Inspiring Story: ಮಗಳ ಚೆಸ್ ಕನಸಿಗಾಗಿ 50 ಲಕ್ಷ ರೂ. ಸಂಬಳದ ಕೆಲಸ ಬಿಟ್ಟ ಅಮ್ಮ
ತನ್ನ ಮಕ್ಕಳ ಭವಿಷ್ಯಕ್ಕಾಗಿ ತಾಯಿಯೊಬ್ಬಳು ಎಂತಹ ತ್ಯಾಗಕ್ಕಾದರೂ ಸಿದ್ಧಳಾಗಿರುತ್ತಾಳೆ ಎನ್ನುವುದಕ್ಕೆ ಇಲ್ಲೊಂದು ಒಳ್ಳೇಯ ಉದಾಹರಣೆಯಿದೆ ನೋಡಿ. ಮಗಳ ಚೆಸ್ ಆಟದ ಒಲವು ಹಾಗೂ ಆಕೆಯ ಕನಸಿಗೆ ಬೆನ್ನೆಲುಬಾಗಿ ನಿಲ್ಲಲು ತಾಯಿಯೊಬ್ಬಳು ವಾರ್ಷಿಕ 50 ಲಕ್ಷ ರೂಪಾಯಿ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನೇ ಬಿಟ್ಟಿದ್ದಾರೆ.
ಅಷ್ಟೇ ಅಲ್ಲ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಚೆಸ್ ಕ್ರೀಡೆಗೆ ಉತ್ತಮ ವಾತಾವರಣವೇ ಇಲ್ಲ ಎನ್ನುವ ಕೊರತೆಯನ್ನ ನೀಗಿಸಿ, ಇಂದು ಚೆಸ್ ಕ್ರಾಂತಿಯನ್ನೇ ಹುಟ್ಟುಹಾಕಿದ್ದಾರೆ. ಆ ತಾಯಿಯೇ ನಿಧಿ ಭಾಸಿನ್ ರೋಹಿಲ್ಲಾ.

ನಿಧಿ ಅವರ ಹಿರಿಯ ಪುತ್ರಿ ಶಿವಿಕಾ ರೋಹಿಲ್ಲಾ 2013ರಲ್ಲಿ ಆರನೇ ವಯಸ್ಸಿನಲ್ಲಿಯೇ ಚೆಸ್ ಆಡಲು ಆರಂಭಿಸಿದ್ದರು. ಕೇವಲ ಆರು ತಿಂಗಳ ಅವಧಿಯಲ್ಲಿಯೇ ದೆಹಲಿ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದರು.
ವೃತ್ತಿಯಲ್ಲಿ ದಂತ ವೈದ್ಯೆಯಾಗಿದ್ದರೂ, ಕಾರ್ಪೊರೇಟ್ ವಲಯದಲ್ಲಿ ಸೇಲ್ಸ್ ವಿಭಾಗದಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದ ನಿಧಿ ಅವರಿಗೆ, ಮಗಳಲ್ಲಿರುವ ಪ್ರತಿಭೆ ಅರಿವಿಗೆ ಬಂದಿತ್ತು. ಆದರೆ ದೆಹಲಿಯಲ್ಲಿ ಉತ್ತಮ ಚೇಸ್ ತರಬೇತುದಾರರ ಕೊರತೆ ಇತ್ತು.
ಅಲ್ಲದೇ ಮಗಳು ಟೂರ್ನಿಗಳಲ್ಲಿ ಭಾಗವಹಿಸಲು ವಿದೇಶಗಳಿಗೂ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಯಿತು. ಈ ಸಂದರ್ಭದಲ್ಲಿ ತನ್ನ ವೃತ್ತಿಜೀವನ ಅಥವಾ ಮಗಳ ಚೆಸ್ ಭವಿಷ್ಯ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿಧಿ ಅವರಿಗೆ ಎದುರಾಯಿತು. ಮಗಳಿಗಾಗಿ ಹಿಂದೆ- ಮುಂದೆ ಯೋಚಿಸದ ನಿಧಿ 50 ಲಕ್ಷ ರೂಪಾಯಿ ಪ್ಯಾಕೇಜ್‌ನ ಉದ್ಯೋಗಕ್ಕೆ ರಿಸೈನ್ ಮಾಡಿದರು.
ಚೆಸ್ ಕಾಫಿ ಕನೆಕ್ಟ್ ಆರಂಭ
ದಕ್ಷಿಣ ಭಾರತದಲ್ಲಿ ಚೆಸ್ ಕ್ರೀಡೆಗೆ ಇರುವಂತಹ ಪೂರಕ ವಾತಾವರಣ, ಬೆಂಬಲ ದೆಹಲಿಯಲ್ಲಿ ಇರಲಿಲ್ಲ. ಅಭ್ಯಾಸ ಪಂದ್ಯಗಳನ್ನ ಆಡಲು ಗ್ರ್ಯಾಂಡ್‌ಮಾಸ್ಟರ್‌ಗಳ ಕೊರತೆ ಇತ್ತು. ಇದನ್ನು ಮನಗಂಡ ನಿಧಿ, ಎಸ್.ಆರ್. ಚೆಸ್ ಅಕಾಡೆಮಿ (SRCA) ಹಾಗೂ 'ಚೆಸ್ ಕಾಫಿ ಕನೆಕ್ಟ್' ಎಂಬ ಅಭಿಯಾನವನ್ನ ಶುರು ಮಾಡಿದರು.
ಕೆಫೆಗಳಲ್ಲಿ ಆಟಗಾರರು ಭೇಟಿಯಾಗಿ ಚೆಸ್ ಆಡುವ, ತಪ್ಪುಗಳನ್ನ ತಿದ್ದಿಕೊಳ್ಳುವ ಹಾಗೂ ಪರಸ್ಪರ ಬೆಂಬಲಿಸುವ ಸಮುದಾಯವನ್ನ ಕಟ್ಟಿದರು. ಕೇವಲ ಇಬ್ಬರು-ಮೂವರು ಮಕ್ಕಳಿಂದ ಶುರುವಾದ ಈ ಅಕಾಡೆಮಿಯಲ್ಲಿ ಇಂದು 80ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಪ್ರತಿ ತಿಂಗಳು 8 ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಟೂರ್ನಿಗಳನ್ನ ಆಯೋಜಿಸಲಾಗುತ್ತಿದ್ದು, 16 ವೇತನ ಪಡೆಯುವ ಸಿಬ್ಬಂದಿ ಹಾಗೂ 100ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಉತ್ತರ ಭಾರತದಲ್ಲಿ ಚೆಸ್ ಕ್ರಾಂತಿ
ನಿಧಿ ಅವರ ಈ ಪ್ರಯತ್ನ ಕೇವಲ ವೃತ್ತಿಪರ ಆಟಗಾರರಿಗಷ್ಟೇ ಸೀಮಿತವಾಗಿಲ್ಲ. ತಂದೆಯ ಬೆಂಬಲವಿಲ್ಲದ ಹೆಣ್ಣುಮಕ್ಕಳಿಗೆ ಉಚಿತ ಪ್ರವೇಶ, ಹಿರಿಯ ನಾಗರಿಕರಿಗೆ ರಿಯಾಯಿತಿ ಹಾಗೂ ಎನ್‌ಜಿಒ ಮೂಲಕ ಬಡ ಮಕ್ಕಳಿಗೆ ಉಚಿತ ತರಬೇತಿ ಹಾಗೂ ಪುಸ್ತಕಗಳನ್ನ ನೀಡಲಾಗುತ್ತಿದೆ.
ಅನೇಕ ವರ್ಷಗಳಿಂದ ಚೆಸ್ ಆಡದ ಹಿರಿಯ ನಾಗರಿಕರು ಈಗ ಮತ್ತೆ ಆಟದತ್ತ ಮುಖ ಮಾಡಿದ್ದಾರೆ. ದೃಷ್ಟಿಹೀನ ಹಾಗೂ ದೃಷ್ಟಿಯುಳ್ಳ ಆಟಗಾರರ ನಡುವಿನ ಪಂದ್ಯಗಳನ್ನೂ ಆಯೋಜಿಸಿ ಗಮನ ಸೆಳೆಯಲಾಗಿದೆ.
ಪ್ರಾಯೋಜಕತ್ವದ ಕೊರತೆಯ ನಡುವೆಯೂ ನಿಧಿ ತಮ್ಮ ಸ್ವಂತ ಹಣದಿಂದಲೇ ಇಷ್ಟು ದೊಡ್ಡ ಸಂಸ್ಥೆಯನ್ನ ಮುನ್ನಡೆಸುತ್ತಿದ್ದಾರೆ. ಇದರ ಫಲವಾಗಿ, ಅವರ ಪುತ್ರಿ ಶಿವಿಕಾ ಇಂದು ವುಮನ್ ಇಂಟರ್ನ್ಯಾಷನಲ್ ಮಾಸ್ಟರ್ ಆಗಿ ಹೊರಹೊಮ್ಮಿದ್ದು, ಲಂಡನ್‌ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಲೇ ಚೆಸ್ ಟೂರ್ನಿಗಳಲ್ಲಿ ವಿನ್ ಆಗುತ್ತಿದ್ದಾರೆ.
ಜೊತೆಗೆ ಚೆಸ್ ಕಾಫಿ ಕನೆಕ್ಟ್ ಲಂಡನ್‌ನಲ್ಲೂ ಎಂಟು ರೇಟೆಡ್ ಟೂರ್ನಿಗಳನ್ನ ಆಯೋಜಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದು ತಾಯಿಯ ನಿಸ್ವಾರ್ಥ ತ್ಯಾಗ, ಇಂದು ಸಾವಿರಾರು ಮಕ್ಕಳ ಚೆಸ್ ಕನಸಿಗೆ ವೇದಿಕೆಯಾಗಿದೆ.


Click it and Unblock the Notifications
