ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟು ಹಾಕಿದೆ.
ಆನಂದ್ ಸಾಗರ್ ಅವರ 2008ರ ದೂರದರ್ಶನ ಕಾರ್ಯಕ್ರಮ ರಾಮಾಯಣದಲ್ಲಿ ಹನುಮಾನ್ ಪಾತ್ರವನ್ನು ಮಾಡುವ ಮೂಲಕ ವಿಕ್ರಮ್ ಮಸ್ತಲ್ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಪ್ರಕಟಿಸಿದೆ.

ಈ ಪಟ್ಟಿಯಲ್ಲಿ ಮಧ್ಯಪ್ರದೇಶದಲ್ಲಿ ಚಿಂದ್ವಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮತ್ತು ಪಿಸಿಸಿ ಮುಖ್ಯಸ್ಥ ಕಮಲ್ ನಾಥ್ ಅವರನ್ನು ಕಣಕ್ಕಿಳಿಸಿತು. ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ರಘೀಗತ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇವರು ಕಳೆದ ಕಮಲ್ ನಾಥ್ ಸರ್ಕಾರದಲ್ಲಿ ಸಚಿವರಾಗಿದ್ದರು. ಬುಧ್ನಿ ಕ್ಷೇತ್ರದಲ್ಲಿ ಚೌಹಾಣ್ ವಿರುದ್ಧ ವಿಕ್ರಮ್ ಮಸ್ತಲ್ ಕಣಕ್ಕಿಳಿಯಲಿದ್ದಾರೆ.
ರಾಜ್ಯದ ಮಾಜಿ ರಾಜ್ಯಸಭಾ ಸದಸ್ಯೆ ಹಾಗೂ ಸಚಿವೆ ವಿಜಯ್ ಲಕ್ಷ್ಮಿ ಸಾಧೋ ಅವರನ್ನು ಮಹೇಶ್ವರ್-ಎಸ್‌ಸಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಮಾಜಿ ಕ್ಯಾಬಿನೆಟ್ ಸಚಿವ ಜಿತು ಪಟ್ವಾರಿ ಅವರನ್ನು ರಾವು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಪಟ್ಟಿಯಲ್ಲಿ ಸಾಮಾನ್ಯ ವರ್ಗದಿಂದ 47, ಒಬಿಸಿ ವರ್ಗದಿಂದ 39, ಎಸ್‌ಟಿ ವರ್ಗದಿಂದ 30, ಎಸ್‌ಸಿ ವರ್ಗದಿಂದ 22, ಒಬ್ಬ ಮುಸ್ಲಿಂ ಮತ್ತು 19 ಮಹಿಳೆಯರು ಸೇರಿದ್ದಾರೆ. ಅರವತ್ತೈದು ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಬಿಜೆಪಿ ಈಗಾಗಲೇ ಮಧ್ಯಪ್ರದೇಶದ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, 230 ಸ್ಥಾನಗಳ ಪೈಕಿ 136 ಸ್ಥಾನಗಳ ಪಟ್ಟಿಯನ್ನು ಹೊಂದಿದೆ.
ಮಧ್ಯಪ್ರದೇಶ ತನ್ನ 230 ಕ್ಷೇತ್ರಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನವೆಂಬರ್ 17 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ಮುಂಬರುವ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕನಿಷ್ಠ ನಾಲ್ವರು ಬಿಜೆಪಿ ನಾಯಕರು ಇದ್ದಾರೆ. ಅವರೆಂದರೆ ಅವಧೇಶ್ ನಾಯಕ್ (ದಾಟಿಯಾ), ರಾವ್ ಯದ್ವೇಂದ್ರ ಸಿಂಗ್ (ಮುಂಗೋಲಿ), ಬಿಜೆಪಿಯ ಮಾಜಿ ಸಂಸದ ಬೋಧ್ ಸಿಂಗ್ ಭಗತ್ (ಕಟಾಂಗಿ), ಮತ್ತು ನೀರಜ್ ಶರ್ಮಾ (ಸುರ್ಖಿ). ಮಾಜಿ ಸ್ಪೀಕರ್ ಎನ್‌ಪಿ ಪ್ರಜಾಪತಿ ಸೇರಿದಂತೆ ಮೂವರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.












Click it and Unblock the Notifications